ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಾಪುರದಲ್ಲಿ ಯೋಧ ಮಂಜುನಾಥ್ ಅಂತ್ಯಕ್ರಿಯೆ: ನೂರಾರು ಮಂದಿ ಭಾಗಿ

Last Updated 13 ಜುಲೈ 2021, 7:00 IST
ಅಕ್ಷರ ಗಾತ್ರ

ಬೆಳಗಾವಿ: ನಾಗಾಲ್ಯಾಂಡ್ ಗಡಿಯಲ್ಲಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಶನಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಿಧನರಾದ ಯೋಧ ಮಂಜುನಾಥ ಗೌಡನ್ನವರ ಅವರ ಅಂತ್ಯಕ್ರಿಯೆ ಸ್ವಗ್ರಾಮ ಗೋಕಾಕ ತಾಲ್ಲೂಕಿನ ಶಿವಾಪುರ (ಕೊಣ್ಣೂರ)ದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ನೆರವೇರಿತು.

ಬೆಂಗಳೂರಿನಿಂದ ರಸ್ತೆ ಮಾರ್ಗದಲ್ಲಿ ಆಂಬುಲೆನ್ಸ್‌ನಲ್ಲಿ ತರಲಾದ ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ಕೋವಿಡ್ ಭೀತಿಯ ನಡುವೆಯೂ ನೂರಾರು ಮಂದಿ ಪಾಲ್ಗೊಂಡು, ವೀರಯೋಧನಿಗೆ ಆಶ್ರುತರ್ಪಣ ಸಲ್ಲಿಸಿದರು. ಸರ್ಕಾರಿ ಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಸಂಸದೆ ಮಂಗಲಾ ಸುರೇಶ ಅಂಗಡಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಉಪ ವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಗೋಕಾಕ ಬಿಜೆಪಿ ಮಂಡಳದ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಗ್ರಾಮದ ಮುಖಂಡರು, ಭಾರತೀಯ ಸೇನೆಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.

ದಾರಿಯುದ್ಧಕ್ಕೂ ಹೂವಿನ ದಳಗಳ ಸುರಿಮಳೆಗೈದ ಗ್ರಾಮಸ್ಥರಿಂದ ‘ಭಾರತ್ ಮಾತಾ ಕೀ ಜೈ’, ‘ಮಂಜುನಾಥ ಅಮರ್ ರಹೇ’ ಎಂಬಿತ್ಯಾದಿ ಘೋಷಣೆಗಳು ಮೊಳಗಿದವು.

ಮಂಜುನಾಥ ಅವರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನ ಅವರು 18 ವರ್ಷಗಳಿಂದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ತಿಂಗಳ ಹಿಂದೆ ಗ್ರಾಮಕ್ಕೆ ಬಂದು ಹೋಗಿದ್ದರು. ಅವರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT