ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಶ್ವಗುರು ಬಸವ ಮಂಟಪ’ದಲ್ಲಿ ಉಬ್ಬುಮೂರ್ತಿಗಳಲ್ಲಿ ಶಿವಶರಣರ ‘ಬೆಳಕು’

ಅಮೃತ ಶಿಲಾ ಬಸವ ಮೂರ್ತಿ ಆಕರ್ಷಣೆ
Last Updated 23 ಸೆಪ್ಟೆಂಬರ್ 2018, 9:50 IST
ಅಕ್ಷರ ಗಾತ್ರ

ಬೆಳಗಾವಿ: ಸಮಾನತೆಯ ಸಂದೇಶ ಸಾರಿದ, ವೈಚಾರಿಕತೆಯ ಬೆಳಕು ತೋರಿದ ಶಿವಶರಣರ ಸ್ಮರಣೆಗಾಗಿ ಫೋಟೊಗಳನ್ನು ಹಾಕುವುದು, ಚಿತ್ರಗಳನ್ನು ಬರೆಸುವುದು ಸಾಮಾನ್ಯ. ಆದರೆ, ಇಲ್ಲಿನ ಗೋಕಾಕ ರಸ್ತೆಯಲ್ಲಿರುವ ‘ವಿಶ್ವಗುರು ಬಸವ ಮಂಟಪ’ದಲ್ಲಿ ಶರಣರ ಉಬ್ಬು ಮೂರ್ತಿಗಳನ್ನು ಅಳವಡಿಸಿರುವುದು ಆಕರ್ಷಿಸುತ್ತಿದೆ.

ಕೂಡಲಸಂಗಮದ ಬಸವ ಧರ್ಮ ಪೀಠ ಆಶ್ರಯದ ರಾಷ್ಟ್ರೀಯ ಬಸವ ದಳದಿಂದ ಲಿಂ. ಲಿಂಗಾನಂದ ಸ್ವಾಮೀಜಿ ಸ್ಮರಣಾರ್ಥ ನಿರ್ಮಿಸಿರುವ ಬಸವೇಶ್ವರ ಸಮುದಾಯ ಭವನ ಹಾಗೂ ಮಂಟಪ ಹಲವು ಕಾರಣಗಳಿಂದ ಗಮನಸೆಳೆಯುತ್ತಿದೆ. ಲಿಂಗಾಯತ ಧರ್ಮ, ಬಸವ ತತ್ವಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ.

ಮೊದಲ ಮಹಡಿಯಲ್ಲಿರುವ ಸಭಾಂಗಣದಲ್ಲಿ ಇಷ್ಟಲಿಂಗದ ಬ್ರಹ್ಮಾಂಡದ ಆಕಾರದಲ್ಲಿರುವ ಮೂರೂವರೆ ಅಡಿ ಶ್ವೇತವರ್ಣದ ಅಮೃತ ಶಿಲೆಯಿಂದ ರೂಪಿಸಿದ ಬಸವ ಮೂರ್ತಿ, ವೇದಿಕೆ ಬಳಿ ಪೂಜೆಗೊಳ್ಳುವ ಎರಡು ಅಡಿ ಎತ್ತರದ ಅಮೃತ ಶಿಲಾ ಮೂರ್ತಿ ವಿಶೇಷ ಆಕರ್ಷಣೆಗಳಾಗಿವೆ. ಬ್ರಹ್ಮಾಂಡದ ಆಕಾರ ವಿಶೇಷವಾಗಿ ಮೂಡಿಬಂದಿದ್ದು, ಬಸವಣ್ಣ ರಾಜ್ಯ, ದೇಶಕ್ಕೆ ಸೀಮಿತವಲ್ಲ; ಇಡೀ ವಿಶ್ವದ ಗುರು ಎನ್ನುವುದನ್ನು ಮನೋಜ್ಞವಾಗಿ ಬಿಂಬಿಸಲಾಗಿದೆ.

ಯಾರ‍್ಯಾರ ಮೂರ್ತಿಗಳು

ಒಳಾವರಣದ ಎರಡೂ ಗೋಡೆಗಳಿಗೂ ಹೊಂದಿಕೊಂಡಂತೆಯೇ ಶರಣರ ಉಬ್ಬು ಮೂರ್ತಿಗಳನ್ನು ಹಾಕಲಾಗಿದೆ. ಜೀವ ಇರುವಂತೆ ಭಾಸವಾಗುವ ಈ ಮೂರ್ತಿಗಳು ಪ್ರಸನ್ನತೆತೆಯಿಂದ ಕೂಡಿವೆ. ನೋಡುಗರಲ್ಲಿ ಶ್ರದ್ಧೆ–ಭಕ್ತಿಯ ಭಾವನೆಯನ್ನು ಮೂಡಿಸುತ್ತವೆ.

ಚಿನ್ಮಯಜ್ಞಾನಿ ಚನ್ನಬಸವಣ್ಣ, ಪ್ರಥಮ ಶೂನ್ಯ ಪೀಠಾಧೀಶ ಅಲ್ಲಮ ಪ್ರಭು, ವೀರವಿರಾಗಿಣಿ ಅಕ್ಕಮಹಾದೇವಿ, ಲಿಂಗಾಂಗಯೋಗಿ ಸಿದ್ಧರಾಮೇಶ್ವರರು, ಕ್ರಾಂತಿಗಂಗೋತ್ರಿ ಅಕ್ಕ ನಾಗಲಾಂಬಿಕೆ, ವೀರಗಣಾಚಾರಿ ಮಡಿವಾಳ ಮಾಚಿದೇವ, ವಚನಶಾಸ್ತ್ರ ಪಿತಾಮಹ ಡಾ.ಫ.ಗು. ಹಳಕಟ್ಟಿ, ‘ಕರ್ನಾಟಕದ ಗಾಂಧಿ’ ಹರ್ಡೇಕರ್ ಮಂಜಪ್ಪ, ಲಿಂ. ಲಿಂಗಾನಂದ ಸ್ವಾಮೀಜಿ, ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆಮಹಾದೇವಿ ಅವರ ಉಬ್ಬುಮೂರ್ತಿಗಳು ಇಲ್ಲಿವೆ. ಪ್ರತಿ ಮೂರ್ತಿಗೂ ವಿದ್ಯುದ್ದೀಪದ ಬೆಳಕಿನ ವ್ಯವಸ್ಥೆ ಮಾಡಿದ್ದು, ನೋಡುಗರಿಗೆ ಹೊಸದೊಂದು ‘ಕಾಂತಿ’ಯ ದರ್ಶನವಾದಂತೆ ಅನುಭವವಾಗುತ್ತದೆ.

ಬಸವಣ್ಣ ಸೇರಿದಂತೆ ಎಲ್ಲ ಮೂರ್ತಿಗಳನ್ನು ಸಿದ್ಧಪಡಿಸುವುದಕ್ಕೆ ಸಮಾಜದವರು ದೇಣಿಗೆ ನೀಡಿದ್ದಾರೆ. ಆ ದಾಸೋಹಿಗಳ ಹೆಸರನ್ನು ಕೂಡ ಮಂಟಪದಲ್ಲಿ ಪ್ರಕಟಿಸಲಾಗಿದೆ.

ಕಿಟಕಿಗಳಲ್ಲಿ ಲಾಂಛನ

ಮಂಟಪದ ಕಿಟಕಿಗಳಲ್ಲಿ ಕಬ್ಬಿಣದಿಂದ ಮಾಡಿದ ‘ಷಟ್ಕೋನ ಇಷ್ಟಲಿಂಗ ಸಹಿತ ಲಾಂಛನ’ವನ್ನು ಅಳವಡಿಸಿರುವುದು ಮತ್ತೊಂದು ಆಕರ್ಷಣೆಯಾಗಿದೆ. ಗೋಡೆಗಳಲ್ಲಿ ಅಲ್ಲಲ್ಲಿ ವಚನಗಳನ್ನು ಬರೆಸಲಾಗಿದೆ. ಮಂಟಪದ ಈ ವಿಶೇಷ ಸಮಾಜದವರು ಹಾಗೂ ಸ್ವಾಮೀಜಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

‘ನಾನೂ ಬಹಳಷ್ಟು ಬಸವ ಮಂಟಪಗಳನ್ನು ನೋಡಿದ್ದೇನೆ. ಆದರೆ, ಬೆಳಗಾವಿಯಲ್ಲಿ ಇರುವಂತೆ ಶರಣರ ಉಬ್ಬು ಮೂರ್ತಿಗಳನ್ನು ನೋಡಿಲ್ಲ. ಈ ಮೂರ್ತಿಗಳು ಬಹಳಷ್ಟು ಆಕರ್ಷಕವಾಗಿವೆ. ಅಲ್ಲದೇ, ಮಂಟಪಕ್ಕೆ ವಿಶ್ವಗುರು ಬಸವ ಮಂಟಪ ಎಂದು ಹೆಸರಿಟ್ಟಿರುವುದು ಕೂಡ ವಿಶೇಷವಾಗಿದೆ. ಇದೇ ರೀತಿ ನಿರ್ಮಿಸುವಂತೆ ಇತರ ಜಿಲ್ಲೆಗಳವರಿಗೂ ತಿಳಿಸುವಷ್ಟು ಚೆನ್ನಾಗಿದೆ’ ಎಂದು ಮಾತೆ ಮಹಾದೇವಿ ತಿಳಿಸಿದರು.

ಲಿಂಗಾಯತ ಧರ್ಮ ಮಹಾಸಭಾ ಹಾಗೂ ರಾಷ್ಟ್ರೀಯ ಬಸವದಳ ಜಿಲ್ಲಾ ಘಟಕಗಳು, ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಿಶ್ವಗುರು ಬಸವ ಜ್ಯೋತಿ ಯಾತ್ರಾ ಸಮಿತಿ ಮತ್ತು ವಚನ ಚಿಂತನಾ ವೇದಿಕೆಯ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT