ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಹೊಸ ತಾಲ್ಲೂಕು ರಚನೆ ಶೀಘ್ರ: ಸತೀಶ ಜಾರಕಿಹೊಳಿ

Published 15 ಆಗಸ್ಟ್ 2023, 7:20 IST
Last Updated 15 ಆಗಸ್ಟ್ 2023, 7:20 IST
ಅಕ್ಷರ ಗಾತ್ರ

ಬೆಳಗಾವಿ: ‘ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರುವುದಕ್ಕಾಗಿ ಬೆಳಗಾವಿ ತಾಲ್ಲೂಕು ವಿಭಜನೆಗೆ ಸರ್ಕಾರ ತೀರ್ಮಾನ ಕೈಗೊಂಡಿದೆ. ಹೊಸ ತಾಲ್ಲೂಕನ್ನು ಶೀಘ್ರ ಘೋಷಿಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಳಗಾವಿ ತಾಲೂಕು ಭೌಗೋಳಿಕವಾಗಿ ದೊಡ್ಡದಾಗಿದೆ. ಬೆಳಗಾವಿ ಉತ್ತರ, ದಕ್ಷಿಣ ಅಥವಾ ಗ್ರಾಮೀಣ ಪೈಕಿ, ಯಾವ ಕ್ಷೇತ್ರದಲ್ಲಾದರೂ ಹೊಸ ತಾಲ್ಲೂಕು ರಚನೆಯಾಗಬಹುದು. ಅದರ ವ್ಯಾಪ್ತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳೇ ನಿರ್ಧರಿಸುತ್ತಾರೆ. ಈ ವೇಳೆ ಜನರ ಅನುಕೂಲತೆ ಪರಿಗಣಿಸಲಾಗುವುದು. ಎರಡೂ ತಾಲ್ಲೂಕು ನಗರಕ್ಕೆ ಹೊಂದಿಕೊಂಡೇ ಇರಲಿವೆ’ ಎಂದು ತಿಳಿಸಿದರು.

‘ಬೆಳಗಾವಿ ಜಿಲ್ಲಾ ವಿಭಜನೆಗೆ ಒತ್ತಡ ಇದ್ದೇ ಇದೆ. ಬೆಂಗಳೂರಿನಲ್ಲಿ ಈಚೆಗೆ ನಡೆದ ಪಕ್ಷದ ಶಾಸಕರ ಸಭೆಯಲ್ಲೂ ಗೋಕಾಕ ಮತ್ತು ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಳ ರಚನೆ ವಿಚಾರ ಚರ್ಚೆಯಾಗಿದೆ. ಬೆಳಗಾವಿ ವಿಭಜಿಸುವಂತೆ ನಾವೂ ಆಗ್ರಹಿಸಿದ್ದೇವೆ. ಈ ಬಗ್ಗೆ ಸರ್ಕಾರ ಅಂತಿಮವಾಗಿ ನಿರ್ಧಾರ ಕೈಗೊಳ್ಳುತ್ತದೆ’ ಎಂದ ಅವರು, ‘ಬೆಳಗಾವಿಯನ್ನು ಎರಡನೇ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

‘ಬಿಜೆಪಿ ಸರ್ಕಾರದ ನೀತಿಗಳಿಂದಾಗಿ ರಾಜ್ಯದಲ್ಲಿ ಗುತ್ತಿಗೆದಾರರ ಬಿಲ್‌ ಬಾಕಿ ಉಳಿದಿದೆ. ಲೋಕೋಪಯೋಗಿ ಇಲಾಖೆಯಲ್ಲಿ ₹6,000 ಕೋಟಿ ಬಾಕಿ ಇದೆ. ಟೆಂಡರ್ ನಿಯಮಗಳ ಪ್ರಕಾರ ಒಂದು ಬಾರಿಗೆ ಮೂರನೇ ಒಂದು ಭಾಗದಷ್ಟು(ಶೇ.33) ಬಿಲ್‌ ಕೊಡಬೇಕಿದ್ದು, ಗುತ್ತಿಗೆದಾರರ ಬಾಕಿ ಪಾವತಿಗೆ ಎರಡರಿಂದ ಮೂರು ವರ್ಷ ಬೇಕಾಗುತ್ತದೆ. ಈ ಬಿಲ್‌ಗಳನ್ನು ಕಾಂಗ್ರೆಸ್ ಸರ್ಕಾರ ತಡೆಹಿಡಿದಿಲ್ಲ. ಆದರೆ, ಬಿಲ್‌ ಕೊಡುವ ಮುನ್ನ ಕಾಮಗಾರಿಗಳನ್ನು ಪರಿಶೀಲಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಿರ್ಮಾಣ ಹಂತದಲ್ಲಿರುವ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರ ಹೆಚ್ಚುವರಿಯಾಗಿ ₹70 ಕೋಟಿ ಅನುದಾನ ಮಂಜೂರುಗೊಳಿಸಿದೆ. ಮುಂದಿನ ಆರು ತಿಂಗಳಲ್ಲಿ ಇದು ಕಾರ್ಯಾರಂಭ ಮಾಡುವ ನಿರೀಕ್ಷೆ ಇದ್ದು, ವೈದ್ಯಕೀಯ ಸಲಕರಣೆ ಮತ್ತು ಸಿಬ್ಬಂದಿ ಒದಗಿಸಲಾಗುವುದು’ ಎಂದರು.

‘ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮಂಡಿಸಿದ್ದ ಬಜೆಟ್‌ನ ಹಣವನ್ನು ಸರ್ಕಾರ ಬೇರೆಡೆ ತಿರುಗಿಸಿಲ್ಲ’ ಎಂದು ಸ್ಪಷ್ಟಪಡಿಸಿದ ಸತೀಶ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ಮಂಡಿಸಿದ ಬಜೆಟ್‌ನಲ್ಲಿ ರಾಜ್ಯದ ಸಂಪನ್ಮೂಲಗಳಿಂದ ₹40,000 ಕೋಟಿ ಹಣವನ್ನು ಐದು ಗ್ಯಾರಂಟಿ ಯೋಜನೆಗಳಿಗೆ ಒದಗಿಸಿದ್ದಾರೆ’ ಎಂದು ತಿಳಿಸಿದರು.

ನಿಪ್ಪಾಣಿ ನಗರಸಭೆ ಮೇಲೆ ಎನ್‌ಸಿಪಿ ಬೆಂಬಲಿತ ಸದಸ್ಯರು ಭಗವಾ ಧ್ವಜ ಹಾರಿಸಲು ಯತ್ನಿಸಿದ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಸತೀಶ, ‘ಸ್ವಾತಂತ್ರ್ಯ ದಿನಾಚರಣೆಯಂದು ರಾಷ್ಟ್ರಧ್ವಜ ಹೊರತುಪಡಿಸಿದರೆ, ಬೇರೆ ಯಾವುದೇ ಧ್ವಜ ಹಾರಿಸಲು ಅವಕಾಶವಿಲ್ಲ. ಈ ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ. ರಾಷ್ಟ್ರಧ್ವಜ ಹಾರಿಸಿದ ನಂತರ ಭಗವಾ ಧ್ವಜ ಹಾರಿಸಲು ಯತ್ನಿಸಿದವರ ವಿರುದ್ಧ ಜಿಲ್ಲಾ ಪೊಲೀಸರು ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT