ಬೆಳಗಾವಿ: 4,665 ಜಾನುವಾರು ಸಾವು!

ಬೆಳಗಾವಿ: ಜಿಲ್ಲೆಯಲ್ಲಿ ಚರ್ಮಗಂಟು (ಲಂಪಿಸ್ಕಿನ್) ರೋಗ ವ್ಯಾಪಕವಾಗಿ ಹರಡುತ್ತಿದ್ದು, ನಾಲ್ಕೇ ತಿಂಗಳಲ್ಲಿ 4,665 ಜಾನುವಾರು ಮೃತಪಟ್ಟಿವೆ. ಆದರೆ, ಬಹುಪಾಲು ರೈತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಕೆಲವರಿಗೆ ಮಾತ್ರ ಅಲ್ಪಮೊತ್ತದ ಹಣ ನೀಡಿದ್ದು ಅಸಮಾಧಾನಕ್ಕೆ ಕಾರಣವಾಗಿದೆ.
‘ಚರ್ಮಗಂಟು ರೋಗ ಶಾಪವಾಗಿ ಪರಿಣಮಿಸಿದೆ. ಈ ಸೋಂಕಿನಿಂದ ಮೃತಪಟ್ಟಿರುವ 1 ವರ್ಷದೊಳಗಿನ ಕರುವಿಗೆ ತಲಾ ₹5 ಸಾವಿರ, ಆಕಳಿಗೆ ₹20 ಸಾವಿರ ಮತ್ತು ಎತ್ತಿಗೆ ₹30 ಸಾವಿರ ಪರಿಹಾರ ನಿಗದಿಪಡಿಸಲಾಗಿದೆ. ಇದು ಏತಕ್ಕೂ ಸಾಲದು. ಮೇಲಾಗಿ, ಆ ಪರಿಹಾರವೂ ಇನ್ನೂ ಸಿಕ್ಕಿಲ್ಲ’ ಎಂದು ತಾಲ್ಲೂಕಿನ ಗಣಿಕೊಪ್ಪದ ರೈತರಾದ ಅಭಿಷೇಕ ಹಿರೇಮಠ, ಶಿವಲಿಂಗ ಗಾಬಿ, ಸಿದ್ಧನಗೌಡ ಪಾಟೀಲ ‘ಪ್ರಜಾವಾಣಿ’ ಎದುರು ಅಳಲು
ತೋಡಿಕೊಂಡರು.
‘ಉತ್ತರ ಕರ್ನಾಟಕದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ನಡೆಯುತ್ತವೆ. ಇದರಲ್ಲಿ ಭಾಗವಹಿಸುತ್ತಿದ್ದ ಸುಮಾರು ₹3 ಲಕ್ಷದವರೆಗೆ ಬೆಲೆಬಾಳುವ ಎತ್ತುಗಳೂ ಚರ್ಮಗಂಟು ರೋಗದಿಂದ ಮೃತಪಟ್ಟಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಜಾನುವಾರುಗಳಿಗೆ ಚಿಕಿತ್ಸೆ ಕೊಡಿಸಲು ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಆದರೆ, ಪರಿಹಾರ ವಿತರಣೆ ವಿಳಂಬವಾಗಿದ್ದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ರವಿ ಸಿದ್ದಮ್ಮನವರ ಅಲವತ್ತುಕೊಂಡರು.
13 ಲಕ್ಷ ಜಾನುವಾರುಗಳಿವೆ:
ಜಿಲ್ಲೆಯಲ್ಲಿ ಆಕಳು, ಎಮ್ಮೆ, ಎತ್ತು ಸೇರಿ 13,93,711 ಜಾನುವಾರುಗಳಿವೆ. 2022ರ ಆ.1ರಿಂದ ಡಿ.11ರವರೆಗೆ 1,040 ಗ್ರಾಮಗಳಲ್ಲಿ 39,785 ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿದೆ. ಈ ಪೈಕಿ 20,270 ಜಾನುವಾರು ಚೇತ
ರಿಸಿಕೊಂಡಿವೆ. ಈ ರೋಗಕ್ಕೆ ತುತ್ತಾಗುವ ಜಾನುವಾರುಗಳ ಪ್ರಮಾಣ ತಗ್ಗಿದ್ದರೂ, ಪರಿಸ್ಥಿತಿ ಸಂಪೂರ್ಣ ಹತೋಟಿಗೆ ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ನಿತ್ಯ 85 ಸಾವು: ‘ಕಳೆದ 15 ದಿನಗಳ ಹಿಂದೆ, ಜಿಲ್ಲೆಯಲ್ಲಿ ನಿತ್ಯ 130 ಜಾನುವಾರು ಅಸುನೀಗುತ್ತಿದ್ದವು. ಆ ಪ್ರಮಾಣವೀಗ 80ರಿಂದ 85ಕ್ಕೆ ಇಳಿಕೆಯಾಗಿದೆ. 6.63 ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
₹9 ಕೋಟಿ ಬಿಡುಗಡೆಯಾಗಿದೆ
‘ಚರ್ಮಗಂಟು ರೋಗದಿಂದ ಮೃತಪಟ್ಟಿದ್ದ 224 ಜಾನುವಾರುಗಳ ಮಾಲೀಕರಿಗೆ ಪ್ರಥಮ ಹಂತವಾಗಿ ₹55 ಲಕ್ಷ ಪರಿಹಾರ ಕೊಟ್ಟಿದ್ದೇವೆ. ಈಗ ಬಾಕಿ ಉಳಿದ ಜಾನುವಾರು ಮಾಲೀಕರಿಗೆ ಪರಿಹಾರ ವಿತರಿಸಲು ಸರ್ಕಾರದಿಂದ ₹9.13 ಕೋಟಿ ಬಿಡುಗಡೆಯಾಗಿದೆ. ಇನ್ನೆರಡು ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಜಮೆಯಾಗಲಿದೆ’ ಎಂದು ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ರಾಜೀವ್ ಕೊಲೇರ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.