ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನ: ಸುವರ್ಣ ಸೌಧಕ್ಕೆ ‘ಪ್ರತಿಮಾಲಂಕಾರ’

ಚಳಿಗಾಲದ ಅಧಿವೇಶನ: ಭರದಿಂದ ಸಾಗಿವೆ ಕಾಮಗಾರಿಗಳು, ಪ್ರತಿಮೆಗಳ ಸಂಪರ್ಕಕ್ಕೆ ಪ್ರತ್ಯೇಕ ರಸ್ತೆ
Published 26 ನವೆಂಬರ್ 2023, 5:43 IST
Last Updated 26 ನವೆಂಬರ್ 2023, 5:43 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಸಕ್ತ ಚಳಿಗಾಲದ ಅಧಿವೇಶನಕ್ಕೆ ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಭರದ ಸಿದ್ಧತೆಗಳು ನಡೆದಿವೆ. ವಿಶೇಷವಾಗಿ ಸೌಧದ ಮುಂದೆ ಇರುವ ಮೂರು ಬೃಹತ್ ಪ್ರತಿಮೆಗಳಿಗೆ ಅಲಂಕಾರ ಮಾಡಲಾಗುತ್ತಿದೆ.

ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರ ಪ್ರತಿಮೆಗಳನ್ನು ಸೌಧದ ಮುಂದೆ ನಿಲ್ಲಿಸಲಾಗಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಚುನಾವಣೆಗೂ ಮುನ್ನವೇ ತರಾತುರಿಯಲ್ಲಿ ಈ ಮೂರೂ ಮಹನೀಯರ ಪ್ರತಿಮೆಗಳನ್ನು ಪ್ರತಿಷ್ಠಾಪನೆ ಮಾಡಿ, ಲೋಕಾರ್ಪಣೆ ಕೂಡ ಮಾಡಿತ್ತು. ಸುತ್ತಲೂ ಯಾವುದೇ ರಕ್ಷಣಾಗೋಡೆ, ಹುಲ್ಲುಹಾಸು, ದೀಪದ ವ್ಯವಸ್ಥೆ ಕೂಡ ಇರಲಿಲ್ಲ.

ಈ ಬಾರಿ ಅಧಿವೇಶನ ವೇಳೆಗೆ ಮಹನೀಯರ ಪ್ರತಿಮೆಗಳಿಗೆ ಅಲಂಕಾರ ಮಾಡುವ ಕಾಮಗಾರಿ ಭರದಿಂದ ಸಾಗಿದೆ. ಕಾರ್ಮಿಕರು ಹೊಸದಾಗಿ ಪ್ರತಿಮೆಗಳ ಸ್ವಚ್ಛತೆ, ಪೇಂಟಿಂಗ್‌ ಆರಂಭಿಸಿದ್ದಾರೆ.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರೇ ಆಸಕ್ತಿ ವಹಿಸಿ ಈ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ. ಮೂರೂ ಪ್ರತಿಮೆಗಳ ಸುತ್ತ ಪ್ರತ್ಯೇಕ ವೃತ್ತ ಮಾಡಿ, ಕಾಂಪೌಂಡ್‌ ಕೂಡ ಕಟ್ಟಲಾಗುತ್ತಿದೆ. ಅದರ ಒಳಭಾಗದಲ್ಲಿ ಮಿನಿ ಗಾರ್ಡನ್‌ ಸಿದ್ಧಗೊಳ್ಳಲಿದೆ. ಲೈಟಿಂಗ್‌ ಹಾಗೂ ಮಾಲಾರ್ಪಣೆ ಮಾಡಲು ಅನುಕೂಲ ಆಗುವಂಥ ಕೆಲಸಗಳನ್ನೂ ಕೈಗೆತ್ತಿಕೊಳ್ಳಲಾಗಿದೆ.

ಪ್ರತಿಮೆಗಳಿಗೆ ಎತ್ತರದ ವಿಶಾಲ ಪೀಠ ಕೂಡ ಇದೆ. ಅದರ ನಾಲ್ಕೂ ಭಾಗದ ಗೋಡೆಗೆ ಆಯಾ ಮಹನೀಯರ ಸಾಧನೆ– ಹೋರಾಟ ಬಿಂಬಿಸುವ ಚಿತ್ರಗಳನ್ನೂ ಬಿಡಿಸಲಾಗುತ್ತಿದೆ. ಈಗಾಗಲೇ ರಾಣಿ ಚನ್ನಮ್ಮನ ಆಸ್ಥಾನದ ಕೆಲವು ಪೇಂಟಿಂಗ್‌ ಕೆಲಸ ಮುಗಿದಿದ್ದು ನೋಡಲು ಅತ್ಯಾಕರ್ಷಕವಾಗಿದೆ.

ಸುವರ್ಣ ಸೌಧ ನೋಡಲು ಬರುವವರು ಈ ಪ್ರತಿಮೆಗಳನ್ನೂ ನೋಡುವಂತೆ ಅಂದ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂಬುದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾಹಿತಿ.

ಹೊಸ ರಸ್ತೆ ನಿರ್ಮಾಣ: ಸೌಧದ ಮುಖ್ಯಧ್ವಾರಕ್ಕೆ ಅಭಿಮುಖವಾಗಿ ನಿಲ್ಲಿಸಲಾದ ಪ್ರತಿಮೆಗಳ ಸಂಪರ್ಕಕ್ಕೆ ರಸ್ತೆಯೂ ಇರಲಿಲ್ಲ. ಈಗ ಹೆಲಿಪ್ಯಾಡ್‌ನಿಂದ ಆರಂಭವಾಗಿ, ಸೌಧದ ಮುಂಭಾಗಕ್ಕೆ ಬಂದು ಅಲ್ಲಿಂದ ಉತ್ತರ ದ್ವಾರದತ್ತ ಸಾಗಲು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

ಬೆಳಗಾವಿ ಸುವರ್ಣ ವಿಧಾನಸೌಧದ ಮುಂದಿನ ರಾಣಿ ಚನ್ನಮ್ಮನ ಪ್ರತಿಮೆಯ ಗೋಡೆಗೆ ಮಾಡಿದ ಅಲಂಕಾರ / ಪ್ರಜಾವಾಣಿ ಚಿತ್ರ
ಬೆಳಗಾವಿ ಸುವರ್ಣ ವಿಧಾನಸೌಧದ ಮುಂದಿನ ರಾಣಿ ಚನ್ನಮ್ಮನ ಪ್ರತಿಮೆಯ ಗೋಡೆಗೆ ಮಾಡಿದ ಅಲಂಕಾರ / ಪ್ರಜಾವಾಣಿ ಚಿತ್ರ

ಇಷ್ಟು ದಿನ ಪ್ರತಿಮೆಗಳನ್ನು ನೋಡಲು ಉದ್ಯಾನ ಇಳಿದು ಬರಬೇಕಾಗಿತ್ತು. ಇನ್ನು ಮುಂದೆ ವಾಹನಗಳು ನೇರವಾಗಿ ಪ್ರತಿಮೆಗಳ ಮುಂದೆಯೇ ಸಾಗಲಿವೆ.

ಬೆಂಗಳೂರು ವಿಧಾನಸೌಧದ ಮಾದರಿಯಲ್ಲೇ ಸುವರ್ಣಸೌಧದ ಮುಂದೆ ಕೂಡ ಗಾಂಧೀಜಿ ಕುಳಿತ ಭಂಗಿಯ ಪ್ರತಿಮೆ ನಿರ್ಮಿಸಲಾಗುತ್ತಿದೆ. ಜನವರಿಗೆ ಇದು ಸಿದ್ಧಗೊಳ್ಳಲಿದೆ
-ಎಸ್‌.ಎಸ್‌.ಸೊಬರದ, ಕಾರ್ಯನಿರ್ವಾಹಕ ಎಂಜಿನಿಯರ್‌ ಪಿಡಬ್ಲೂಡಿ
27 ಅಡಿ ಎತ್ತರದ ಗಾಂಧಿ ಪ್ರತಿಮೆ:
ಸುವರ್ಣ ಸೌಧಕ್ಕೆ ಮುಂದಿನ ವರ್ಷ ಮಹಾತ್ಮ ಗಾಂಧಿ ಕೂಡ ಬರಲಿದ್ದಾರೆ! ಹೌದು. ಸೌಧದ ಉತ್ತರ ದ್ವಾರದ ಮುಂದೆ ಗಾಂಧೀಜಿ ಅವರ 27 ಅಡಿ ಎತ್ತರದ ಬೃಹತ್‌ ಪ್ರತಿಮೆ ಪ್ರತಿಷ್ಠಾಪನೆ ಆಗಲಿದೆ. ಸದ್ಯಕ್ಕೆ ಚನ್ನಮ್ಮ ರಾಯಣ್ಣ ಹಾಗೂ ಅಂಬೇಡ್ಕರ್‌ ಅವರ ಪ್ರತಿಮೆಗಳು  ಮಾತ್ರ ಇವೆ. ಈ ಹಿಂದಿನ ಸರ್ಕಾರ ಸಮುದಾಯಗಳ ಮತ ಸೆಳೆಯುವ ಉದ್ದೇಶದಿಂದ ಈ ಪ್ರತಿಮೆಗಳನ್ನು ತರಾತುರಿಯಲ್ಲಿ ಪ್ರತಿಷ್ಠಾಪನೆ ಮಾಡಿತ್ತು. ಆದರೆ ರಾಷ್ಟ್ರಪಿತನ ಪ್ರತಿಮೆಯೇ ಇಲ್ಲ ಎಂಬ ದೂರುಗಳು ಪದೇಪದೇ ಕೇಳಿಬಂದಿದ್ದವು. ಇನ್ನು ಎರಡು ತಿಂಗಳಲ್ಲಿ ಗಾಂಧೀಜಿ ಪ್ರತಿಮೆಯೂ ವಿರಾಜಮಾನವಾಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT