ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆ– ಬಿಜೆಪಿ ವಿಚಲಿತ: ಸತೀಶ‌ ಜಾರಕಿಹೊಳಿ

ಬೆಳಗಾವಿಯಿಂದ ಕಾರ್ಯಾಚರಣೆ ನಡೆಸಬೇಕಿದ್ದ ವಿಮಾನಗಳು ಹುಬ್ಬಳ್ಳಿಗೆ ಹೋಗಿವೆ.
Published 4 ಜೂನ್ 2023, 13:10 IST
Last Updated 4 ಜೂನ್ 2023, 13:10 IST
ಅಕ್ಷರ ಗಾತ್ರ

ಬೆಳಗಾವಿ: ‘ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಜಾರಿಗೊಳಿಸಿದ ಐದು ಗ್ಯಾರಂಟಿ ಯೋಜನೆಗಳಿಂದ ಬಿಜೆಪಿಯವರು ವಿಚಲಿತರಾಗಿದ್ದಾರೆ. ಈ ವಿಷಯ ಮರೆಮಾಚಲು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಆದರೆ, ಅವರ ಬಯಕೆ ಎಂದಿಗೂ ಈಡೇರುವುದಿಲ್ಲ’ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ‌ ಜಾರಕಿಹೊಳಿ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದಲ್ಲಿದ್ದ ಜನಪರ ಯೋಜನೆಗಳನ್ನು ಮುಂದುವರೆಸುತ್ತೇವೆ. ಅನಗತ್ಯವಾದ ಯೋಜನೆ ಸ್ಥಗಿತಗೊಳಿಸುತ್ತೇವೆ. ಈಗ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತೇವೆ’ ಎಂದು ತಿಳಿಸಿದರು.

ಬೆಳಗಾವಿಗೆ ಬರಬೇಕಿದ್ದ ಯೋಜನೆಗಳು ಹುಬ್ಬಳ್ಳಿ–ಧಾರವಾಡ ಪಾಲಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸತೀಶ, ‘ಬೆಳಗಾವಿಯಿಂದ ಕಾರ್ಯಾಚರಣೆ ನಡೆಸಬೇಕಿದ್ದ ವಿಮಾನಗಳು ಹುಬ್ಬಳ್ಳಿಗೆ ಹೋಗಿವೆ. ಇದಕ್ಕೆ ಬಿಜೆಪಿ ಸಚಿವರೊಬ್ಬರು ಕಾರಣ. ಬೆಳಗಾವಿಗೆ ಹೆಚ್ಚಿನ ವಿಮಾನಗಳನ್ನು ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಇದಕ್ಕಾಗಿ ಶೀಘ್ರ ಸಭೆ ಕರೆಯಲಾಗುವುದು’ ಎಂದರು.

‘ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಿದರೆ ಉಗ್ರ ಹೋರಾಟ ಮಾಡುತ್ತೇವೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಮುಂದಿನ ಐದು ವರ್ಷ ಹೋರಾಟ ಬಿಟ್ಟರೆ ಅವರಿಗೆ ಇನ್ನೇನು ಕೆಲಸವಿದೆ? ಹೋರಾಟ ಹೋರಾಟ ಗೆಲ್ಲುವವರೆಗೆ ಹೋರಾಟ... ಎಂಬ ಫಲಕವನ್ನು ಬರೆದಿಡಬೇಕು. ಅವರಿಗೆ ಅಭಿವೃದ್ಧಿಯಂತೂ ಗೊತ್ತಿಲ್ಲ. ಕೋಮು ದ್ವೇಷ ಹರಡುವುದು, ಗಲಾಟೆ ಮಾಡುವುದು ಮತ್ತು ಒಬ್ಬರ ವಿರುದ್ಧ ಮತ್ತೊಬ್ಬರನ್ನು ಎತ್ತಿ ಕಟ್ಟುವುದೇ ಬಿಜೆಪಿಯವರ ಕೆಲಸ’ ಎಂದು ತಿರುಗೇಟು ಕೊಟ್ಟರು.

‘ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು?’ ಎಂಬ ಪಶುಸಂಗೋಪನಾ ಇಲಾಖೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ, ‘ಸಚಿವರ ಹೇಳಿಕೆ ಕುರಿತು ಸದನದಲ್ಲಿ ಚರ್ಚಿಸಲು ಅವಕಾಶವಿದೆ. ಸಾಧಕ–ಬಾಧಕ ಅಂಶಗಳನ್ನು ಪರಿಗಣಿಸಿ, ನಂತರ ನಿರ್ಣಯ ಕೈಗೊಳ್ಳಲಾಗುತ್ತದೆ. ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲೂ ಸರ್ಕಾರ ಯೋಗ್ಯ ನಿರ್ಣಯ ತೆಗೆದುಕೊಳ್ಳಲಿದೆ’ ಎಂದರು.

‘ತಾವು ಅಧಿಕಾರದಲ್ಲಿದ್ದಾಗ ಬಿಜೆಪಿಯವರು ಉತ್ತಮ ಕೆಲಸ ಮಾಡಲಿಲ್ಲ. ಈಗ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಈಗ ನಮ್ಮ ಪಕ್ಷದವರು ಏನೇ ಹೇಳಿಕೆ ಕೊಟ್ಟರೂ ದುರುದ್ದೇಶದಿಂದ ವಿರೋಧಿಸುವುದು ಸರಿಯಲ್ಲ’ ಎಂದು ತಿವಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT