ಬುಧವಾರ, ಜೂನ್ 23, 2021
30 °C

ಬಡವರ ಹೆಸರಲ್ಲಿ ರಾಜಕೀಯ ಮಾಡಿದ ಸಿದ್ದರಾಮಯ್ಯ: ಕತ್ತಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಬಡವರ ಹೆಸರಿನಲ್ಲಿ ರಾಜಕೀಯ ಮಾಡಿದರು’ ಎಂದು ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಟೀಕಿಸಿದರು.

‘ಅವರ ಆರೋಪಗಳಿಗೆ ಮತ್ತು ಹೇಳಿಕೆಗೆ ಹೆಚ್ಚು ಮಹತ್ವ ಕೊಡಬೇಕಿಲ್ಲ’ ಎಂದು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆ 2013ರ ಅನ್ವಯ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಸದಸ್ಯನಿಗೆ 5 ಕೆ.ಜಿ. ಹಾಗೂ ಅತಿ ಕಡು ಬಡವರು ಹೊಂದುವ ಅಂತ್ಯೋದಯ ಅನ್ನಭಾಗ್ಯ ಯೋಜನೆಯಲ್ಲಿ ಪ್ರತಿ ಚೀಟಿಗೆ 35 ಕೆ.ಜಿ. ಆಹಾರಧಾನ್ಯ ವಿತರಿಸಲಾಗುತ್ತಿದೆ. ರಾಜ್ಯದಲ್ಲಿ 10,87,576 ಅಂತ್ಯೋದಯ (ಅನ್ನಭಾಗ್ಯ) ಪಡಿತರ ಚೀಟಿ ಹಾಗೂ 1,16,62,365 ಬಿಪಿಎಲ್‌ ಪಡಿತರ ಚೀಟಿಗಳಿವೆ. ಒಟ್ಟು 4,37,42,623 ಫಲಾನುಭವಿಗಳಿದ್ದಾರೆ. ನಾನು ಸಚಿವನಾದ ನಂತರ ಭೌಗೋಳಿಕ ಆಹಾರ ಪದ್ಧತಿಗೆ ಅನುಗುಣವಾಗಿ ಜನರ ಆರೋಗ್ಯದ ದೃಷ್ಟಿಯಿಂದ ಅಕ್ಕಿಯೊಂದಿಗೆ ರಾಗಿ ಹಾಗೂ ಜೋಳ ಕೊಡಲು ನಿರ್ಧರಿಸಲಾಗಿದೆ. ಅದನ್ನು ಬೆಂಬಲ ಬೆಲೆ ಯೋಜನೆಯಲ್ಲಿ ರಾಜ್ಯದ ರೈತರಿಂದಲೇ ಖರೀದಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ 2021–21ನೇ ಸಾಲಿನಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲಾಗಿದೆ. ಪ್ರತಿ ಕ್ವಿಂಟಲ್‌ ರಾಗಿಗೆ ₹ 3,295 ನಿಗದಿಯಾಗಿತ್ತು. 6.50 ಲಕ್ಷ ಮೆ.ಟನ್ ಗುರಿಯಲ್ಲಿ 4.57 ಲಕ್ಷ ಮೆ.ಟನ್ ಖರೀದಿಸಲಾಗಿದೆ. ಇದರಿಂದ 2,00,960 ರೈತರು ಸೌಲಭ್ಯ ಪಡೆದಿದ್ದಾರೆ. ₹ 1,888 ಬೆಲೆಯಲ್ಲಿ 18.10 ಲಕ್ಷ ಮೆಟ್ರಿಕ್‌ ಟನ್‌ ಭತ್ತ ಖರೀದಿ ಗುರಿ ಇತ್ತು. ಈ ಪೈಕಿ 2.06 ಲಕ್ಷ ಮೆಟ್ರಿಕ್‌ ಟನ್ ಖರೀದಿಸಲಾಗಿದೆ. 54,993 ರೈತರು ಪ್ರಯೋಜನ ಗಳಿಸಿದ್ದಾರೆ. ಜೋಳವನ್ನು ₹ 2,640 ಬೆಂಬಲ ಬೆಲೆಯಲ್ಲಿ 6.50 ಲಕ್ಷ ಮೆಟ್ರಿಕ್‌ ಟನ್ ಖರೀದಿ ಗುರಿ ಹೊಂದಲಾಗಿತ್ತು. ಇದರಲ್ಲಿ 0.63 ಲಕ್ಷ ಮೆ.ಟನ್ ಖರೀದಿಸಲಾಗಿದೆ. 10,881 ಮಂದಿ ಸೌಲಭ್ಯ ಪಡೆದಿದ್ದಾರೆ’ ಎಂದು ತಿಳಿಸಿದರು.

‘ಪ್ರತಿ ಸದಸ್ಯನಿಗೆ 5 ಕೆ.ಜಿ. ಆಹಾರ ಧಾನ್ಯ ನೀಡಬೇಕು ಎನ್ನುವ ಕಾನೂನನ್ನು ನಾವು ಮಾಡಿಲ್ಲ. ಆಹಾರ ಭದ್ರತಾ ಕಾಯ್ದೆ ಮಾಡಿದ ಕಾಂಗ್ರೆಸ್‌ ನಿಗದಿಪಡಿಸಿದೆ. ಅದರಂತೆ ನಾವು ಪಡಿತರ ಕೊಡುತ್ತಿದ್ದೇವೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು