ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಪ್ರಭೆ ಮಡಿಲಲ್ಲಿ ಹರಿದ ಭಕ್ತಿಯ ಹೊಳೆ

‘ಎಲ್ಲರ ಅಮ್ಮ’ ಯಲ್ಲಮ್ಮ ದೇವಿ ಸ್ತುತಿಸಿದ ಭಕ್ತರು, ವ್ಯಾಪಾರಸ್ಥರ ಮೊಗದಲ್ಲೂ ಮಂದಹಾಸ
Published 24 ಫೆಬ್ರುವರಿ 2024, 13:01 IST
Last Updated 24 ಫೆಬ್ರುವರಿ 2024, 13:01 IST
ಅಕ್ಷರ ಗಾತ್ರ

ಯಲ್ಲಮ್ಮನಗುಡ್ಡ(ಬೆಳಗಾವಿ ಜಿಲ್ಲೆ): ಮಲಪ್ರಭೆ ಮಡಿಲಲ್ಲಿರುವ ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಭಾರತ ಹುಣ್ಣಿಮೆ ಜಾತ್ರೆ ಪ್ರಯುಕ್ತ ಶನಿವಾರ ಭಕ್ತಿಯ ಹೊಳೆಯೇ ಹರಿಯಿತು.
ಒಂದೆಡೆ ಅಲಂಕೃತ ಬಂಡಿಗಳ ಸಾಲು, ಮತ್ತೊಂದೆಡೆ ಪಾದಯಾತ್ರೆ ಮೂಲಕ ಅಮ್ಮನ ಸನ್ನಿಧಿಯತ್ತ ಹೆಜ್ಜೆಹಾಕಿದ ಯಾತ್ರಾರ್ಥಿಗಳು, ಇನ್ನೊಂದೆಡೆ ಪ್ರವಾಹದಂತೆ ಹರಿದುಬಂದ ಜನ, ಕಣ್ಮನ ಸೆಳೆದ ಜಾನಪದ ಕಲಾತಂಡಗಳ ಪ್ರದರ್ಶನ ಹೀಗೆ... ಸಾಲು ಸಾಲು ದೃಶ್ಯಗಳಿಗೆ ಏಳುಕೊಳ್ಳದ ನಾಡು ಸಾಕ್ಷಿಯಾಯಿತು.

ಹುಣ್ಣಿಮೆ ಅಂಗವಾಗಿ ಪೌರಾಣಿಕ, ಐತಿಹಾಸಿಕ ಮತ್ತು ಧಾರ್ಮಿಕವಾಗಿ ತ್ರಿವೇಣಿ ಸಂಗಮದಂತಿರುವ ಯಲ್ಲಮ್ಮನಗುಡ್ಡ ಕಳೆಗಟ್ಟಿತ್ತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಿಂದ ಅಪಾರ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು, ನಸುಕಿನ ಜಾವ 4ರಿಂದಲೇ ಸರದಿ ಸಾಲಿನಲ್ಲಿ ನಿಂತು ಯಲ್ಲಮ್ಮ ದೇವಿ ದರ್ಶನ ಪಡೆದರು. ಸಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಿದರು. ಕೆಲವರು ಉರುಳುಸೇವೆ, ದೀಡ್‍ನಮಸ್ಕಾರ ಹಾಕಿ ಹರಕೆ ತೀರಿಸಿದರು. ಜೋಗತಿಯರ ಚೌಡಕಿ ನಿನಾದ ಜನರನ್ನು ಭಕ್ತಿಯ ಅಲೆಯಲ್ಲಿ ತೇಲಿಸಿತು. ಗುಡ್ಡದ ತುಂಬೆಲ್ಲ ಭಂಡಾರದ ಮಳೆ ಸುರಿಯಿತು.

ವಿಜಯಪುರ, ಬಾಗಲಕೋಟೆ, ಗದಗ, ಕೊಪ್ಪಳ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ಆಗಮಿಸಿದ ಭಕ್ತರಲ್ಲಿ ಸಂತೃಪ್ತಭಾವ ಕಾಣುತ್ತಿತ್ತು. ‘ಯಲ್ಲವ್ವನ ನಮಗ ಬದುಕು. ಅಮ್ಮ ನಮ್ಮ ಬದುಕಿಗೆ ಏನು ಬೇಕೋ, ಅದನ್ನೆಲ್ಲ ಕರುಣಿಸ್ಯಾಳ. ಬನದ ಹುಣಿವ್ಯಾಗ ನನ್ನ ಮಗ ನಡ್ಕೊಂತ ಗುಡ್ಡಕ್ಕ ಬಂದಿದ್ದ. ಈ ಸಲ ನಾನು ಬಂದಿದ್ದಕ್ಕ ಖುಷಿಯಾಗೇತಿ’ ಎಂದು ಗದಗ ಜಿಲ್ಲೆಯ ರೋಣದ 62ರ ಹರೆಯದ ದಾನಪ್ಪ ಕಿರೇಸೂರ ಹೇಳಿದರು.

‘ನಾವ 10 ವರ್ಷದಿಂದ ಪಾದಯಾತ್ರೆ ಮೂಲಕ ಗುಡ್ಡಕ್ಕೆ ಬರುತ್ತಿದ್ದೇವೆ. ಇದರಿಂದಾಗಿ ಕೃಷಿಯಲ್ಲಿ ಏಳ್ಗೆಯಾಗಿದೆ. ಕೌಟುಂಬಿಕವಾಗಿಯೂ ಪ್ರಗತಿಯಾಗಿದೆ. ಹಾಗಾಗಿ ಈ ಸಲವೂ ಐದು ಮಂದಿ ಸೇರಿಕೊಂಡು, ದಿನಕ್ಕೆ 40 ಕಿ.ಮೀ ನಡೆಯುತ್ತ ಈಗ ಗುಡ್ಡಕ್ಕೆ ಬಂದಿದ್ದೇವೆ’ ಎನ್ನುತ್ತಾರೆ ಕೊಪ್ಪಳದ ಅಲ್ಲಾನಗರದ ಯಮನೂರಪ್ಪ ಕುಕನೂರ.

‘ಕೊರೊನಾ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಉತ್ತಮ ವ್ಯಾಪಾರವಾಗಿರಲಿಲ್ಲ. ಆದರೆ, ಈ ಬಾರಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಯಲ್ಲಿ ಭಕ್ತರು ಉತ್ಸಾಹದಿಂದ ಕುಂಕುಮ-ಭಂಡಾರ ಖರೀದಿಸಿದ್ದರಿಂದ ಉತ್ತಮ ವಹಿವಾಟು ನಡೆದಿದೆ’ ಎಂದು ವ್ಯಾಪಾರಿ ಮಾರುತಿ ರಾವಳ ಸಂತಸಪಟ್ಟರು. ಬಳೆ, ತೆಂಗಿನಕಾಯಿ, ಕರ್ಪೂರ, ಕುಂಕುಮ–ಭಂಡಾರ, ಜಗ, ಪೂಜಾ ಸಾಮಗ್ರಿಗಳನ್ನು ಮಾರುವವರು ಖುಷಿಪಟ್ಟರು.

ಹಿರೇಕುಂಬಿಯಿಂದ ಯಲ್ಲಮ್ಮನಗುಡ್ಡಕ್ಕೆ ಸಾಗುವ ಮಾರ್ಗದಲ್ಲಿ ದಿನವಿಡೀ ವಾಹನದಟ್ಟಣೆ ಇತ್ತು. ಗುಡ್ಡದ ತುಂಬೆಲ್ಲ ಅಳವಡಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕ ಜಾತ್ರೆಯ ಪ್ರತಿ ಚಟುವಟಿಕೆ ಮೇಲೂ ನಿಗಾ ಇರಿಸಲಾಗಿತ್ತು.

‘ಭಾರತ ಹುಣ್ಣಿಮೆ ಜಾತ್ರೆ ಮಾರ್ಚ್ 10ರವರೆಗೆ ನಡೆಯಲಿದೆ. ಅಲ್ಲಿಯವರೆಗೂ ಭಕ್ತರು ಗುಡ್ಡಕ್ಕೆ ಆಗಮಿಸಿ, ದೇವಿಗೆ ಪೂಜೆ ಸಲ್ಲಿಸಲಿದ್ದಾರೆ. ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ’ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‍ಪಿಬಿ ಮಹೇಶ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದೆಡೆ ಜಾತ್ರೆ ಮುಗಿಸಿ ಇಳಿಹೊತ್ತಿನಲ್ಲಿ ಕೆಲವರು ತಮ್ಮೂರಿನತ್ತ ಸಂಭ್ರಮದಿಂದ ಮರಳುತ್ತಿದ್ದರೆ, ಮತ್ತೊಂದೆಡೆ ವಾರಾಂತ್ಯವಾದ ಭಾನುವಾರ ಧಾರ್ಮಿಕ ವಿಧಿವಿಧಾನ ಕೈಗೊಳ್ಳಲು ಭಕ್ತರು ಗುಡ್ಡದತ್ತ ಆಗಮಿಸುತ್ತಿರುವುದು ಕಂಡುಬಂತು. ಗುಡ್ಡದೊಂದಿಗೆ ಸುತ್ತಲಿನ ಗ್ರಾಮಗಳಲ್ಲೂ ಪೊಲೀಸರು ಭದ್ರತೆ ಕೈಗೊಂಡಿದ್ದರು.

ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಭಾರತ ಹುಣ್ಣಿಮೆ ಪ್ರಯುಕ್ತ ಶನಿವಾರ ನಡೆದ ಜಾತ್ರೆಗೆ ಚಕ್ಕಡಿಬಂಡಿಯಲ್ಲಿ ಬಂದ ಭಕ್ತರು– ಪ್ರಜಾವಾಣಿ ಚಿತ್ರ:ಗೋವಿಂದರಾಜ ಜವಳಿ
ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿ ಭಾರತ ಹುಣ್ಣಿಮೆ ಪ್ರಯುಕ್ತ ಶನಿವಾರ ನಡೆದ ಜಾತ್ರೆಗೆ ಚಕ್ಕಡಿಬಂಡಿಯಲ್ಲಿ ಬಂದ ಭಕ್ತರು– ಪ್ರಜಾವಾಣಿ ಚಿತ್ರ:ಗೋವಿಂದರಾಜ ಜವಳಿ

ಕುಡಿಯುವ ನೀರಿಗೆ ಪರದಾಟ

ಭಾರತ ಹುಣ್ಣಿಮೆ ಜಾತ್ರೆಗೆ ಲಕ್ಷಲಕ್ಷ ಸಂಖ್ಯೆಯಲ್ಲಿ ಬಂದಿದ್ದ ಭಕ್ತರು ಕುಡಿಯುವ ನೀರಿನ ಬವಣೆಯಿಂದ ತತ್ತರಿಸಿದರು. ಕೆಲವರು ಕೊಡ ನೀರಿಗಾಗಿ ಟ್ಯಾಂಕ್‌ ಏರಿರುವುದು ಕಂಡುಬಂತು. ‘ಜಾತ್ರೆಗೆ ಬರುವ ಜನರ ಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಹಾಗಾಗಿ ಅಡುಗೆ ತಯಾರಿಸಲು ಸ್ನಾನಕ್ಕೆ ಪರದಾಡುವಂತಾಗಿದೆ. ಹೆಚ್ಚಿನ ಹಣ ನೀಡಿ ಅಂಗಡಿಗಳಲ್ಲಿ ನೀರು ಖರೀದಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಆರೋಪಿಸಿದರು. ಗುಡ್ಡದಲ್ಲಿ ಸಮರ್ಪಕವಾಗಿ ನೀರು ಲಭಿಸದ್ದರಿಂದ ಭಕ್ತರು ಸ್ನಾನಕ್ಕಾಗಿ ಉಗರಗೋಳ ಮಾರ್ಗದ ಕೃಷಿಭೂಮಿಗಳಲ್ಲಿನ ಕೊಳವೆಬಾವಿಗಳನ್ನು ಆಶ್ರಯಿಸಿದರು. ಉಗರಗೋಳದ ನವಾಬರ ಕೆರೆಯಲ್ಲಿ ಜಾನುವಾರುಗಳಿಗೆ ಸ್ನಾನ ಮಾಡಿಸಿದರು. ಆ ಕೆರೆಯಲ್ಲೂ ಹೆಚ್ಚಿನ ನೀರಿಲ್ಲದ್ದರಿಂದ ಪರದಾಡಿದರು.

ಆಗದ ಅಗಲೀಕರಣ: ತಪ್ಪದ ಪರದಾಟ

ಯಲ್ಲಮ್ಮನಗುಡ್ಡ–ಉಗರಗೋಳ ಮಾರ್ಗದ ರಸ್ತೆ ಅಗಲೀಕರಣ ಮಾಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ. ಆದರೆ ಈವರೆಗೂ ಬೇಡಿಕೆ ಈಡೇರದ್ದರಿಂದ ಸಂಚಾರ ಸಮಸ್ಯೆ ತಲೆದೋರುತ್ತಿದೆ. ಪ್ರತಿಬಾರಿ ಜಾತ್ರೆಯಂತೆ ಈ ಬಾರಿಯೂ ಅದು ಮುಂದುವರಿಯಿತು. ಯಲ್ಲಮ್ಮನಗುಡ್ಡ ಹೊರವಲಯದಲ್ಲಿ ನಿರ್ಮಿಸಿದ್ದ ಸೇತುವೆ ಕಾಮಗಾರಿ ಈವರೆಗೂ ಪೂರ್ಣಗೊಳಿಸದ್ದರಿಂದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT