ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮದುರ್ಗ: ಖಾಸಗಿಗೆ ಪೈಪೋಟಿ ನೀಡುವ ಈರಮ್ಮ ಯಾದವಾಡ ಸರ್ಕಾರಿ ಕಾಲೇಜು

ಬಡಮಕ್ಕಳಿಗೆ ಅನುಕೂಲವಾಗಿರುವ ವಿದ್ಯಾಮಂದಿರ
Last Updated 13 ಮೇ 2021, 8:32 IST
ಅಕ್ಷರ ಗಾತ್ರ

ರಾಮದುರ್ಗ (ಬೆಳಗಾವಿ ಜಿಲ್ಲೆ): ಸರ್ಕಾರಿ ಶಾಲೆ-ಕಾಲೇಜುಗಳೆಂದರೆ ಮೂಗು ಮುರಿಯುವವರೆ ಜಾಸ್ತಿ. ಬಹಳಷ್ಟು ಕೊರತೆಗಳು ಅಲ್ಲಿರುತ್ತವೆ ಎನ್ನುವುದು ಆ ಭಾವನೆಗೆ ಕಾರಣವಾಗಿರುತ್ತದೆ. ಅದಕ್ಕೆ ಅಪವಾದ ಎನ್ನುವಂತೆ ಎಲ್ಲ ಖಾಸಗಿ ಕಾಲೇಜುಗಳಿಗೆ ಸೆಡ್ಡು ಹೊಡೆದು ಗ್ರಾಮೀಣ ಮತ್ತು ಬಡ ಮಕ್ಕಳ ಜ್ಞಾನಾರ್ಜನೆಗೆ ಎಲ್ಲ ಸೌಕರ್ಯಗಳನ್ನು ಇಲ್ಲಿನ ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಂದಿ ಉತ್ತಮ ಶಿಕ್ಷಣ ನೀಡುತ್ತಿದೆ.

ಖಾಸಗಿ ಕಾಲೇಜುಗಳು ಪ್ರವೇಶದ ಸಮಯದಲ್ಲಿ ಡೊನೇಷನ್‌, ಕಟ್ಟಡದ ದೇಣಿಗೆ ಎಂದೆಲ್ಲ ವಿದ್ಯಾರ್ಥಿಗಳನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು. ಈ ನಡುವೆ, ಇಲ್ಲಿನ ಸರ್ಕಾರಿ ಕಾಲೇಜು ಖಾಸಗಿ ಕಾಲೇಜುಗಳಿಗಿಂತಲೂ ಹೆಚ್ಚಿನ ಸೌಲಭ್ಯಗಳನ್ನು ಮಕ್ಕಳಿಗೆ ಪೂರೈಸಿ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ.

ಅತ್ಯುತ್ತಮ ಪಠ್ಯಕ್ರಮ ಬೋಧನೆ, ಪೂರ್ಣ ಪ್ರಮಾಣದ ಉಪನ್ಯಾಸಕರು, ತರಬೇತಿ ಪಡೆದ ದೈಹಿಕ ಶಿಕ್ಷಣ ನಿರ್ದೇಶಕರು ಇದ್ದಾರೆ. ಇಲ್ಲಿ ಉತ್ತಮ ಫಲಿತಾಂಶದ ಜೊತೆಗೆ ಕ್ರೀಡೆಯಲ್ಲೂ ಸಾಧನೆಯನ್ನು ವಿದ್ಯಾರ್ಥಿಗಳು ತೋರುತ್ತಿದ್ದಾರೆ.

ಕಾಲೇಜು ಶಿಕ್ಷಣವನ್ನು ಪಡೆಯಲು ಖಾಸಗಿ ಕಾಲೇಜುಗಳಿಗೆ ದೇಣಿಗೆ, ಡೊನೇಷನ್‌ ನೀಡಲು ಅಸಾಧ್ಯವಾದ ಅದೆಷ್ಟೋ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಡಕುಗೊಳಿಸಿದ್ದರು. 2007ರಲ್ಲಿ ಸರ್ಕಾರದಿಂದ ಮಂಜೂರಾದ ಪ್ರಥಮ ದರ್ಜೆ ಕಾಲೇಜು 132 ವಿದ್ಯಾರ್ಥಿಗಳಿಂದ ಆರಂಭಗೊಂಡಿತು. ಸದ್ಯ ಇಲ್ಲಿ 1,448 ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬರುತ್ತಿದ್ದಾರೆ. ಪ್ರವೇಶಕ್ಕಾಗಿ ಪ್ರಭಾವಿ ರಾಜಕಾರಣಿಗಳ ಸಹಾಯವನ್ನು ಕೆಲವರು ಪಡೆದುಕೊಳ್ಳುತ್ತಿದ್ದಾರೆ! ಬಹುತೇಕ ಗ್ರಾಮೀಣ ಪ್ರದೇಶದಿಂದ ಪ್ರವೇಶ ಪಡೆಯುವ ಮಕ್ಕಳು ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದು ಇಲ್ಲಿನ ಸೌಲಭ್ಯಗಳ ಸಹಾಯದಿಂದ ಎನ್ನುವುದನ್ನು ಮರೆಯುವಂತಿಲ್ಲ.

ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಎಸ್ಸಿ, ಎಂ.ಕಾಂ, ಬಿಬಿಎ ಕೋರ್ಸ್‌ಗಳು ಇವೆ. ಈಚೆಗೆ ಸ್ನಾತಕೋತ್ತರ ಪದವಿಗೂ ಮಾನ್ಯತೆ ದೊರೆತಿದೆ. ಇದೆಲ್ಲವೂ ಸೇರಿ 1448 ಮಂದಿ ಪ್ರವೇಶ ಪಡೆದಿದ್ದಾರೆ.

ಕಾಲೇಜು ಕಟ್ಟಡ ಸ್ಥಾಪನೆಗೆ ಜಾಗದ ಕೊರತೆ ಎದುರಾದಾಗ ಶಾಸಕ ಮಹಾದೇವಪ್ಪ ಯಾದವಾಡರ ಕುಟುಂಬ ತಮ್ಮ ತಾಯಿ ಈರಮ್ಮ ಯಾದವಾಡರ ಸ್ಮರಣೆಯಲ್ಲಿ 3 ಎಕರೆ ಜಾಗ ಪೂರೈಸಿದರು. ಅಲ್ಲಿ ನಿರ್ಮಾಣವಾದ ಭವ್ಯ ಕಟ್ಟಡದಲ್ಲಿ ಬೋಧನಾ ಕೊಠಡಿ, ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್‌ ಕೊಠಡಿ, ಸಭಾಂಗಣದ ಜೊತೆಗೆ ಮುಂಭಾಗದಲ್ಲಿ ವಿಶಾಲವಾದ ಕ್ರೀಡಾಂಗಣದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಕಾಲೇಜಿನಲ್ಲಿ 20 ಜನ ಶಿಕ್ಷಕರು, ನಾಲ್ವರು ಬೋಧಕೇತರ ಸಿಬ್ಬಂದಿಯಿಂದ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ 48 ಜನ ಅತಿಥಿ ಉಪನ್ಯಾಸಕರು ಇದ್ದಾರೆ. ಇದರಿಂದ ಕ್ರಿಯಾಶೀಲರಾದ ವಿದ್ಯಾರ್ಥಿಗಳು ಪ್ರತಿ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಲ್ಲದೇ ಕ್ರೀಡೆಯಲ್ಲಿಯೂ ಉತ್ತಮ ಪ್ರದರ್ಶನ ನೀಡಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿನಿಯರು ಇಲ್ಲಿರುವುದು ವಿಶೇಷವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT