ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್ ಟಾರ್ಚ್‌ ಬೆಳಕಲ್ಲಿ ಓದಿ ಸಾಧನೆ;ಬಡತನ,ಅನಾರೋಗ್ಯ ಮೆಟ್ಟಿನಿಂತ ರುತುಜಾ ಮಾನೆ

Last Updated 7 ಮೇ 2019, 19:31 IST
ಅಕ್ಷರ ಗಾತ್ರ

ನಿಪ್ಪಾಣಿ: ತಾಲ್ಲೂಕಿನ ನಾಗನೂರ ಗ್ರಾಮದ ರುತುಜಾ ಮಾನೆ, ಮನೆಯಲ್ಲಿ ವಿದ್ಯುತ್‌ ಸಂಪರ್ಕ ಇಲ್ಲದಿದ್ದರೂ ಮೊಬೈಲ್‌ ಟಾರ್ಚ್‌ ಬೆಳಕಲ್ಲಿ ಓದಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 97.60 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾಳೆ.

ತಾಲ್ಲೂಕಿನ ಶ್ರೀಪೇವಾಡಿಯ ಜಿ.ಎಂ. ಸಂಕಪಾಳ ಪ್ರೌಢಶಾಲೆಯಲ್ಲಿ ಮರಾಠಿ ಮಾಧ್ಯಮದಲ್ಲಿ ಓದುತ್ತಿರುವ ಈಕೆ, 625ಕ್ಕೆ 610 ಅಂಕಗಳನ್ನು ಪಡೆದು ಮರಾಠಿ ಮಾಧ್ಯಮದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಮರಾಠಿ– 120, ಗಣಿತ– 99, ಸಮಾಜವಿಜ್ಞಾನ– 99, ಇಂಗ್ಲಿಷ್‌– 98, ಕನ್ನಡ– 97 ಹಾಗೂ ವಿಜ್ಞಾನದಲ್ಲಿ 97 ಅಂಕಗಳನ್ನು ಪಡೆದಿದ್ದಾಳೆ.

ಆಕೆಯ ತಂದೆ ಆನಂದ ಪವರ್‌ಲೂಮ್‌ನಲ್ಲಿ ಕಾರ್ಮಿಕರಾಗಿದ್ದಾರೆ. ತಾಯಿ ಮಹಾದೇವಿ ಕೂಲಿ ಮಾಡುತ್ತಾರೆ. ಬಡತನದಲ್ಲೂ ಮಗಳನ್ನು ಓದಿಸಿದ್ದಾರೆ. ರುತುಜಾ ಸಹೋದರಿ ಮದುವೆಯಾಗಿದ್ದು, ಒಬ್ಬ ಸಹೋದರ ಇದ್ದಾನೆ. ಅವರ ಮನೆ ಗ್ರಾಮದ ಹೊರವಲಯದಲ್ಲಿದೆ. ಆರ್ಥಿಕ ಚೈತನ್ಯವಿಲ್ಲದ ಕಾರಣ ಅವರ ಮನೆಗೆ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲುವುದಕ್ಕೆ ಆಗಿಲ್ಲ. ಅಕ್ಕಪಕ್ಕದವರ ಮನೆಯಲ್ಲಿ ಮೊಬೈಲ್‌ ಚಾರ್ಜ್ ಮಾಡಿಕೊಂಡು, ರಾತ್ರಿ ಮೊಬೈಲ್‌ ಟಾರ್ಚ್‌ ಬೆಳಕಿನಲ್ಲಿ ರುತುಜಾ ಓದುತ್ತಿದ್ದಳು. ಪರೀಕ್ಷೆಯ ಸಮಯದಲ್ಲಿ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು.

ಒಂದೆಡೆ ಮನೆಯಲ್ಲಿ ವಿದ್ಯುತ್‌ ಇಲ್ಲ. ಇನ್ನೊಂದೆಡೆ ಟೈಫಾಯ್ಡ್‌. ಈ ಪರಿಸ್ಥಿತಿಗಳಿಗೆ ಎದೆಗುಂದದೇ ದೊಡ್ಡ ಸಾಧನೆ ಮಾಡಿ ಆಕೆ ಗಮನಸೆಳೆದಿದ್ದಾಳೆ. ಅನಾರೋಗ್ಯದ ಕಾರಣ, ಕೊನೆಯ ಸರಣಿ ಪರೀಕ್ಷೆಯಲ್ಲಿ 2 ವಿಷಯಗಳ ಪರೀಕ್ಷೆ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ, ವಾರ್ಷಿಕ ಪರೀಕ್ಷೆಯಲ್ಲಿ ಐತಿಹಾಸಿಕ ಸಾಧನೆ ತೋರಿದ್ದಾಳೆ.

ಪದವಿಪೂರ್ವ ಶಿಕ್ಷಣ ಪಡೆಯುವುದಕ್ಕಾಶಗಿ ಆಕೆಗೆ ಆರ್ಥಿಕವಾಗಿ ತೊಂದರೆ ಉಂಟಾಗಿದೆ. ‘ನಿತ್ಯ ಮೂರು ಗಂಟೆ ಅಭ್ಯಾಸ ಮಾಡುತ್ತಿದ್ದೆ. ಪರೀಕ್ಷೆ ಸಮೀಪಿಸುತ್ತಿದ್ದಂತೆ ನಸುಕಿನ ಜಾವ 4ಕ್ಕೇ ಅಭ್ಯಾಸ ಆರಂಭಿಸುತ್ತಿದ್ದೆ. ತಂದೆ–ತಾಯಿ ಸಹಕಾರ ಹಾಗೂ ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆಯೂ ಹೆಚ್ಚಿನ ಅಂಕಗಳನ್ನು ಗಳಿಸಬೇಕು ಎನ್ನುವ ಆಸೆ ಇದೆ’ ಎಂದು ರುತುಜಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ರುತುಜಾ ಆರಂಭದಿಂದಲೂ ಜಾಣೆ. ಬಡತನದಲ್ಲೂ ಈ ಸಾಧನೆ ಮಾಡಿದ್ದಾಳೆ. ಶಾಲೆಯ 44 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಎನಿಸಿಕೊಂಡಿದ್ದಾಳೆ’ ಎಂದು ಶ್ರೀಪೇವಾಡಿಯಜಿ.ಎಂ. ಸಂಕಪಾಳ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಸ್‌.ಬಿ. ಶಿರೋಳೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT