ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಲ್ಲಿ ಆಶಾಕಿರಣ ಮೂಡಿಸಿದ ಜೂನ್‌ ಮಳೆ: ಬೆಳಗಾವಿ ಜಿಲ್ಲೆಯಲ್ಲಿ ಬಿತ್ತನೆ ಚುರುಕು

Last Updated 27 ಜೂನ್ 2020, 7:40 IST
ಅಕ್ಷರ ಗಾತ್ರ

ಬೆಳಗಾವಿ: ಈ ತಿಂಗಳ ಆರಂಭದಲ್ಲಿ ಮಳೆಯಿಂದಾಗಿ ಉತ್ಸಾಹಗೊಂಡ ಜಿಲ್ಲೆಯ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಭತ್ತ, ಜೋಳ, ಮುಸುಕಿನಜೋಳ, ಹೆಸರು, ಸೋಯಾ ಅವರೆ ಸೇರಿದಂತೆ ಮುಂಗಾರು ಹಂಗಾಮಿನ ಎಲ್ಲ ಪ್ರಮುಖ ಬೆಳೆಗಳ ಬಿತ್ತನೆ ಮಾಡುತ್ತಿದ್ದಾರೆ.

ಕಬ್ಬು ಸೇರಿದಂತೆ ಮುಂಗಾರು ಹಂಗಾಮಿನಲ್ಲಿ 6,88,120 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಮಾಡುವ ಗುರಿ ಇದೆ. ಇದರಲ್ಲಿ ಈಗಾಗಲೇ 4,35,685 ಹೆಕ್ಟೇರ್‌ (ಶೇ 66) ಭೂಮಿಯಲ್ಲಿ ರೈತರು ಬಿತ್ತನೆ ಪೂರ್ಣಗೊಳಿಸಿದ್ದಾರೆ. ಬಿತ್ತನೆ ಕಾರ್ಯ ಇನ್ನೂ ಮುಂದುವರಿದಿದ್ದು, ಜುಲೈ ತಿಂಗಳ ಹೊತ್ತಿಗೆ ಶೇ 90ರ ಗಡಿ ದಾಟುವ ನಿರೀಕ್ಷೆ ಇದೆ.

ಪಶ್ಚಿಮ ಘಟ್ಟ ವ್ಯಾಪ್ತಿಯ ಖಾನಾಪುರದಲ್ಲಿ ಉತ್ತಮವಾಗಿ ಮಳೆ ಸುರಿದಿದೆ. ಮಳೆ ಹೆಚ್ಚಾಗಿದ್ದರ ಪರಿಣಾಮವಾಗಿ ಭತ್ತದ ನಾಟಿ ಕೆಲಸ ತೀವ್ರಗತಿಯಲ್ಲಿ ಸಾಗಿದೆ. ಇದರ ಫಲವಾಗಿ ಗುರಿ ಮೀರಿ ಶೇ 136ರಷ್ಟು ಬಿತ್ತನೆ ಪೂರ್ಣಗೊಂಡಿದೆ. 32,140 ಹೆಕ್ಟೇರ್‌ ಭೂಮಿಯ ಗುರಿ ಮೀರಿಸಿ 43,783 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆಯಾಗಿದೆ. ವಿಶೇಷವಾಗಿ ಭತ್ತ ನಾಟಿ ಹೆಚ್ಚಿನ ಪ್ರಮಾಣದಲ್ಲಾಗಿದೆ. 29,700 ಹೆಕ್ಟೇರ್‌ ಗುರಿಯಲ್ಲಿ 24,643 ಹೆಕ್ಟೇರ್‌ ಬಿತ್ತನೆಯಾಗಿದೆ.

ಸೋಯಾ ಅವರೆಯನ್ನು ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. 98,140 ಹೆಕ್ಟೇರ್‌ ಗುರಿಯಲ್ಲಿ ಈಗಾಗಲೇ 70,570 ಹೆಕ್ಟೇರ್‌ (ಶೇ 72) ಪ್ರದೇಶದಲ್ಲಿ ಬಿತ್ತನೆ ಪೂರ್ಣವಾಗಿದೆ. ಅಥಣಿಯಲ್ಲಿ 1,217, ಬೈಲಹೊಂಗಲದಲ್ಲಿ 27,230, ಬೆಳಗಾವಿಯಲ್ಲಿ 7,246, ಚಿಕ್ಕೋಡಿಯಲ್ಲಿ 7,840, ಗೋಕಾಕದಲ್ಲಿ 1,777, ಹುಕ್ಕೇರಿಯಲ್ಲಿ 22,195 ಹಾಗೂ ಸವದತ್ತಿಯಲ್ಲಿ 2,270 ಹೆಕ್ಟೇರ್‌ ಪ್ರದೇಶದಲ್ಲಿ ಸೋಯಾ ಬಿತ್ತನೆಯಾಗಿದೆ.

ಜಿಲ್ಲೆಯ ಇನ್ನೊಂದು ಪ್ರಮುಖ ಬೆಳೆಯಾದ ಗೋವಿನ ಜೋಳ ಬಿತ್ತನೆಗೂ ರೈತರು ಆಸಕ್ತಿ ತೋರಿದ್ದಾರೆ. ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ಖಾನಾಪುರ, ರಾಯಬಾಗ, ರಾಮದುರ್ಗ, ಸವದತ್ತಿ ಸೇರಿದಂತೆ ಬಹುತೇಕ ಜಿಲ್ಲೆಯ ಎಲ್ಲ ಭಾಗಗಳಲ್ಲಿನ ರೈತರು ಇದರ ಬಿತ್ತನೆ ಮಾಡಿದ್ದಾರೆ. 1,20,000 ಹೆಕ್ಟೇರ್‌ ಗುರಿಯಲ್ಲಿ ಇದುವರೆಗೆ 44,200 ಹೆಕ್ಟೇರ್‌ನಷ್ಟು (ಶೇ 36.8) ಬಿತ್ತನೆ ಮಾಡಿದ್ದಾರೆ. ಗೋಕಾಕದಲ್ಲಿ 18,548, ಬೈಲಹೊಂಗಲದಲ್ಲಿ 5,796, ಚಿಕ್ಕೋಡಿಯಲ್ಲಿ 4,661 ಹಾಗೂ ರಾಮದುರ್ಗದಲ್ಲಿ 4,330 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜುಲೈ ಅಂತ್ಯದವರೆಗೂ ಬಿತ್ತನೆಗೆ ಅವಕಾಶವಿರುವುದರಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಬಹುದು.

ಹುಕ್ಕೇರಿಯಲ್ಲಿ ಅತಿ ಹೆಚ್ಚು ಜೋಳ ಬೆಳೆಯಲಾಗಿದೆ. 5,000 ಹೆಕ್ಟೇರ್‌ ಗುರಿಯಲ್ಲಿ 3,360 ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಚಿಕ್ಕೋಡಿಯಲ್ಲಿ 527, ಗೋಕಾಕದಲ್ಲಿ 472, ಬೈಲಹೊಂಗಲದಲ್ಲಿ 464 ಹಾಗೂ ಬೆಳಗಾವಿಯಲ್ಲಿ 180 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಒಟ್ಟಾರೆಯಾಗಿ 11,580 ಹೆಕ್ಟೇರ್‌ ಗುರಿಯಲ್ಲಿ 5,068 ಹೆಕ್ಟೇರ್‌ನಷ್ಟು (ಶೇ 43.8) ಬಿತ್ತನೆಯಾಗಿದೆ.

ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಕಬ್ಬು 2,11,282 ಹೆಕ್ಟೇರ್‌ ಪ್ರದೇಶದಲ್ಲಿದೆ. ಶೇ 91ರಷ್ಟು ಪ್ರಗತಿ ಸಾಧಿಸಲಾಗಿದೆ.

ಬೇಕಿದೆ ಇನ್ನೂ ಮಳೆ:

ಇನ್ನುಳಿದ ಪ್ರದೇಶಗಳಲ್ಲಿ ರೈತರು ಭೂಮಿ ಹದ ಮಾಡಿಕೊಂಡು, ಬಿತ್ತನೆಗಾಗಿ ಸಿದ್ಧರಾಗಿದ್ದಾರೆ. ಸೂರ್ಯಕಾಂತಿ, ಶೇಂಗಾ, ಹತ್ತಿ, ತೊಗರಿ, ಜೋಳ, ಗೋವಿನ ಜೋಳವನ್ನು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೂನ್‌ ಮೊದಲ ಎರಡು ವಾರಗಳಲ್ಲಿ ಸುರಿದ ಮಳೆ, ಕಳೆದೊಂದು ವಾರದಿಂದ ಮಾಯವಾಗಿದೆ. ಮತ್ತೆ ಮಳೆ ಸುರಿಯಲಿ ಎಂದು ರೈತರು ವರುಣ ದೇವರ ಮೊರೆಹೋಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT