ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾನಾಪುರ: ಮಲಪ್ರಭಾ ನದಿಗೆ ಚರಂಡಿ ನೀರು, ತ್ಯಾಜ್ಯ ಸುರಿಯುತ್ತಿರುವುದರಿಂದ ತೊಂದರೆ

Last Updated 26 ಜನವರಿ 2020, 19:30 IST
ಅಕ್ಷರ ಗಾತ್ರ

ಖಾನಾಪುರ: ಪಟ್ಟಣದಲ್ಲಿ ಮಲ‍ಪ್ರಭಾ ನದಿ ಒಡಲಿಗೆ ತ್ಯಾಜ್ಯ ಹಾಗೂ ಚರಂಡಿ ನೀರು ಸೇರ್ಪಡೆಯಾಗಿ ಕಲುಷಿತಗೊಳ್ಳುತ್ತಿದೆ. ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಲ್ಲಿ ಪಟ್ಟಣ ಪಂಚಾಯಿತಿಯವರು ಸಂಪೂರ್ಣ ವಿಫಲವಾಗಿರುವುದು ಪ್ರಜ್ಞಾವಂತ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲ್ಲೂಕಿನ ಕಣಕುಂಬಿ ಗ್ರಾಮದ ಬಳಿ ಅರಣ್ಯದಲ್ಲಿ ಹುಟ್ಟಿ ನೂರಾರು ಕಿಲೋ ಮೀಟರ್ ಕ್ರಮಿಸಿ ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದ ಬಳಿ ಕೃಷ್ಣಾ ನದಿಯ ಜೊತೆ ಸೇರುವ ಮಲಪ್ರಭಾ ನದಿ ಉತ್ತರ ಕರ್ನಾಟಕದ ವಿವಿಧ ನಾಲ್ಕು ಜಿಲ್ಲೆಗಳ ನೂರಾರು ಊರುಗಳ ಜನ– ಜಾನುವಾರುಗಳ ದಾಹ ನೀಗಿಸುತ್ತಿದೆ. ಜೊತೆಗೆ ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಸರಬರಾಜು ಮಾಡುತ್ತದೆ.

ಜನರು, ಜಾನುವಾರು, ಜಲಚರಗಳು, ಪ್ರಾಣಿ ಪಕ್ಷಿಗಳು, ಕ್ರಿಮಿಕೀಟಗಳು, ಸರಿಸೃಪಗಳು ಮತ್ತು ಗಿಡಮರಗಳಿಗೆ ಜೀವಜಲ ನೀಡುವ ಮಹತ್ಕಾರ್ಯ ಮಾಡುತ್ತಿರುವ ಈ ನದಿಯಲ್ಲಿ ಚರಂಡಿ ನೀರನ್ನು ಹರಿಸುವ ಕಾರ್ಯ ಕಳೆದ ಹಲವು ವರ್ಷಗಳಿಂದ ಖಾನಾಪುರ ಪಟ್ಟಣದಲ್ಲಿ ನಡೆದಿದೆ.

ಸ್ವಚ್ಛ ಭಾರತ ಯೋಜನೆಯಡಿ ಜಲ ಮೂಲಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಪಟ್ಟಣದ ಹೊರವಲಯದಲ್ಲಿ ಮಲಪ್ರಭಾ ನದಿಗೆ ಪಟ್ಟಣದ ತ್ಯಾಜ್ಯ ಸೇರುವುದು ಗೊತ್ತಿದ್ದರೂ ಗೊತ್ತಿಲ್ಲದವರಂತೆ ಕುಳಿತಿದ್ದಾರೆ. ಪರಿಣಾಮ ಹುಬ್ಬಳ್ಳಿ– ಧಾರವಾಡ, ಸವದತ್ತಿ, ರಾಮದುರ್ಗ, ಮುನವಳ್ಳಿ, ಬೈಲಹೊಂಗಲ, ಎಂ.ಕೆ. ಹುಬ್ಬಳ್ಳಿ ಮತ್ತಿತರ ಭಾಗದಲ್ಲಿ ವಾಸಿಸುವ ಈ ನದಿಯ ನೀರನ್ನು ಸೇವಿಸುವವರು ನದಿಯ ನೀರಿನಲ್ಲಿ ಮಿಶ್ರಣವಾಗುವ ಚರಂಡಿಯ ಕೊಳಚೆ ಮತ್ತು ತ್ಯಾಜ್ಯವನ್ನೂ ಸೇವಿಸುವಂತಾಗಿದೆ.

ವಿಪರ್ಯಾಸವೆಂದರೆ, ಮಲಪ್ರಭೆಯನ್ನು ತಾಯಿ ಎಂದು ಕರೆದು ಪೂಜಿಸಿ ಆರಾಧಿಸುವ ಜನರೇ ಖಾನಾಪುರ ಪಟ್ಟಣ ಮತ್ತು ಸುತ್ತಲಿನ ಭಾಗದ ಮಲಪ್ರಭಾ ನದಿ ತೀರದಲ್ಲಿ ಹೆಣಗಳನ್ನು ಸುಡುವುದು, ಮರಳು ತೆಗೆಯುವುದು, ಚರಂಡಿ ನೀರನ್ನು ನದಿಯಲ್ಲಿ ಸೇರಿಸುವುದು, ಪೂಜೆಯ ನಂತರದ ಹೂವು ಹಾಗೂ ಇತರ ತ್ಯಾಜ್ಯಗಳನ್ನು ನದಿಗೆ ಬಿಡುವುದು, ಪ್ಲಾಸ್ಟಿಕ್ ಬಾಟಲಿಗಳನ್ನು, ಕಸಕಡ್ಡಿಗಳನ್ನು, ಸತ್ತ ಪ್ರಾಣಿಗಳ ಕಳೇಬರಗಳನ್ನು ನದಿಯಲ್ಲಿ ಎಸೆಯುವುದು, ಕಾರ್ಖಾನೆಯ ತ್ಯಾಜ್ಯವನ್ನು ಸೇರಿಸುವುದು ಸೇರಿದಂತೆ ನದಿಯ ನೀರನ್ನು ಎಷ್ಟರಮಟ್ಟಿಗೆ ಹಾಳು ಮಾಡಲು ಸಾಧ್ಯವೋ ಅಷ್ಟರ ಮಟ್ಟಿಗೆ ಮಾಡುತ್ತಿದ್ದಾರೆ! ಧಾರ್ಮಿಕ ಆಚರಣೆಯ ನೆಪದಲ್ಲಿ ಪಿ.ಒ.ಪಿ ಎಂಬ ನೀರಿನಲ್ಲಿ ಕರಗದ ಗಣಪತಿಯ ವಿಗ್ರಹಗಳನ್ನು ನದಿಯಲ್ಲಿ ಮುಳುಗಿಸಲಾಗುತ್ತಿದೆ. ಹೀಗಾಗಿ ನದಿ ಅಕ್ಷರಶಃ ಮಲಿನಗೊಂಡಿದೆ.

ನದಿಯ ದಡದಲ್ಲಿಯೇ ದೇವರ ಫೋಟೊಗಳು, ಗಾಜುಗಳು, ಮದ್ಯದ ಬಾಟಲಿಗಳು, ಹಳೆ ಬಟ್ಟೆಗಳು, ಹಾಸಿಗೆಗಳು, ಮೃತರ ಅಸ್ತಿ, ಬೂದಿ, ಬಾಳೆ ಗಿಡಗಳು, ಹೂಮಾಲೆಗಳು ಮತ್ತು ಮುಖ್ಯವಾಗಿ ಪ್ಲಾಸ್ಟಿಕ್ ವಸ್ತುಗಳನ್ನು ಎಸೆಯುವ ಕಾರಣ ನದಿ ತೀರದ ಪಾವಿತ್ರ್ಯತೆ ಹಾಳಾಗಿದೆ. ನಿರ್ವಹಣೆಯ ಕೊರತೆಯಿಂದಾಗಿ ನದಿ ತೀರದಲ್ಲಿ ಕಸ ಸಂಗ್ರಹಗೊಂಡಿದೆ. ನದಿಯಲ್ಲಿ ಸತ್ತ ಪ್ರಾಣಿಗಳ ಕಳೇಬರಗಳು ಸೇರುತ್ತಿವೆ. ಜೊತೆಗೆ ಮದ್ಯ ಹಾಗೂ ಗುಟ್ಕಾ ಪಾಕೆಟ್‌ಗಳನ್ನು ಪಟ್ಟಣದ ಮಾಂಸದಂಗಡಿಗಳ ತ್ಯಾಜ್ಯವನ್ನು ನದಿಯಲ್ಲಿ ಸೇರಿಸಲಾಗುತ್ತಿದೆ.

ಪ್ರತಿ ಅಮವಾಸ್ಯೆಯಂದು ಗಂಗಾಪೂಜೆ ಮತ್ತು ಧಾರ್ಮಿಕ ಆಚರಣೆಯ ಭರದಲ್ಲಿ ನದಿಯನ್ನು ಹಾಳು ಮಾಡಲಾಗುತ್ತಿದೆ. ಕೂಡಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಮಲಪ್ರಭಾ ನದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕೆಲಸ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳಿಂದ ಆಗಬೇಕಿದೆ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT