ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿಯಲ್ಲಿ ಅಬ್ಬರವಿಲ್ಲದೆ ಗಣೇಶ ಮೂರ್ತಿಗಳಿಗೆ ವಿದಾಯ

ಕೊರೊನಾ ಕಾರಣದಿಂದ ಸರಳವಾಗಿ ನಡೆದ ಕಾರ್ಯಕ್ರಮ
Last Updated 1 ಸೆಪ್ಟೆಂಬರ್ 2020, 11:23 IST
ಅಕ್ಷರ ಗಾತ್ರ

ಬೆಳಗಾವಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವು ಸರಳ, ಸಾಂಪ್ರದಾಯಿಕ ಹಾಗೂ ಶ್ರ‌ದ್ಧಾ– ಭಕ್ತಿಯಿಂದ ಮಂಗಳವಾರ ನೆರವೇರಿತು. ಕೊರೊನಾ ಕಾರಣದಿಂದ ಅದ್ಧೂರಿ ಮೆರವಣಿಗೆ ಮತ್ತು ಸೌಂಡ್ ಸಿಸ್ಟಂಗಳ ಅಬ್ಬರವಿರಲಿಲ್ಲ.

300ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನವೇ ಕೆಲವು ಮಂಡಳದವರು ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರು. ಬಹುತೇಕ ಮೂರ್ತಿಗಳಿಗೆ ಮಂಗಳವಾರ ವಿದಾಯ ಹೇಳಲಾಯಿತು. ಗಣೇಶೋತ್ಸವ ಮಂಡಳದವರು, ಸ್ಥಳೀಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು ತಂದು ವಿಸರ್ಜಿಸಿದರು.

ಪ್ರತಿಷ್ಠಾಪನೆ ಸ್ಥಳದಿಂದ ಹೊಂಡಗಳವರೆಗೆ ಮೆರವಣಿಗೆ ನಿರ್ಬಂಧಿಸಲಾಗಿತ್ತು. ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಯ ಮೆರುಗು ಹೆಚ್ಚಿಸುತ್ತಿದ್ದವು. ಈ ಬಾರಿ ಇದೆಲ್ಲದಕ್ಕೂ ಕಡಿವಾಣ ಬಿದ್ದಿತು. ಭಕ್ತರಿಂದ ‘ಗಣಪತಿ ಬಪ್ಪಾ ಮೋರಯಾ’, ‘ಮುಂದಿನ ವರ್ಷ ಬೇಗ ಬಾ’, ‘ಜಯದೇವ ಜಯದೇವ ಜೈ ಮಂಗಳಮೂರ್ತಿ’... ಮತ್ತಿತರ ಘೋಷಣೆಗಳು ಮೊಳಗಿದವು. ಅಲ್ಲಲ್ಲಿ ಮಂಡಳದವರು ಪಟಾಕಿಗಳನ್ನು ಸಿಡಿಸಿ, ಪರಸ್ಪರ ಗುಲಾಲು ಹಚ್ಚಿಕೊಂಡು ಹಾಗೂ ಎರಚಿ ಸಂಭ್ರಮಿಸುತ್ತಿದ್ದುದು ಕಂಡುಬಂತು.

ಹೊಂಡಗಳಲ್ಲಿ:ಈ ಬಾರಿ ಬೆಳಿಗ್ಗೆಯಿಂದಲೇ ವಿಸರ್ಜನೆ ಪ್ರಕ್ರಿಯೆ ಆರಂಭಗೊಂಡಿತು. ಕಪಿಲೇಶ್ವರ ದೇವಸ್ಥಾನ ಬಳಿಯ ಎರಡು ಹೊಂಡಗಳು, ಗೋವಾವೇಸ್ ವೃತ್ತ ಸಮೀಪದ ಜಕ್ಕೇರಿ ಹೊಂಡ, ವಡಗಾವಿ, ಖಾಸಬಾಗ್, ಕಣಬರ್ಗಿ ಹಾಗೂ ಕೋಟೆ ಕೆರೆ ಬಳಿಯ ಹೊಂಡಗಳಲ್ಲಿ ವಿಸರ್ಜನೆ ಕಾರ್ಯಕ್ರಮ ನಡೆಯಿತು. ಕಪಿಲೇಶ್ವರ ಹೊಂಡದಲ್ಲಿ ದೊಡ್ಡ ಮೂರ್ತಿಗಳ ವಿಸರ್ಜನೆಗಾಗಿ ಕ್ರೇನ್‌ ಬಳಸಲಾಯಿತು. ನಗರಪಾಲಿಕೆಯಿಂದ 12 ಮೊಬೈಲ್ ಟ್ಯಾಂಕರ್‌ಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಕೆಲವು ಮೂರ್ತಿಗಳನ್ನು ಈ ಟ್ಯಾಂಕರ್‌ಗಳಲ್ಲಿ ವಿಸರ್ಜಿಸಲಾಯಿತು.

ಮೊದಲ ಗಣೇಶ ವಿಸರ್ಜನೆ ಕಾರ್ಯಕ್ಕೆ ಸಮಾದೇವಿ ಗಲ್ಲಿಯಿಂದ ಆರಂಭವಾಯಿತು. ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಮೂರ್ತಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಅಠಳೆ ಗಲ್ಲಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್‌ ಪೂಜಿಸಿದರು. ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಮುಖಂಡರಾದ ವಿಜಯ ಜಾಧವ್, ಸುನೀಲ ಜಾಧವ್, ಸಿಪಿಐ ಧೀರಜ್ ಶಿಂಧೆ ಇದ್ದರು.

ಶಹಾಪುರದ ನವೀಗಲ್ಲಿಯಲ್ಲಿ ಪ್ರತಿ ವರ್ಷದಂತೆ ಗಣೇಶ ವಿಸರ್ಜನೆ ಸಮಾರಂಭದಲ್ಲಿ ಹಿಂದೂ–ಮುಸ್ಲಿಂ ಸಮಾಜದ ಮುಖಂಡರು ಉತ್ಸಾಹದಿಂದ ಪಾಲ್ಗೊಂಡು ಭಾವೈಕ್ಯದ ಸಂದೇಶ ಸಾರಿದರು. ಮುಸ್ಲಿಂ ಮುಖಂಡರು ಪೂಜಾ ಸಾಮಗ್ರಿಗಳನ್ನು ತಂದು ಪೂಜೆ ಮಾಡಿಸಿದ್ದು ವಿಶೇಷವಾಗಿತ್ತು. ನೇತಾಜಿ ಜಾಧವ, ದಶರಥ ಶಿಂಧೆ, ಶಾಹೂ ಶಿಂಧೆ, ಸುಮಂತ್ ಜಾಧವ್, ವಿಷ್ಣು ನಾಕೋಜಿ, ವಾಸು ಕಡೋಲ್ಕರ, ಪ್ರತಾಪ್ ನಾಕೋಜಿ, ರೋಹಿತ ನಾಕೋಜಿ ಇದ್ದರು.

ಮುಂಜಾಗ್ರತಾ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT