ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಲ್ಲಿ ಖಾದಿ ಗ್ರಾಮೋದ್ಯೋಗ ಕಾರ್ಮಿಕರು

Published 15 ಆಗಸ್ಟ್ 2023, 4:16 IST
Last Updated 15 ಆಗಸ್ಟ್ 2023, 4:16 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್‌ ಗೂಡುನವರ

ಬೆಳಗಾವಿ: ಕಚ್ಚಾವಸ್ತುಗಳ ಅಭಾವದಿಂದ ಖಾದಿ ಉತ್ಪನ್ನಗಳ ಉತ್ಪಾದನೆ ಮೇಲೆ ಪ್ರಮಾಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ತಾಲ್ಲೂಕಿನ ಹುದಲಿಯ ಖಾದಿ ಗ್ರಾಮೋದ್ಯೋಗ ಮತ್ತು ಸಹಕಾರಿ ಉತ್ಪಾದಕ ಸಂಘದ ವಹಿವಾಟು ಶೇ 75ರಷ್ಟು ಕುಸಿದಿದೆ. ಇದನ್ನೇ ನಂಬಿದ ಕಾರ್ಮಿಕರ ಬದುಕು ಸಂಕಷ್ಟಕ್ಕೆ ಸಿಲುಕಿದೆ.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಡುವಲ್ಲಿ ಈ ಗ್ರಾಮ ಪ್ರಮುಖ ಪಾತ್ರ ವಹಿಸಿತ್ತು. ಖಾದಿ ಪ್ರಚಾರಕ್ಕೆ 1937ರಲ್ಲಿ ಮಹಾತ್ಮ ಗಾಂಧೀಜಿ ಅವರನ್ನು ಹುದಲಿಗೆ ಸ್ವಾತಂತ್ರ್ಯ ಹೋರಾಟಗಾರ ಗಂಗಾಧರರಾವ್ ದೇಶಪಾಂಡೆ ಕರೆ ತಂದಿದ್ದರು. ಸ್ವದೇಶಿ ಉತ್ಪನ್ನಗಳ ಬಳಕೆಗೆ ಗಾಂಧೀಜಿ ಕರೆ ನೀಡಿದ್ದರು.

ಇದರಿಂದ ಪ್ರೇರಣೆಗೊಂಡ 11 ಸಂಸ್ಥಾಪಕರು ₹500 ಬಂಡವಾಳ ಹಾಕಿ, 1954ರಲ್ಲಿ ಈ ಸಂಘ ಸ್ಥಾಪಿಸಿದರು. ಪ್ರಗತಿಯಲ್ಲಿದ್ದ ಈ ಸಂಘವು ಹಲವು ಕಾರಣಗಳಿಂದ ಸೊರಗುತ್ತಿದೆ.

‘ಕೋವಿಡ್‌ಗೂ ಮುನ್ನ ಸಂಘದಲ್ಲಿ ವರ್ಷಕ್ಕೆ ₹2.5 ಕೋಟಿ ಮೌಲ್ಯದ ಕರವಸ್ತ್ರ, ಜಮ್ಖಾನ್‌, ದೋತರ ಸೇರಿ ವಿವಿಧ ಖಾದಿ ಉತ್ಪನ್ನಗಳನ್ನು ತಯಾರಿಸಿ, ಮಾರುತ್ತಿದ್ದೆವು. ಸದ್ಯ ವಾರ್ಷಕ್ಕೆ ₹40 ಲಕ್ಷದಿಂದ ₹60 ಲಕ್ಷ ಮೌಲ್ಯದ ಉತ್ಪನ್ನ ತಯಾರಾಗುತ್ತಿವೆ’ ಎಂದು ಸಂಘದ ಕಾರ್ಯದರ್ಶಿ ರಾಘವೇಂದ್ರ ಹಮ್ಮನ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.

ಖಾದಿ ಉತ್ಪಾದಿಸುವ ಸಂಘಗಳಿಗೆ ಸರ್ಕಾರ ಹೆಚ್ಚಿನ ಅನುದಾನ ಕೊಡಬೇಕು. ಕಚ್ಚಾವಸ್ತುಗಳ ಪೂರೈಕೆಯ ಕೊರತೆ ನೀಗಿಸಬೇಕು ಸಮಸ್ಯೆ ಪರಿಹರಿಸಬೇಕು.
ರಾಘವೇಂದ್ರ ಹಮ್ಮನ್ನವರ, ಕಾರ್ಯದರ್ಶಿ, ಖಾದಿ ಗ್ರಾಮೋದ್ಯೋಗ ಮತ್ತು ಸಹಕಾರಿ ಉತ್ಪಾದಕ ಸಂಘ

‘ನೂಲುವ ಪ್ರಕ್ರಿಯೆಗೆ ಚಿತ್ರದುರ್ಗದ ಘಟಕದಿಂದ ಹಂಜಿ ತರಿಸುತ್ತಿದ್ದೆವು. ಮೂರು–ನಾಲ್ಕು ವರ್ಷಗಳಿಂದ ಅಲ್ಲಿಂದ ಹಂಜಿ ಬಾರದ ಕಾರಣ ಉತ್ಪಾದನೆ ಪ್ರಮಾಣ ಕುಸಿದಿದೆ. ಕಚ್ಚಾ ಸಾಮಗ್ರಿ ಲಭ್ಯತೆ ಅನುಸಾರ ಉತ್ಪಾದನೆ ಮಾಡುತ್ತಿದ್ದೇವೆ. ಅಗತ್ಯ ಬೇಡಿಕೆಯಷ್ಟು ಹಂಜಿ ಸಿಕ್ಕರೆ, ವಹಿವಾಟು ವೃದ್ಧಿಸುತ್ತದೆ’ ಎಂದರು.

‘ನಾವು ತಯಾರಿಸಿದ ಖಾದಿ ಉತ್ಪನ್ನಗಳನ್ನು ರೈಲ್ವೆ ಇಲಾಖೆಯವರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದರು. ರಾಜ್ಯದ ವಿವಿಧ ಮಳಿಗೆಗಳಲ್ಲೂ ಮಾರಾಟವಾಗುತಿತ್ತು. ಆದರೆ, ಉತ್ಪಾದನೆ ಪ್ರಮಾಣ ಕುಸಿತದಿಂದ ಮಾರಾಟ ಇಳಿಕೆಯಾಗಿದೆ’ ಎಂದು ಅವರು ತಿಳಿಸಿದರು.

ಖಾದಿ ಉತ್ಪಾದಕ ಸಂಘಗಳ ಸಬಲೀಕರಣಕ್ಕೆ ಸರ್ಕಾರದಿಂದ ವಿವಿಧ ಯೋಜನೆಗಳನ್ನು ಒದಗಿಸಲಾಗಿದೆ. ಹುದಲಿಯ ಸಂಘಕ್ಕೆ ಭೇಟಿ ನೀಡಿ ಸೌಕರ್ಯ ಕಲ್ಪಿಸಲಾಗುವುದು.
ಜಿ.ರಾಜಣ್ಣ, ಸಹಾಯಕ ನಿರ್ದೇಶಕ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹುಬ್ಬಳ್ಳಿ

‘ನಾನು ಮಾರಿಹಾಳದ ಕೇಂದ್ರದಲ್ಲಿ 15 ವರ್ಷಗಳಿಂದ ಖಾದಿ ಉತ್ಪನ್ನ ತಯಾರಿಸುತ್ತಿದ್ದೇನೆ. ಕೋವಿಡ್‌ಗೂ ಮುನ್ನ ಪ್ರತಿ 15 ದಿನಕ್ಕೆ ₹2,000 ವೇತನ ಕೈಗೆಟುಕುತ್ತಿತ್ತು. ಆದರೆ, ಕಳೆದ ಎರಡು–ಮೂರು ವರ್ಷಗಳಿಂದ ಸರಿಯಾಗಿ ಕೆಲಸವೇ ಇಲ್ಲದಂತಾಗಿದೆ. ನಿಯಮಿತವಾಗಿ ಕೆಲಸ ಸಿಕ್ಕರೂ ತಿಂಗಳಿಗೆ ₹1 ಸಾವಿರ ದುಡಿಯುವುದು ಕಷ್ಟವಾಗಿದೆ’ ಎಂದು ಕೂಲಿಕಾರರಾದ ಈರಮ್ಮ ಕಮ್ಮಾರ ತಿಳಿಸಿದರು.

ಜಿಲ್ಲೆಯಲ್ಲಿ 13 ಖಾದಿ ಉತ್ಪಾದನೆ ಕೇಂದ್ರಗಳಿವೆ. ಹುದಲಿ ಅಲ್ಲದೇ ತಾಲ್ಲೂಕಿನ ಮಾರಿಹಾಳ, ಸುಳೇಬಾವಿ, ಕರಡಿಗುದ್ದಿ, ಹೊಸ ವಂಟಮುರಿ, ಗೋಕಾಕ ತಾಲ್ಲೂಕಿನ ಮಲ್ಲಾಪುರ ಪಿ.ಜಿ. ಪಂಜಾನಟ್ಟಿ, ಬೆಣಚಿನಮರಡಿ, ಉರಬಿನಹಟ್ಟಿ, ಹುಕ್ಕೇರಿ ತಾಲ್ಲೂಕಿನ ಪಾಶ್ಚಾಪುರ, ರಾಮದುರ್ಗ, ಸುರೇಬಾನ ಹಾಗೂ ಅಥಣಿ ತಾಲ್ಲೂಕಿನ ಕಟಗೇರಿಯಲ್ಲಿ ಖಾದಿ ಉತ್ಪನ್ನ ತಯಾರಾಗುತ್ತವೆ. 27 ನೌಕರರು, 800ಕ್ಕೂ ಅಧಿಕ ಮಂದಿ ನೂಲುವ ಮತ್ತು ನೇಕಾರಿಕೆ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಬೆಳಗಾವಿ ತಾಲ್ಲೂಕಿನ ಹುದಲಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ
ಬೆಳಗಾವಿ ತಾಲ್ಲೂಕಿನ ಹುದಲಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರಿ ಉತ್ಪಾದಕ ಸಂಘ

Cut-off box - null

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT