ಬುಧವಾರ, ಅಕ್ಟೋಬರ್ 28, 2020
29 °C

Pv Web Exclusive ಬೆಳಗಾವಿಯ ಈ ಗ್ರಾಮಗಳಲ್ಲಿ ‘ಆತ್ಮ’ಗಳಿವೆ!

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಹೆದ್ದಾರಿಗಳಲ್ಲಿ ಸಾಗುವಾಗ ನೀವು ಗ್ರಾಮಗಳ, ಪಟ್ಟಣಗಳ ಅಥವಾ ನಗರಗಳ ಹೆಸರನ್ನು ತಿಳಿಸುವ ಅಥವಾ ಮಾರ್ಗಸೂಚಿಸುವ ಫಲಕಗಳನ್ನು  ಗಮನಿಸಿರಬಹುದು. ಅವುಗಳಲ್ಲಿ ‘ಹೆಸರು’ ಬಿಟ್ಟರೆ ಇಂತಿಷ್ಟು ಅಂತರವಿದೆ ಎಂಬ ಮಾಹಿತಿ ಇದ್ದಿರಬಹುದು. ಆದರೆ, ಬೆಳಗಾವಿ ಜಿಲ್ಲೆಯ ಈ ರಸ್ತೆಯಲ್ಲಿರುವ ಮಾರ್ಗಸೂಚಿ ಫಲಕಗಳಲ್ಲಿ ಜನಸಂಖ್ಯೆ ನಮೂದಿಸುವ ಜೊತೆಗೆ, ‘ಆತ್ಮಗಳು’ ಎಂದು ಬರೆದಿರುವುದು ಅಚ್ಚರಿ ಮೂಡಿಸುತ್ತದೆ.

ಬೆಳಗಾವಿ–ಬಾಗಲಕೋಟೆ ರಸ್ತೆಯಲ್ಲಿ ಕಾಣಸಿಗುವ ವಿಶೇಷವಿದು. ಇತ್ತೀಚೆಗೆ ಈ ಮಾರ್ಗದಲ್ಲಿ ಪ್ರಯಾಣಿಸುವಾಗ ಬಸ್‌ನ ಚಾಲಕರು ಈ ವಿಷಯದ ಬಗ್ಗೆ ಗಮನಸೆಳೆದರು. ‘ನೋಡಿ ಸರ್ ಈ ಊರುಗಳಲ್ಲಿ ಆತ್ಮಗಳಿವೆಯಂತೆ, ಅವುಗಳ ಸಂಖ್ಯೆಯನ್ನೂ ಬರೆದಿದ್ದಾರೆ ನೋಡಿ’ ಎಂದು ಅಚ್ಚರಿಯಿಂದ ತೋರಿಸಿದರು. ಈ ರೀತಿಯ ಮಾರ್ಗಸೂಚಿ ಫಲಕಗಳು ನನಗೂ ‘ಹೊಸತು’ ಎನಿಸಿತು.

ಉದಾಹರಣೆಗೆ ನುಗ್ಗಾನಟ್ಟಿ, ಜನಸಂಖ್ಯೆ: 1833 ಅತ್ಮಗಳು ಎಂದು ಬರೆಯಲಾಗಿದೆ. ಇದೊಂದೇ ಅಲ್ಲ, ಈ ಮಾರ್ಗದಲ್ಲಿ ಬರುವ ಪ್ರತಿ ಊರುಗಳ ಮಾರ್ಗಸೂಚಿ ಫಲಕಗಳಲ್ಲೂ ಈ ರೀತಿಯೇ ಹಾಕಲಾಗಿದೆ.

ಅಧಿಕಾರಿಗಳಿಗೂ ಅಚ್ಚರಿ:

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಚಕಿತಗೊಳ್ಳುವ ಸರದಿ ಅವರದೂ ಆಗಿತ್ತು. ‘ನಾವು ಅದನ್ನು ಗಮನಿಸಿಯೇ ಇಲ್ಲವಲ್ಲ! souls (ಆತ್ಮಗಳು) ಎಂದು ಬರೆದಿರುವುದು ನಮಗೂ ಅಚ್ಚರಿಯೇ’ ಎಂದು ಪ್ರತಿಕ್ರಿಯಿಸಿದರು.

‘ಕೆ–ಶಿಪ್‌ನಿಂದ ವಿಶ್ವ ಬ್ಯಾಂಕ್‌ ನೆರವಿನೊಂದಿಗೆ ಕೈಗೊಂಡಿರುವ ಕಾಮಗಾರಿ ಅದು. ನಮ್ಮ ಇಲಾಖೆಯಿಂದ ಮಾಡುವ ರಸ್ತೆಗಳಲ್ಲಿ ‘ಆ ರೀತಿಯ’ ಫಲಕಗಳನ್ನು ಹಾಕುವುದಿಲ್ಲ. ನಾಮಫಲಕವನ್ನಷ್ಟೇ ಹಾಕುತ್ತೇವೆಯೇ ಹೊರತು ಜನಸಂಖ್ಯೆ ನಮೂದಿಸುವುದಿಲ್ಲ. ವಿದೇಶಗಳಲ್ಲಿ ಫಲಕಗಳಲ್ಲಿ souls ಎಂದು ನಮೂದಿಸುತ್ತಾರಂತೆ. ಅಂತೆಯೇ ಇಲ್ಲಿಯೂ ಮಾಡಿರಬಹುದು’ ಎಂದು ಕಾರ್ಯನಿರ್ವಾಹಕ ಎಂಜಿನಿಯರ್‌ ಸಂಜೀವಕುಮಾರ್ ಹುಲಕಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ಸೇಫ್‌ ಕಾರಿಡಾರ್:

ಅಂದ ಹಾಗೆ ಈ ರಸ್ತೆಯನ್ನು ‘ಸೇಫ್‌ ಕಾರಿಡಾರ್‌’ ಎಂದು ಹೆಸರಿಸಲಾಗಿದೆ.

‘ಬೆಳಗಾವಿಯ ಎನ್.ಎಚ್.–4ರಿಂದ ಆರಂಭಿಸಿ ಯರಗಟ್ಟಿವರೆಗಿನ 62 ಕಿ.ಮೀ. ರಸ್ತೆಯನ್ನು 2016ರಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆಶಿಪ್‌)ಯಲ್ಲಿ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸಲಾಗಿದೆ. 2018ರ ಜುಲೈನಲ್ಲಿ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದ್ದು, ನಿರ್ವಹಣೆಯನ್ನು ಈ ಇಲಾಖೆಯೇ ನೋಡಿಕೊಳ್ಳುತ್ತಿದೆ. ಎಸ್‌ಸಿಡಿಪಿ (ಸ್ಪೆಷಲ್‌ ಕ್ಯಾರಿಯರ್‌ ಡೆಮಾನ್‌ಸ್ಪ್ರೇಶನ್‌ ಪ್ರೋಗ್ರಾಂ) ಯೋಜನೆಯಡಿ ಇದನ್ನು ‘ಮಾದರಿ ರಸ್ತೆ’ ಅಥವಾ ‘ಸೇಫ್‌ ಕಾರಿಡಾರ್‌’ ಎಂದೂ ಗುರುತಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಅಪಘಾತಗಳನ್ನು ನಿಯಂತ್ರಿಸುವುದು ಎಸ್‌ಸಿಡಿಪಿ ಉದ್ದೇಶ. ಬೆಳಗಾವಿ-ಯರಗಟ್ಟಿ ಘಾಟ್‌ ರಸ್ತೆಯಲ್ಲಿ 45 ಜಂಕ್ಷನ್‌ಗಳಿವೆ. ಈ ಕಾರಣದಿಂದ  ಹೆಚ್ಚು ಅಪಘಾತ ಸಂಭವಿಸಿ ಸಾವು-ನೋವುಗಳ ಸಂಖ್ಯೆ ಜಾಸ್ತಿಯಾಗಿತ್ತು. ಅಪಘಾತ ರಹಿತ ಮಾದರಿ ರಸ್ತೆ ನಿರ್ಮಿಸುವ ಉದ್ದೇಶದಿಂದ ವಿಶ್ವ ಬ್ಯಾಂಕ್‌ ಮತ್ತು ಕೆಶಿಪ್‌ ಈ ರಸ್ತೆಯನ್ನು ಆಯ್ಕೆ ಮಾಡಿಕೊಂಡಿದ್ದವು. ₹ 29 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ದರ್ಜೆಗೇರಿಸಲಾಗಿದೆ. ಎಲ್ಲ 45 ಜಂಕ್ಷನ್‌ಗಳನ್ನು ಚಾಲಕ ಸ್ನೇಹಿಯನ್ನಾಗಿಸಲಾಗಿದೆ. ‘Y' ಜಂಕ್ಷನ್‌ಗಳನ್ನು ‘T’ ಜಂಕ್ಷನ್‌ಗಳನ್ನಾಗಿ ಮಾಡಲಾಗಿದೆ.

‘ಫಲಕ ಹಾಕಿದ ಇಲಾಖೆಯವರು ಸಾಮಾನ್ಯ ಜ್ಞಾನ ಬಳಸಬೇಕಿತ್ತು. ಜನಸಂಖ್ಯೆ ನಮೂದಿಸುವಾಗ ‘ಆತ್ಮಗಳು’ ಎಂದು ಬರೆದಿರುವುದು ಸಮಂಜಸವಾಗಿದೆ’ ಎಂದು ಈ ಮಾರ್ಗದಲ್ಲಿ ನಿಯಮಿತವಾಗಿ ಸಂಚರಿಸುವ ಬಸ್‌ ಚಾಲಕ ಸುನೀಲ್ ಪಾಟೀಲ ಪ್ರತಿಕ್ರಿಯಿಸಿದರು.

ಅಂದ ಹಾಗೆ, ನೀವು ಬೆಳಗಾವಿ– ಬಾಗಲಕೋಟೆ ರಸ್ತೆಯಲ್ಲಿ ಹೋಗುವಾಗ ‘ಆತ್ಮಗಳ’ ಫಲಕ ಗಮನಿಸಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು