ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಲಭ್ಯವಿಲ್ಲದೆ ಬಳಲುತ್ತಿದೆ ರಾಮತೀರ್ಥನಗರ

ಸೂಕ್ತ ಕ್ರಮಕ್ಕೆ ಬಡಾವಣೆಯ ನಿವಾಸಿಗಳ ಆಗ್ರಹ
Last Updated 23 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ರಾಮತೀರ್ಥನಗರವು ಸೌಲಭ್ಯಗಳಿಲ್ಲದೆ ತಬ್ಬಲಿಯಾಗಿದೆ. ಇದರಿಂದಾಗಿ ಅಲ್ಲಿನ ನಿವಾಸಿಗಳು ಹಲವು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ)ದಿಂದ ವಿವಿಧೆಡೆ ಈವರೆಗೆ 19 ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗಿದೆ. 17 ಬಡಾವಣೆಗಳನ್ನು ಮಹಾನಗರಪಾಲಿಕೆಗೆ ಹಸ್ತಾಂತರಿಸಲಾಗಿದೆ. ಪ್ರಸ್ತುತ ಬುಡಾದಿಂದ ನಿರ್ವಹಿಸುತ್ತಿರುವ ಬಡಾವಣೆಗಳಲ್ಲಿ ರಾಮತೀರ್ಥ ನಗರವೂ ಒಂದು. ಕೆಲವು ಕಾಮಗಾರಿಗಳು ಬಾಕಿ ಇರುವುದರಿಂದ ಹಸ್ತಾಂತರ ಪ್ರಕ್ರಿಯೆ ನಡೆದಿಲ್ಲ. ಇದು, ನಿವಾಸಿಗಳ ಪಾಲಿಗೆ ಶಾಪವಾಗಿ ಪರಿಣಮಿಸಿದೆ. ಕನಿಷ್ಠ ಮೂಲ ಸೌಲಭ್ಯಗಳಿಗಾಗಿಯೂ ಜನರು ಪರದಾಡುವಂತಾಗಿದೆ.

ಹಲವು ತೊಂದರೆ:

‘ಅಸಮರ್ಪಕ ನಿರ್ವಹಣೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಿವಾಸಿಗಳಾದ ನಾವು ಬಹಳ ತೊಂದರೆ ಎದುರಿಸುತ್ತಿದ್ದೇವೆ. ಒಂದು ವರ್ಷದಿಂದ ನಮ್ಮ ಬಡಾವಣೆಯಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ನಡೆದಿಲ್ಲ. ಇದರಿಂದಾಗಿ ಮಲಿನ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದಾಗಿದ್ದು, ರಸ್ತೆಯಲ್ಲೇ ಹರಿಯುವುದರಿಂದ ಪರಿಸರ ಹಾಳಾಗುತ್ತಿದೆ. ಅಲ್ಲಲ್ಲಿರುವ ಖಾಲಿ ನಿವೇಶನಗಳಲ್ಲಿ ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಅವುಗಳ ಮಾಲೀಕರೂ ಗಮನಹರಿಸುತ್ತಿಲ್ಲ; ಪ್ರಾಧಿಕಾರದವರೂ ತಲೆ ಕೆಡಿಸಿಕೊಂಡಿಲ್ಲ. ಇದರಿಂದಾಗಿ ಅವು ತಿಪ್ಪೆಗುಂಡಿಗಳಂತೆ ಮಾರ್ಪಟ್ಟಿವೆ. ಹಂದಿಗಳ ಕಾಟವೂ ಜಾಸ್ತಿಯಾಗಿದೆ. ಇವೆಲ್ಲ ಕಾರಣಗಳಿಂದಾಗಿ ಸಾಂಕ್ರಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ’ ಎಂದು ನಿವಾಸಿಗಳು ತಿಳಿಸಿದರು.

‘ಬಡಾವಣೆಯಲ್ಲಿ ಒಳ ರಸ್ತೆಗಳ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಸದ್ಯ ಸರಾಸರಿ 4–5 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಒಳ ರಸ್ತೆಗಳು ಒಂಬತ್ತು ವರ್ಷಗಳಿಂದಲೂ ಡಾಂಬರು ಕಂಡಿಲ್ಲ. ಕಾಲಕಾಲಕ್ಕೆ ಎಲ್ಲ ರೀತಿಯ ತೆರಿಗೆಗಳನ್ನೂ ಪಾವತಿಸುತ್ತಿದ್ದೇವೆ. ಆದರೂ ಸೌಲಭ್ಯಗಳಿಲ್ಲದೇ ತೊಂದರೆ ಅನುಭವಿಸುತ್ತಿದ್ದೇವೆ. ಸೌಲಭ್ಯಗಳನ್ನು ಕಲ್ಪಿಸುವುದು ಮತ್ತು ನಿರ್ವಹಣೆಯ ಜವಾಬ್ದಾರಿಯ ವಿಷಯ ಬಂದಾಗ ನಗರಪಾಲಿಕೆಯವರು ಬುಡಾದವರತ್ತ ಹಾಗೂ ಬುಡಾದವರು ನಗರಪಾಲಿಕೆಯತ್ತ ಕೈ ತೋರುತ್ತಾರೆ. ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ’ ಎಂದು ನಿವಾಸಿ ಸುರೇಶ ಉರಬಿನಹಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಅಧಿಕಾರಿಗಳು ಗಮನಹರಿಸಲಿ:

‘ಮೊದಲು 8ರಿಂದ 10 ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿತ್ತು. ಶಾಸಕ ಅನಿಲ ಬೆನಕೆ ಸ್ಥಳಕ್ಕೆ ಭೇಟಿ ನೀಡಿ ಸೂಚಿಸಿದ ಬಳಿಕ 4–5 ದಿನಗಳಿಗೊಮ್ಮೆ ಸಿಗುತ್ತಿದೆ’ ಎಂದು ತಿಳಿಸಿದರು.

ಬಡಾವಣೆಯ ಮೊದಲನೇ ಹಂತದಲ್ಲಿ ತಂಗುದಾಣ ನಿರ್ಮಿಸಲಾಗಿದೆ. ಅದು ಬಳಕೆಯಾಗಿಯೇ ಇಲ್ಲ. ಏಕೆಂದರೆ, ಅದನ್ನು ಅವೈಜ್ಞಾನಿಕವಾಗಿ ರಸ್ತೆಯಿಂದ ದೂರದಲ್ಲಿ ನಿರ್ಮಿಸಲಾಗಿದೆ. ಇದಕ್ಕಾಗಿ ಅದಕ್ಕೆ ಅನುಪಯುಕ್ತ ಬಸ್ ನಿಲ್ದಾಣ ಎಂಬ ಹೆಸರನ್ನು ನಿವಾಸಿಗಳು ಇಟ್ಟಿದ್ದಾರೆ. ಈ ತಂಗುದಾಣವನ್ನು ಕೆಲವರು ಅನೈತಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಅದನ್ನು ಸ್ವಚ್ಛಗೊಳಿಸಿ ಕೊಠಡಿಯ ರೀತಿ ಮಾಡಿಟ್ಟರೆ ಅಲ್ಲಿ ಗ್ರಂಥಾಲಯ ಆರಂಭಿಸುತ್ತೇವೆ; ಇದರಿಂದ ಸ್ಥಳೀಯರಿಗೆ ಅನುಕೂಲ ಆಗುತ್ತದೆ ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ. ಅದಕ್ಕೆ ಅಧಿಕಾರಿಗಳಿಂದ ಸ್ಪಂದನೆ ಸಿಕ್ಕಿಲ್ಲ.

ಆಕ್ರೋಶಗೊಂಡ ಅಲ್ಲಿನ ಗಣ್ಯರು ಸ್ನೇಹ ಸಮಾಜ ಸೇವಾ ಸಂಘದ ಮೂಲಕ, ಮಹಾನಗರಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿ ಗಮನಸೆಳೆದಿದ್ದಾರೆ.

***

‘ನಿರ್ಮಾಣಕ್ಕೆ ಕ್ರಮ’

‘ರಾಮತೀರ್ಥನಗರ ಬಡಾವಣೆಯಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಮಹಾನಗರಪಾಲಿಕೆ ಮಾಡಬೇಕು. ಅದಕ್ಕಾಗಿ ನಾವು ಹಣ ತುಂಬಿದ್ದೇವೆ. ಕೆಲವೆಡೆ ರಸ್ತೆಗಳು ಹಾಗೂ ಚರಂಡಿಗಳ ನಿರ್ಮಾಣ ಕಾರ್ಯ ನಡೆದಿಲ್ಲ. ಆದ್ದರಿಂದ ನಗರಪಾಲಿಕೆಗೆ ಹಸ್ತಾಂತರಿಸಲು ಆಗಿಲ್ಲ. ಬಾಕಿ ಉಳಿದ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇತ್ತೀಚೆಗೆ ಅನುಮೋದನೆ ದೊರೆತಿದೆ. ಟೆಂಡರ್ ಕರೆದು ಶೀಘ್ರವೇ ಕಾರ್ಯಾದೇಶ ನೀಡಲಾಗುವುದು’ ಎಂದು ಬುಡಾ ಆಯುಕ್ತ ಪ್ರೀತಂ ನಸಲಾಪುರೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ರಾಮತೀರ್ಥನಗರದಂತಹ ಹೊರವಲಯದ ಬಡಾವಣೆಗಳಲ್ಲೂ ಜನರು ವಾಸಿಸುತ್ತೇವೆ. ಅವುಗಳ ಸುಧಾರಣೆ ಕಡೆಗೂ ಅಧಿಕಾರಿಗಳು ಗಮನಹರಿಸಬೇಕು. ನಾಗರಿಕ ಸೌಲಭ್ಯಗಳನ್ನು ಕಲ್ಪಿಸಬೇಕು
ಸುರೇಶ ಉರಬಿನಹಟ್ಟಿ
ನಾಗರಿಕ, ರಾಮತೀರ್ಥನಗರ

***

ರಾಮತೀರ್ಥನಗರದಲ್ಲಿ ಸೌಲಭ್ಯಗಳಿಲ್ಲದಿರುವುದು ಹಾಗೂ ನಿರ್ವಹಣೆ ಕೊರತೆ ಇರುವುದರ ಬಗ್ಗೆ ನಿವಾಸಿಗಳು ದೂರು ಸಲ್ಲಿಸಿದ್ದಾರೆ. ಅತ್ತ ಗಮನಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಂ.ಜಿ. ಹಿರೇಮಠ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT