ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ತ‍ಪ್ಪು ನಿರ್ಣಯಗಳಿಂದ ಸೋಲು’

Published 5 ಜೂನ್ 2024, 15:00 IST
Last Updated 5 ಜೂನ್ 2024, 15:00 IST
ಅಕ್ಷರ ಗಾತ್ರ

ಗೋಕಾಕ (ಬೆಳಗಾವಿ ಜಿಲ್ಲೆ): ‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳಿಂದ ಬೆಳಗಾವಿಯಲ್ಲಿ ಮೃಣಾಲ್‌ ಹೆಬ್ಬಾಳಕರ ಸೋತರು’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

‘ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಬೇರುಗಳನ್ನು ನಾವು ಸರಿಯಾಗಿ ಅರ್ಥ ಮಾಡಿಕೊಂಡಿದ್ದರಿಂದ ಪ್ರಿಯಾಂಕಾ ಜಾರಕಿಹೊಳಿ ಗೆದ್ದರು. ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ವಾಸ್ತವ ಅರ್ಥ ಮಾಡಿಕೊಳ್ಳುವಲ್ಲಿ ಮತ್ತು ವಿರೋಧಿಗಳ ತಂತ್ರ ಅರಿಯವಲ್ಲಿ ನಾಯಕರು ವಿಫಲರಾದರು. ಅತಿ ಆತ್ಮವಿಶ್ವಾಸ ಮುಳುವಾಯಿತು. ಸಚಿವೆ ಲಕ್ಷ್ಮಿ ಅವರು ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲೂ ಮೃಣಾಲ್ ಅವರಿಗೆ 50,529 ಮತಗಳ ಹಿನ್ನಡೆ ಆಗಿದೆ’ ಎಂದು ಅವರು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಬೆಳಗಾವಿ ಕ್ಷೇತ್ರದಲ್ಲಿ 5 ಲಕ್ಷಕ್ಕೂ ಹೆಚ್ಚು ಲಿಂಗಾಯತ ಮತದಾರರು ಇದ್ದಾರೆ. ಅವರು ನಮ್ಮ ಮಾತು ಕೇಳುವರೇ? ಅವರು ಮನಸ್ಸು ಮಾಡಿದ್ದರೆ ಮೃಣಾಲ್‌ ಗೆಲ್ಲಿಸಬಹುದಿತ್ತು. ಸಮುದಾಯದ ಮತದಾರರ ಒಲವು ತಿಳಿಯಲು ನಾಯಕರಿಗೆ ಸಾಧ್ಯವಾಗಲಿಲ್ಲ. ಚುನಾವಣೆಯಲ್ಲಿ ತಂತ್ರ ರೂಪಿಸುವ ಮುನ್ನ, ಮತದಾರರ ಒಲವು ಯಾವ ಕಡೆ ಇದೆ ಎಂದು ಅರಿಯಬೇಕು. ಗುಪ್ತಚರ ಮಾಹಿತಿ ಸಂಗ್ರಹಿಸಬೇಕು. ನಾವು ಮಾಡುತ್ತಿರುವ ತಪ್ಪು ಸರಿಪಡಿಸಿಕೊಂಡು, ಅದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕ ಜೀವನದಲ್ಲಿ ಬಹಳ ಸೂಕ್ಷ್ಮವಾಗಿ ಇರಬೇಕು’ ಎಂದರು.

‘ಮೃಣಾಲ್‌ ಸೋಲಿಗೆ ಸಹೋದರರಾದ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಕಾರಣರಲ್ಲ. ಅವರು ಲಕ್ಷ್ಮಿ ಹೆಬ್ಬಾಳಕರ ಪ್ರತಿನಿಧಿಸುವ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿಲ್ಲ’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲದಿರಲು ನಮ್ಮ ನಾಯಕರ ಅತಿಯಾದ ಆತ್ಮವಿಶ್ವಾಸ ಕಾರಣ’ ಎಂದು ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

‘ನಿರ್ದೇಶಕ ಮತ್ತು ನಿರ್ಮಾಪಕ ವಿಫಲರಾದರೆ ಸಿನಿಮಾ ಸೋಲುತ್ತದೆ. ನಮ್ಮ ನಾಯಕರು ಕೆಲ ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ’ ಎಂದು ವಿಶ್ಲೇಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT