ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ರಂಗದ ನಕ್ಷತ್ರ ಅಪ್ಪಣ್ಣಗೌಡ ಪಾಟೀಲ

Published 23 ಅಕ್ಟೋಬರ್ 2023, 2:52 IST
Last Updated 23 ಅಕ್ಟೋಬರ್ 2023, 2:52 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಸಹಕಾರಿ ರಂಗದಲ್ಲಿ ಸದಾ ನೆನಪಿರುವ ಹೆಸರು ದಿವಂಗತ ಅಪ್ಪಣ್ಣಗೌಡ ಪಾಟೀಲರದ್ದು.  ರೈತರು ಅವರ ಹೆಸರನ್ನು ಇಂದಿಗೂ ಪೂಜ್ಯನೀಯ ಭಾವನೆಯಿಂದ ಸ್ಮರಿಸುತ್ತಾರೆ. ಅವರು ತಾಲ್ಲೂಕಿಗೆ ನೀಡಿದ ಸಹಕಾರಿ ಸಂಸ್ಥೆಗಳ ಕೊಡುಗೆ ಮರೆಯುವಂತಿಲ್ಲ. ಅವರು ಸ್ವಾತಂತ್ರ್ಯ ಸೇನಾನಿ ಕೂಡ ಆಗಿದ್ದರು ಎನ್ನವುದು ದೊಡ್ಡ ಹಿರಿಮೆ.

1899ರ ಮಾರ್ಚ್ 20ರಂದು ಜನಿಸಿದ ಅಪ್ಪಣ್ಣಗೌಡ ಅವರು 1915ರಲ್ಲಿ ಅಹಲ್ಯಾದೇವಿ ಜತೆ ವಿವಾಹವಾದರು. 1920ರಲ್ಲಿ ನಾಡಸೇವೆಗೆ ಅಣಿಯಾದರು. 1924ರಲ್ಲಿ ದಲಾಲಿ ಅಂಗಡಿ ಪ್ರಾರಂಭಿಸಿದ ಅವರು ಅದೇ ವರ್ಷ ತಾಲ್ಲೂಕಿನ ಸಂಕೇಶ್ವರದಲ್ಲಿ ‘ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ’ ಸ್ಥಾಪಿಸಿದರು.

ಮಹಾನ್‌ ಸೇನಾನಿ: 1930ರಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಕ್ಕೆ 6 ತಿಂಗಳ ಸೆರೆಮನೆವಾಸ ಅನುಭವಿಸಿದರು. ಮತ್ತೆ 1932ರಲ್ಲಿ ಪಾನಪ್ರತಿಬಂಧಕ ಚಳವಳಿಯಲ್ಲಿ ಭಾಗವಹಿಸಿದ್ದಕ್ಕೆ 1 ವರ್ಷ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿ ₹500 ದಂಡ ತೆತ್ತರು. 1939ರಲ್ಲಿ ಯುದ್ಧ ವಿರೋಧಿ ಘೋಷಣೆಗಾಗಿ 6 ತಿಂಗಳ ಶಿಕ್ಷೆ ಅನುಭವಿಸಿದರು. 1942ರ ಚಲೇಜಾವ್ ಚಳವಳಿಯಲ್ಲಿ ಭೂಗತ ಕಾರ್ಯದಲ್ಲಿ ತೊಡಗಿ ಸ್ವಾತಂತ್ರ್ಯ ಪಡೆಯಲು ಸೇವೆ ಸಲ್ಲಿಸಿದರು. ಅದೇ ವರ್ಷ ರಾಯಬಾಗ ಸ್ಟೇಷನ್‌ಗೆ ಬೆಂಕಿ ಹಚ್ಚಿದ್ದರು. 1944ರವರೆಗೆ ಭೂಗತ ಕಾರ್ಯದ ಮೂಲಕ ಸ್ವಾತಂತ್ರ್ಯ ಸೇನಾನಿಗಳಿಗೆ ಸಹಾಯ ಮಾಡಿದರು.

1950ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚೇರ್ಮನ್ ಆಗಿ ಕೆಲಸ ಮಾಡಿದರು. 1956ರಲ್ಲಿ ‘ಶ್ರೀ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆ’ ನೋಂದಣೆ ಮಾಡಿ 1961ರ ಜೂನ್‌ನಲ್ಲಿ ಕಬ್ಬು ನುರಿಸುವ ಕಾರ್ಯ ಪ್ರಾರಂಭಿಸಿದರು.

1962ರಲ್ಲಿ ಸಂಕೇಶ್ವರ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1966ರಲ್ಲಿ ಹಿರಾ ಶುಗರ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1967ರಲ್ಲಿ ಹುಕ್ಕೇರಿ ಮತಕ್ಷೇತ್ರದಿಂದ 2ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಸ್ಥಾಪನೆ ಮಾಡಿದ ಶ್ರೇಯಸ್ಸು ಅವರದ್ದು.

1972ರಲ್ಲಿ ಡಿಸ್ಟಿಲರಿ ಘಟಕ ಸ್ಥಾಪಿಸಿ ಸ್ಪಿರಿಟ್ ಉತ್ಪಾದಿಸಲು ಪ್ರಾರಂಭಿಸಿದರು. 1973ರಲ್ಲಿ ಮತ್ತೆ ಸಂಕೇಶ್ವರ ಮತಕ್ಷೇತ್ರದಿಂದ ಶಾಸಕರಾಗಿ 3ನೇ ಬಾರಿಗೆ ಆಯ್ಕೆಯಾದರು. 1974ರ ಅ. 23ರಂದು ನಿಧನರಾದರು.

ಅಪ್ಪಣ್ಣಗೌಡ ಸ್ಮರಣೆ ಇಂದು

ಸಂಕೇಶ್ವರದ ಸಹಕಾರ ದಿಗ್ಗಜ ಅಪ್ಪಣ್ಣಗೌಡ ಪಾಟೀಲ ಅವರ 49ನೇ ಪುಣ್ಯಸ್ಮರಣೆ ಅ. 23ರಂದು ಬೆಳಿಗ್ಗೆ 10.30ಕ್ಕೆ ಸಂಕೇಶ್ವರದ ಎಸ್.ಡಿ.ವಿ.ಎಸ್ ಸಭಾಭವನದಲ್ಲಿ ನಡೆಯಲಿದೆ. ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಸಾಹಿತಿ ಎಂ.ಬಿ. ಹೂಗಾರ ನಿಡಸೋಸಿ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಭಾಗವಹಿಸುವರು. ಮಾಜಿ ಸಚಿವ ಎ.ಬಿ. ಪಾಟೀಲ ಅಧ್ಯಕ್ಷತೆ ವಹಿಸುವರು.

ಹಿರಾ ಶುಗರ್ಸ್‌ನಿಂದ ನೂರಾರು ಕುಟುಂಬಗಳು ಆರ್ಥಿಕವಾಗಿ ಸದೃಢವಾಗಿವೆ. ಅದಕ್ಕೆ ಅಪ್ಪಣ್ಣಗೌಡರೇ ಕಾರಣ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದೇವೆ.
ನಿಖಿಲ್ ಕತ್ತಿ, ಶಾಸಕ, ಹುಕ್ಕೇರಿ
ಈ ಭಾಗದಲ್ಲಿ ಸಹಕಾರಿ ವಲಯಕ್ಕೆ ಭದ್ರ ಬುನಾದಿ ಹಾಕಿದವರೇ ಅಪ್ಪಣ್ಣಗೌಡರು. ಸಹಕಾರಿ ಕ್ಷೇತ್ರ ರಾಜಕೀಯ ಮುಕ್ತವಾಗಿದ್ದರೆ ಮಾತ್ರ ಸಂಸ್ಥೆಗಳು ಬೆಳೆಯುತ್ತದೆ.
ರಮೇಶ ಕತ್ತಿ, ಅಧ್ಯಕ್ಷ, ಬಿಡಿಸಿಸಿ ಬ್ಯಾಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT