ಮಂಗಳವಾರ, ಆಗಸ್ಟ್ 4, 2020
24 °C

ಅಂಬೇಡ್ಕರ್‌ಗೆ ಆತಿಥ್ಯ ನೀಡಿದ್ದ ಸಿದ್ದವ್ವ ಮೇತ್ರಿ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಇಲ್ಲಿ ತಂಗಿದ್ದ ಸಂದರ್ಭದಲ್ಲಿ ಊಟೋಪಚಾರ ಮಾಡಿದ್ದ ಹಾಗೂ ಅವರ ಪ್ರೀತಿಗೆ ಪಾತ್ರವಾಗಿದ್ದ ಸಿದ್ದವ್ವ ಮೇತ್ರಿ (95) ವಯೋಸಹಜ ಅನಾರೋಗ್ಯದಿಂದ ಕಂಗ್ರಾಳಿ ಗಲ್ಲಿಯ ಮನೆಯಲ್ಲಿ ಶುಕ್ರವಾರ ನಿಧನರಾದರು.

ಅವರಿಗೆ ಮಕ್ಕಳಿರಲಿಲ್ಲ. ಪತಿ ಹಾಗೂ ದತ್ತು ಪುತ್ರ ಹಿಂದೆಯೇ ನಿಧನರಾಗಿದ್ದಾರೆ ಎಂದು ಸಹೋದರ ಸಂಬಂಧಿಗಳು ತಿಳಿಸಿದರು.

‘ಖ್ಯಾತ ವಕೀಲರಾಗಿದ್ದ ಅಂಬೇಡ್ಕರ್ ಅವರು ವಕೀಲರ ಸಂಘ, ನಗರಪಾಲಿಕೆಯ ಸಮಾರಂಭ, ಸ್ನೇಹಿತರ ಭೇಟಿ ಮೊದಲಾದ ಕಾರ್ಯಕ್ರಮಗಳಿಗೆಂದು 1939ರಲ್ಲಿ ಇಲ್ಲಿಗೆ ಮುಂಬೈನಿಂದ ರೈಲಿನಲ್ಲಿ ಬಂದಿದ್ದರು. ಆಗ ನಗರದಲ್ಲಿ ಹೋಟೆಲ್‌ಗಳ ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಆದ್ದರಿಂದ ಆಯೋಜಕರು ಹಾಗೂ ಸಮಾಜದ ಮುಖಂಡರು ಕಂಗ್ರಾಳಿ ಗಲ್ಲಿಯ ಪರಿಶಿಷ್ಟರ ಕೇರಿಯಲ್ಲಿ ಆ ಕಾಲಕ್ಕೆ ದೊಡ್ಡದಾಗಿದ್ದ ಸಿದ್ದವ್ವ ಅವರ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದರು. ಆಗ, ಸಿದ್ದವ್ವ ಆತಿಥ್ಯ ನೀಡಿದ್ದಲ್ಲದೇ ಅವರ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಈ ವಿಷಯವನ್ನು ಹಲವು ಬಾರಿ ತಿಳಿಸಿದ್ದರು’ ಎಂದು ಮುಖಂಡ ದುರ್ಗೇಶ್‌ ಮೇತ್ರಿ ಪತ್ರಕರ್ತರಿಗೆ ತಿಳಿಸಿದರು.

‘ನಿಮ್ಮಂತಹ ಕ್ರಿಯಾಶೀಲ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿ, ಸಮಾಜದಲ್ಲಿ ಮುಂದೆ ಬರಬೇಕು ಎಂದು ಅಂಬೇಡ್ಕರ್‌ ಸಲಹೆ ನೀಡಿದ್ದರು. ಇದರಿಂದ ಪ್ರೇರಣೆಗೊಂಡು 14ನೇ ವಯಸ್ಸಿನ ನಂತರ ಅಕ್ಷರ ಕಲಿತೆ. ಅವರ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿದೆ. ಮಹಿಳಾ ಶಿಕ್ಷಣದ ಮಹತ್ವದ ಕುರಿತು ಜಾಗೃತಿ ಮೂಡಿಸಲು ಮುಂದಾದೆ ಎನ್ನುತ್ತಿದ್ದರು’ ಎಂದು ಮಾಹಿತಿ ನೀಡಿದರು.

ಅವರನ್ನು ಜಿಲ್ಲಾಡಳಿತವು ಗಣರಾಜ್ಯೋತ್ಸವದಂದು ಸನ್ಮಾನಿಸಿತ್ತು. ಗಲ್ಲಿಯಲ್ಲಿ ನಡೆಯುತ್ತಿದ್ದ ಅಂಬೇಡ್ಕರ್‌ ಜಯಂತಿಯಲ್ಲಿ ಸಿದ್ದವ್ವ ಹಲವು ಬಾರಿ ಭಾಷಣ ಮಾಡಿದ್ದರು. ರಾಜಕೀಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ಹಾಗೂ ಡಾ.ಜಿ. ಪರಮೇಶ್ವರ್ ಮೊದಲಾದವರು ಅವರನ್ನು ಭೇಟಿಯಾಗಿದ್ದರು.

ಸದಾಶಿವನಗರ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿತು. ಸಮಾಜದ ಮುಖಂಡರು ಬುದ್ಧ ವಂದನೆ ಮೂಲಕ ಗೌರವ ಸಲ್ಲಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು