ಸೋಮವಾರ, ಏಪ್ರಿಲ್ 12, 2021
29 °C

ಬೆಳಗಾವಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಶಿವಸೇನಾ ಧಮ್ಕಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಇತರ ನಾಯಕರು ಕರ್ನಾಟಕದೊಂದಿಗೆ ಕಾಲು ಕೆರೆದು ಜಗಳ ತೆಗೆಯುತ್ತಿರುವ ನಡುವೆಯೇ, ಆ ರಾಜ್ಯದ ರಸ್ತೆ ಸಾರಿಗೆ ನಿಗಮವು ಕರ್ನಾಟಕದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಅಧಿಕೃತವಾಗಿಯೇ ‘ಧಮ್ಕಿ ಪತ್ರ’ವೊಂದನ್ನು ಈಚೆಗೆ ರವಾನಿಸಿರುವುದು ಬೆಳಕಿಗೆ ಬಂದಿದೆ.

‘ಮೀರಜ್‌ನ ಶಾಸ್ತ್ರಿ ವೃತ್ತದಲ್ಲಿ ಬಸ್‌ಗಳ ನಿಲುಗಡೆಯೇ ಇಲ್ಲ. ಅಲ್ಲಿಗೆ ಬರುವ ಕರ್ನಾಟಕದ ‘ಪರ್ಮಿಟ್ ಇಲ್ಲದ’ ಬಸ್‌ಗಳು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತವೆ. ಇದರಿಂದಾಗಿ ಮಹಾರಾಷ್ಟ್ರದ ರಸ್ತೆ ಸಾರಿಗೆ ನಿಗಮಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯದಿದ್ದರೆ ಫೆ.23ರಂದು ರಸ್ತೆ ತಡೆ ನಡೆಸಬೇಕಾಗುತ್ತದೆ’ ಎಂದು ಶಿವಸೇನೆ ಸಾಂಗ್ಲಿ ಜಿಲ್ಲಾ ಘಟಕ ಅಲ್ಲಿನ ರಸ್ತೆ ಸಾರಿಗೆ ನಿಗಮಕ್ಕೆ ಪತ್ರ ಬರೆದಿದೆ. ಇದನ್ನು ಆಧರಿಸಿ ಅಲ್ಲಿಯ ಸಾರಿಗೆ ಅಧಿಕಾರಿಗಳು ವಾಯುವ್ಯ ಸಾರಿಗೆ ಚಿಕ್ಕೋಡಿ ವಿಭಾಗದ ಅಧಿಕಾರಿಗಳಿಗೆ ಫೆ. 18ರಂದು ಖಡಕ್ ಆಗಿಯೇ ಪತ್ರ ಬರೆದಿದ್ದಾರೆ. ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ಪರ್ಮಿಟ್ ಇಲ್ಲದ’ ಬಸ್‌ಗಳನ್ನು ಮಹಾರಾಷ್ಟ್ರಕ್ಕೆ ಕಳುಹಿಸಬಾರದು. ಒಂದು ವೇಳೆ ಕಳುಹಿಸಿದಲ್ಲಿ ಶಿವಸೇನಾ ಪಕ್ಷದಿಂದಾಗುವ ಪರಿಣಾಮಗಳಿಗೆ ನೀವೇ ಹೊಣೆ ಆಗಬೇಕಾಗುತ್ತದೆ’ ಎಂಬ ಬೆದರಿಕೆ ದಾಟಿಯಲ್ಲಿ ಮಹಾರಾಷ್ಟ್ರದ ಅಧಿಕಾರಿಗಳು ಬರೆದಿದ್ದಾರೆ. ಇದು ಖಂಡನೀಯ. ಕರ್ನಾಟಕದ ಸಾರಿಗೆ ನಿಗಮದಲ್ಲಿ ‘ಪರ್ಮಿಟ್ ಇಲ್ಲದ’ ಬಸ್‌ಗಳು ಇರಲು ಸಾಧ್ಯವೇ ಇಲ್ಲ. ಅಲ್ಲದೇ ಒಂದು ರಾಜ್ಯದ ಅಧಿಕಾರಿಗಳು ಮತ್ತೊಂದು ರಾಜ್ಯದ ಅಧಿಕಾರಿಗಳಿಗೆ ಈ ರೀತಿ ಪತ್ರ ಬರೆಯುವುದೂ ಅಂತರರಾಜ್ಯ ಒಪ್ಪಂದಗಳ ಉಲ್ಲಂಘನೆಯೇ ಆಗುತ್ತದೆ’ ಎಂದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಸಾಂಗ್ಲಿ ಶಿವಸೇನಾ ಘಟಕವು ಕೊಟ್ಟ ಪತ್ರದ ಆಧಾರದ ಮೇಲೆಯೇ ಈ ರೀತಿ ಅಧಿಕಾರಿಗಳು ‘ಅಧಿಕೃತ ಧಮ್ಕಿ’ ನೀಡುತ್ತಿರುವುದು ಇದೇ ಮೊದಲು. ಇದನ್ನು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಗಂಭೀರವಾಗಿ ತೆಗೆದುಕೊಳ್ಳಬೇಕು. ಮಹಾರಾಷ್ಟ್ರದ ಸಾರಿಗೆ ಸಚಿವರಿಗೆ ಕರ್ನಾಟಕದ ಪ್ರತಿಭಟನೆಯನ್ನು ಲಿಖಿತವಾಗಿಯೆ ದಾಖಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು