ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಡಿ | ಸಂಚಾರ ದಟ್ಟಣೆ; ತಪ್ಪದ ಜನರ ಬವಣೆ

Published 28 ಆಗಸ್ಟ್ 2023, 3:11 IST
Last Updated 28 ಆಗಸ್ಟ್ 2023, 3:11 IST
ಅಕ್ಷರ ಗಾತ್ರ

ಸುಧಾಕರ ತಳವಾರ

ಚಿಕ್ಕೋಡಿ: ಹೊಸ ಜಿಲ್ಲಾ ಕೇಂದ್ರವಾಗಲು ಮುಂಚೂಣಿಯಲ್ಲಿರುವ, ವಾಣಿಜ್ಯ ಕೇಂದ್ರವಾಗಿ, ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿರುವ, ಗಡಿ ಕನ್ನಡಿಗರ ಸ್ವಾಭಿಮಾನದ ನಗರ ಎಂದೇ ಹಸರಾದ ಚಿಕ್ಕೋಡಿಯಲ್ಲಿ ಸಾರ್ವಜನಿಕರ ಸಮಸ್ಯೆಗಳೂ ಅಷ್ಟೇ ದೊಡ್ಡದಿವೆ. ಅದರಲ್ಲೂ ದಿನೇದಿನೇ ಬೆಳೆಯುತ್ತಿರುವ ‍ಪಟ್ಟಣದಲ್ಲಿ ಸಂಚಾರ ವ್ಯವಸ್ಥೆ ತೀರ ಹದಗೆಟ್ಟಿದೆ.

ಚಿಕ್ಕೋಡಿಯು ಇದು ಉಪವಿಭಾಗೀಯ ಕೇಂದ್ರ ಸ್ಥಾನವೂ ಆಗಿರುವುದರಿಂದ ಐದು ತಾಲ್ಲೂಕುಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಹಲವು ಸರ್ಕಾರಿ ಕಚೇರಿಗಳಿವೆ. ಸುತ್ತಮುತ್ತಲಿನ ಪ್ರದೇಶಗಳಿಗೆ ಇದು ಪ್ರಮುಖ ಮಾರುಕಟ್ಟೆ ಮತ್ತು ಶೈಕ್ಷಣಿಕ ಕೇಂದ್ರವೂ ಆಗಿದೆ. ಹೀಗಾಗಿ ವಾಹನ ಮತ್ತು ಜನ ದಟ್ಟಣೆ ಹೆಚ್ಚುತ್ತಿದೆ. ಆದರೆ, ಸುರಕ್ಷಿತ ಸಂಚಾರ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂಬ ದೂರು ಜನರಿಂದ ಕೇಳಿಬಂದಿದೆ.

ಪಟ್ಟಣದಲ್ಲಿ ಹಲವು ಸರ್ಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿವೆ. ಚಿಕ್ಕೋಡಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ನಿತ್ಯವೂ ಸಾವಿರಾರು ವಿದ್ಯಾರ್ಥಿಗಳು ಇಲ್ಲಿನ ಶಾಲೆ- ಕಾಲೇಜುಗಳಿಗೆ ಬಂದು ಹೋಗುತ್ತಾರೆ. ಶಾಲಾ ಅವಧಿ ಆರಂಭಕ್ಕೂ ಮುನ್ನ ಮತ್ತು ಶಾಲಾ ಅವಧಿ ಪೂರ್ಣಗೊಂಡ ನಂತರ ಬಸವ ಸರ್ಕಲ್, ಬಸ್ ನಿಲ್ದಾಣ ಪರಿಸರ ಸೇರಿದಂತೆ ರಸ್ತೆಗಳಲ್ಲಿ ಜನದಟ್ಟಣೆ ಹೆಚ್ಚುತ್ತದೆ. ಜೊತೆಗೆ ವಾಹನ ದಟ್ಟಣೆಯೂ ಹೆಚ್ಚುತ್ತದೆ. ಇದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಮತ್ತು ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು ಎಂಬುದು ಸಾರ್ವಜನಿಕರ ಬಹು ವರ್ಷಗಳ ಬೇಡಿಕೆಯಾಗಿದೆ.

ಬಸ್ ತಂಗುದಾನಗಳೇ ಇಲ್ಲ:  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕೇಂದ್ರ ಸ್ಥಾನವೂ ಆಗಿರುವ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ ಹೊರತುಪಡಿಸಿದರೆ, ಪಟ್ಟಣ ವ್ಯಾಪ್ತಿಯ ಪ್ರಮುಖ ಬಸ್ ನಿಲುಗಡೆ ಸ್ಥಳಗಳಲ್ಲಿ ಬಸ್ ತಂಗುದಾನಗಳೇ ಇಲ್ಲ. ಇದರಿಂದ ಪ್ರಯಾಣಿಕರು ಬಿಸಿಲು, ಗಾಳಿ ಮಳೆಯಲ್ಲಿಯೇ ನಿಂತು ಬಸ್ಸಿಗಾಗಿ ಕಾಯುವ ಅನಿವಾರ್ಯತೆ ಎದುರಾಗಿದೆ.

ಚಿಕ್ಕೋಡಿ ಪಟ್ಟಣ ವ್ಯಾಪ್ತಿಯ ಬಸವ ಸರ್ಕಲ್, ಅಂಕಲಿ ಖೂಟ್, ಇಂದಿರಾ ನಗರ ಕ್ರಾಸ್ ಮೊದಲಾದ ಕಡೆಗಳಲ್ಲಿ ಪ್ರಮುಖ ಸ್ಥಳಗಳಲ್ಲಿ ಬಸ್ಸಿಗಾಗಿ ನಿತ್ಯವೂ ಜನ ಕಾಯುವುದು ಸಾಮಾನ್ಯವಾಗಿದೆ. ಆದರೆ, ಈ ಸ್ಥಳಗಳಲ್ಲಿ ಬಸ್ ಶೆಲ್ಟರ್‌ಗಳನ್ನು ನಿರ್ಮಿಸದೇ ಇರುವುದರಿಂದ ಪ್ರಯಾಣಿಕರು ಬಿಸಿಲು, ಮಳೆ ಎನ್ನದೇ ಬಸ್‌ಗಾಗಿ ಕಾಯಬೇಕಾಗಿದೆ.

ವಿಶೇಷವಾಗಿ ಶಾಲಾ ಅವಧಿಯಲ್ಲಿ ಸಾವಿರಾರು ಮಕ್ಕಳು ಸುತ್ತಮುತ್ತಲಿನ ಹಳ್ಳಿಗಳಿಂದ ಇಲ್ಲಿನ ಶಾಲಾ– ಕಾಲೇಜುಗಳಿಗೆ ಬಂದು ಹೋಗುತ್ತಾರೆ. ಅವರೂ ತೊಂದರೆ ಅನುಭವಿಸುವಂತಾಗಿದೆ.

ಚಿಕ್ಕೋಡಿ ಪಟ್ಟಣ ವ್ಯಾಪ್ತಿಯ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಮತ್ತು ಟ್ರಾಫಿಕ್ ಸಿಗ್ನಲ್ ದೀಪ ಅಳವಡಿಸಲು ಪುರಸಭೆಯಿಂದ ₹10 ಲಕ್ಷ ಅನುದಾನ ನೀಡಲು ನಿರ್ಧರಿಸಿತ್ತು. ಆದರೆ ಅವುಗಳ ಅನುಷ್ಠಾನ ಮೊತ್ತ ಅಧಿಕವಾಗಿದ್ದರಿಂದ ಸ್ಥಗಿತಗೊಂಡಿದೆ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ನಿಡವಣಿ. ಮುಂಬರುವ ದಿನಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಚರ್ಚೆ ನಡೆಸಿ ಆದ್ಯತೆ ಮೇರೆಗೆ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಅನುದಾನ ನೀಡಲಾಗುವುದು. ಅಗತ್ಯ ಸ್ಥಳಗಳಲ್ಲಿ ಬಸ್ ಶೆಲ್ಟರ್ ನಿರ್ಮಿಸಲು ಚುನಾಯಿತ ಪ್ರತಿನಿಧಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ ಎನ್ನುತ್ತಾರೆ ಅವರು.

ಜನರಿಗೂ ಉಪಯೋಗವಿಲ್ಲ

ವಿಪರ್ಯಾಸವೆಂದರೆ ಅಂಕಲಿ ಕೂಟ್ ಬಳಿಯಿಂದ ಅಂಕಲಿ ಕಡೆಗೆ ಹೋಗುವ ಸಂಕೇಶ್ವರ- ಜೇವರ್ಗಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಬಸ್ ಶೆಲ್ಟರ್ ಇದೆ. ಜೊತೆಗೆ ಕಬ್ಬೂರ, ಮಹಾಲಿಂಗಪುರ ಕಡೆಗೆ ಹೋಗುವ ಎನ್–ಎಂ ರಸ್ತೆಗೆ ಹೊಂದಿಕೊಂಡು ಮಿನಿ ವಿಧಾನಸೌಧದ ಎದುರು ಬಸ್ ಶೆಲ್ಟರ್ ಇದೆ. ಅಲ್ಲಿ ಜನ ನಿಲ್ಲುವುದೂ ಇಲ್ಲ, ಬಸ್ ನಿಲುಗಡೆಯನ್ನೂ ಮಾಡುವುದಿಲ್ಲ. ಹೀಗಾಗಿ ಇಕ್ಕಟ್ಟಾದ ರಸ್ತೆಗಳಲ್ಲಿಯೇ ಬಸ್‌ಗಳನ್ನು ನಿಲುಗಡೆ ಮಾಡುವುದರಿಂದ ವಾಹನ ದಟ್ಟಣೆ ಸಾಮಾನ್ಯವಾಗಿದೆ.

‘ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿಂದ ಬಸ್ ನಿಲ್ದಾಣಗಳನ್ನು ಮಾತ್ರ ನಿರ್ಮಿಸಲಾಗುತ್ತದೆ. ಬಸ್ ಶೆಲ್ಟರ್‌ಗಳನ್ನು ಆಯಾ ನಗರ ಸ್ಥಳೀಯ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ದಾನಿಗಳು ಅಥವಾ ಇತರೆ ಸ್ವಯಂ ಸೇವಾ ಸಂಸ್ಥೆಗಳು ನಿರ್ಮಿಸುತ್ತವೆ’  ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೂಲಗಳು ತಿಳಿಸಿವೆ.

ಏಕಮುಖ ಸಂಚಾರ ವ್ಯವಸ್ಥೆ ಅಗತ್ಯ

ಪಟ್ಟಣದ ಪ್ರಮುಖ ಮಾರುಕಟ್ಟೆ ಗಣಪತಿ ಪೇಟೆ ರಸ್ತೆ ಇಕ್ಕಟ್ಟಾಗಿದೆ. ಇದರಿಂದಾಗಿ ಇಲ್ಲಿ ನಿತ್ಯವೂ ಸಂಚಾರ ದಟ್ಟಣೆ ಕಿರಿಕಿರಿ ಸಾಮಾನ್ಯವಾಗಿದೆ. ಇಲ್ಲಿ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಜನರ ಕೂಗು. ಚಿಕ್ಕೋಡಿ ಪಟ್ಟಣದ ಬಸವ ಸರ್ಕಲ್ ಮತ್ತು ಶಿಂಧಿ ಕೂಟ್ (ಯಕ್ಸಂಬಾ ರಸ್ತೆ) ಬಳಿ ಟ್ರಾಫಿಕ್ ಸಿಗ್ನಲ್ ಅಳವಡಿಸುವ ಅಗತ್ಯತೆ ಇದೆ ಎಂದು ಕಳೆದ ವರ್ಷವೇ ಇಲ್ಲಿನ ಪೊಲೀಸ್ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದಾರೆ. ಅದು ಅನುಷ್ಠಾನಗೊಳ್ಳಬೇಕಿದೆ. ಗಣಪತಿ ಪೇಠದಲ್ಲಿ ಏಕ ಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಲು ಪರ್ಯಾಯ ರಸ್ತೆ ವ್ಯವಸ್ಥೆ ಬೇಕು. ಪುರಸಭೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಇದರ ಸಮೀಕ್ಷೆ ನಡೆಸಿ ವರದಿ ನೀಡಬೇಕು. ಅದನ್ನು ಜಿಲ್ಲಾಧಿಕಾರಿಗಳು ಅನುಮೋದಿಸಿ ಆದೇಶ ನೀಡಿದರೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸಬಹುದಾಗಿದೆ ಎಂದು ಪೊಲೀಸ್ ಇಲಾಖೆ ಮೂಲಗಳು ತಿಳಿಸಿವೆ.

ಜನ ಏನಂತಾರೆ?

ಪಟ್ಟಣವು ನಾಗಾಲೋಟದಲ್ಲಿ ಬೆಳೆಯುತ್ತಿದೆ. ಇಲ್ಲಿ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಲ್ಲಿನ ಬಸವ ಸರ್ಕಲ್ ಬಸ್ ನಿಲ್ದಾಣ ಪರಿಸರ ಶಿಂಧಿ ಕೂಟ್ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಟಿವಿ ಕ್ಯಾಮೆರಾ ಮತ್ತು ಟ್ರಾಫಿಕ್ ಸಿಗ್ನಲ್ ಅಳವಡಿಸಬೇಕು. ಇದರಿಂದ ಸಂಭವನೀಯ ಅಪಘಾತಗಳನ್ನು ತಡೆಗಟ್ಟುವ ಜೊತೆಗೆ ಸಂಭವಿಸಿದ ಅಪಘಾತ ಅಥವಾ ಅಪರಾಧ ಕೃತ್ಯಗಳನ್ನು ಶೋಧಿಸಲು ಸಹಕಾರಿಯಾಗಲಿದೆ - ಅಪ್ಪಾಸಾಹೇಬ ಕುರಣೆ ಸಾಮಾಜಿಕ ಕಾರ್ಯಕರ್ತ

ಪ್ರಮುಖ ಮಾರುಕಟ್ಟೆ ಗಣಪತಿ ಪೇಟೆ ರಸ್ತೆ ಇಕ್ಕಟ್ಟಾಗಿದ್ದು ಇಲ್ಲಿ ಸಂಚಾರ ದಟ್ಟಣೆ ಸಾಮಾನ್ಯವಾಗಿದೆ. ಆದರೆ ಇಲ್ಲಿ ‘ಒನ್ ವೇ’ ಜಾರಿಗೊಳಿಸಲು ಪರ್ಯಾಯ ರಸ್ತೆ ವ್ಯವಸ್ಥೆ ಇಲ್ಲ. ಹೀಗಾಗಿ ಸಂಬಂಧಿತ ಅಧಿಕಾರಿಗಳು ವಾಹನ ಮತ್ತು ಜನದಟ್ಟಣೆ ನಿಯಂತ್ರಣಕ್ಕೆ ವಿಶೇಷ ಯೋಚನೆ ಮತ್ತು ಯೋಜನೆ ಅನುಸರಿಸಬೇಕಾಗಿದೆ - ತುಕಾರಾಮ ಕೋಳಿ ಸಾಮಾಜಿಕ ಕಾರ್ಯಕರ್ತ

ವಾಹನ ಮತ್ತು ಜನದಟ್ಟಣೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಸರ್ಕಾರಿ ಕಚೇರಿ ಅವಧಿ ಮತ್ತು ಶಾಲಾ-ಕಾಲೇಜುಗಳ ಅವಧಿ ಆರಂಭ ಮತ್ತು ಬಿಡುವಿನ ವೇಳೆಯಲ್ಲಿ ತುಂಬ ಸಂಚಾರ ಕಿರಿಕಿರಿ ಆಗುತ್ತಿದೆ. ಆದ್ದರಿಂದ ಬಸವ ಸರ್ಕಲ್ ಮತ್ತು ಬಸ್ ನಿಲ್ದಾಣ ಪರಿಸರದಲ್ಲಿ ಟ್ರಾಫಿಕ್ ಸಿಗ್ನಲ್ ಮತ್ತು ಸಿಸಿ ಟಿವಿ ಕ್ಯಾಮೆರಾ ಅಳವಡಿಸುವ ಅನಿವಾರ್ಯತೆ ಇದೆ - ಮಾಣಿಕಮ್ಮ ಕಬಾಡಗಿ ವಕೀಲರು

ಚಿಕ್ಕೋಡಿ ಪಟ್ಟಣ ಬಸವ ಸರ್ಕಲ್‌ನಲ್ಲಿ ವಾಹನ ಮತ್ತು ಜನದಟ್ಟಣೆ
ಚಿಕ್ಕೋಡಿ ಪಟ್ಟಣ ಬಸವ ಸರ್ಕಲ್‌ನಲ್ಲಿ ವಾಹನ ಮತ್ತು ಜನದಟ್ಟಣೆ
ಚಿಕ್ಕೋಡಿಯಲ್ಲಿ ಸರ್ಕಲ್‌ನಲ್ಲಿಯೇ ಶಾಲಾ ಮಕ್ಕಳ ಓಡಾಟ
ಚಿಕ್ಕೋಡಿಯಲ್ಲಿ ಸರ್ಕಲ್‌ನಲ್ಲಿಯೇ ಶಾಲಾ ಮಕ್ಕಳ ಓಡಾಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT