ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಕರ ನೇಮಕಾತಿ ಪರೀಕ್ಷೆ: ಜಿಲ್ಲೆಯಲ್ಲಿ ಹೆಚ್ಚು ಕೇಂದ್ರಗಳು

ಅಕ್ರಮ ತಡೆಗೆ ಬಿಗಿ ಕ್ರಮ: ನಿತೇಶ್ ಪಾಟೀಲ
Published : 17 ಮೇ 2022, 8:24 IST
ಫಾಲೋ ಮಾಡಿ
Comments

ಬೆಳಗಾವಿ: ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಅಕ್ರಮವನ್ನು ತಡೆಗಟ್ಟುವ ಉದ್ದೇಶದಿಂದ ಪರೀಕ್ಷಾರ್ಥಿಗಳ ತಪಾಸಣೆಗಾಗಿ ಎರಡು ಹಂತಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದರು.

ಮೇ 21 ಹಾಗೂ 22ರಂದು ನಡೆಯಲಿರುವ ಶಿಕ್ಷಕರ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಜಿಲ್ಲೆಯ ಅಧಿಕಾರಿ/ಸಿಬ್ಬಂದಿಗಾಗಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಖಾಸಗಿ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಮಂಗಳವಾರ ನಡೆದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷಾ ಕೇಂದ್ರಗಳನ್ನು ಪ್ರವೇಶಿಸುವ ಮುನ್ನ ಪರೀಕ್ಷಾರ್ಥಿಗಳ ತಪಾಸಣೆಗಾಗಿ ಪೊಲೀಸ್, ಕಂದಾಯ ಮತ್ತಿತರ ಇಲಾಖೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗುವುದು.
ಯಾವುದೇ ರೀತಿಯ ಅಕ್ರಮಕ್ಕೆ ಅವಕಾಶ ನೀಡಬಾರದು ಎಂದು ಸೂಚಿಸಿದರು.

ಪಾರದರ್ಶಕತೆ ನಮ್ಮೆಲ್ಲರ ಜವಾಬ್ದಾರಿ:

ಪಾರದರ್ಶಕ ಪರೀಕ್ಷೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಇತ್ತೀಚೆಗೆ ಕೆಲ ನೇಮಕಾತಿ ಪರೀಕ್ಷೆಗಳಲ್ಲಿ ನ್ಯೂನ್ಯತೆ ಕಂಡುಬಂದಿರುವುದರಿಂದ ಈ ಬಾರಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಬೇಕಿದೆ.
ಈ ಪರೀಕ್ಷೆ ಬಳಿಕ ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ನೀಗಲಿದೆ. ಒಬ್ಬ ಅತ್ಯುತ್ತಮ ಶಿಕ್ಷಕನನ್ನು ಆಯ್ಕೆ ಮಾಡುವುದರಿಂದ ಮುಂದಿನ ಮೂವತ್ತು ವರ್ಷಗಳ ಕಾಲ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಪಾಟೀಲ ತಿಳಿಸಿದರು.

ಜಿಲ್ಲೆಯಲ್ಲಿ ಯಾವುದೇ ರೀತಿಯ ನ್ಯೂನ್ಯತೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳು ಉತ್ತರಿಸಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಸೇರಿಕೊಂಡು ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕಿದೆ‌ ಎಂದರು.

ಬೆಳಗಾವಿಯಲ್ಲಿ ಅತಿ ಹೆಚ್ಚಿನ ಪರೀಕ್ಷಾ ಕೇಂದ್ರಗಳಿರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ಪರೀಕ್ಷೆಯ ಕೆಲಸವನ್ನು ಗಂಭೀರವಾಗಿ ಪರಿಗಣಿಸಬೇಕು. ನಿಯೋಜಿತರಾದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಇದೇ ಮೊದಲ ಬಾರಿ ಪರೀಕ್ಷಾ ಕೇಂದ್ರಗಳನ್ನು ಸುಪರ್ದಿಗೆ ಪಡೆದುಕೊಳ್ಳಲಾಗುತ್ತಿದೆ. ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಮೂರನೇ ವ್ಯಕ್ತಿಗೆ ಪರೀಕ್ಷಾ ಕೇಂದ್ರದಲ್ಲಿ ಪ್ರವೇಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಎರಡು ಹಂತಗಳಲ್ಲಿ ಅಭ್ಯರ್ಥಿಗಳ ತಪಾಸಣೆ ನಡೆಸಲಾಗುತ್ತದೆ. ಮೊಬೈಲ್ ಫೋನ್, ವಾಚ್ ಸೇರಿದಂತೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ ಎಂದರು.

ಈ ಬಾರಿಯ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎಲ್ಲರೂ ಗಮನಿಸುತ್ತಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು.
ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಎಲ್ಲರೂ ಶಿಸ್ತುಬದ್ಧವಾಗಿ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಸಮಯಪಾಲನೆಗೆ ಆದ್ಯತೆ ನೀಡಬೇಕು:

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್.ವಿ. ದರ್ಶನ್, ಪ್ರಶ್ನೆಪತ್ರಿಕೆ ವಿತರಣೆ ಹಾಗೂ ಉತ್ತರ ಪತ್ರಿಕೆಗಳ ಸಂಗ್ರಹಕ್ಕೆ ಸಂಬಂಧಿಸಿದಂತೆ ಸಮಯ ಪಾಲನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ಪರೀಕ್ಷಾ ಕೇಂದ್ರದ ಮೂಲಸೌಕರ್ಯವನ್ನು ಮುಂಚಿತವಾಗಿ ಪರಿಶೀಲಿಸಿ ಏನಾದರೂ ಅನಾನುಕೂಲ ಕಂಡುಬಂದರೆ ಸರಿಪಡಿಸಬೇಕು ಎಂದರು.

ಪರೀಕ್ಷಾ ಅಕ್ರಮ-ತಂತ್ರಜ್ಞಾನ ದುರ್ಬಳಕೆ ತಡೆಗಟ್ಟಲು ಸಲಹೆ:

ಸ್ಪರ್ಧಾತ್ಮಕ ಪರೀಕ್ಷೆ ನಡೆಸುವುದು ಸವಾಲಿನ ಕೆಲಸವಾಗಿದ್ದು, ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ಅಕ್ರಮ ನಡೆಸುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಇದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಪರೀಕ್ಷಾರ್ಥಿಗಳ ತಪಾಸಣೆಗೆ ಸಂಬಂಧಿಸಿದಂತೆ ಅಗತ್ಯವಿರುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಒದಗಿಸಲಾಗುವುದು ಎಂದರು.

ಪರೀಕ್ಷೆಯಲ್ಲಿ ಅಕ್ರಮ ನಡೆಯಬಹುದಾದ ವಿಧಾನಗಳನ್ನು ವಿವರಿಸಿದ ಅವರು, ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ, ಬ್ಲೂಟೂತ್ ಬಳಕೆ ಹಾಗೂ ಒಎಂಆರ್ ಶೀಟ್‌ಗಳ ಮೇಲೆ ನಿಗಾ ವಹಿಸಬೇಕು ಎಂದರು. ಇದಲ್ಲದೇ ಪರೀಕ್ಷಾರ್ಥಿಗಳ ಹಾವಭಾವಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ನಿಂಬರಗಿ ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಮೋಹನ ಹಂಚಾಟೆ, ಪರೀಕ್ಷೆಗೆ ನಿಯೋಜಿತರಾದ ಅಧಿಕಾರಿ/ಸಿಬ್ಬಂದಿ ಮುಂಚಿತವಾಗಿಯೇ ಪರೀಕ್ಷಾ ಕೊಠಡಿಗಳನ್ನು ಪರಿಶೀಲಿಸಬೇಕು. ಎಲ್ಲ ಅಗತ್ಯ ಸಾಮಗ್ರಿಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪರೀಕ್ಷಾ ಸಮಯ, ಪ್ರಶ್ನೆಪತ್ರಿಕೆಗಳ ಸ್ವೀಕಾರ ಮತ್ತು ವಿತರಣೆ ಕುರಿತ ಮಾರ್ಗಸೂಚಿಗಳನ್ನು ಮತ್ತು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪ್ರತಿ ಕೊಠಡಿಗೆ ಇಪ್ಪತ್ತು ಪರೀಕ್ಷಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿರುತ್ತದೆ. ಯಾವುದೇ ರೀತಿಯ ಗೊಂದಲ ಮತ್ತು ಅಕ್ರಮಗಳಿಗೆ ಅವಕಾಶ ನೀಡದೇ ಸಮಯಪಾಲನೆ ಜತೆಗೆ ಅಚ್ಚುಕಟ್ಟಾಗಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಹಂಚಾಟೆ ವಿವರಿಸಿದರು.

ಒಟ್ಟು 62 ಪರೀಕ್ಷಾ ಕೇಂದ್ರಗಳಲ್ಲಿ ಜಿಲ್ಲೆಯ ಚಿಕ್ಕೋಡಿ 11,199 ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 5967 ಸೇರಿದಂತೆ ಒಟ್ಟಾರೆ 17,166 ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ‌ ಎಂದು ತಿಳಿಸಿದರು.

ಬೆಳಗಾವಿ ಡಿಸಿಪಿ ಪಿ.ವಿ. ಸ್ನೇಹಾ, ಇತ್ತೀಚಿಗೆ ಕಂಡುಬಂದಿರುವ ಅಕ್ರಮಗಳನ್ನು ಗಮನದಲ್ಲಿಟ್ಟುಕೊಂಡು ಅವುಗಳ ತಡೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸಂತೋಷ ಕಾಮಗೌಡ, ಬೆಳಗಾವಿ ಡಿಡಿಪಿಐ ಬಸವರಾಜ ನಾಲತವಾಡ, ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳ ಎಲ್ಲ ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರು ಮೇಲ್ವಿಚಾರಕರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT