ಶುಕ್ರವಾರ, ಮಾರ್ಚ್ 31, 2023
25 °C

ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌: ಅಪಘಾತದಲ್ಲಿ ಯುವಕ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಇಲ್ಲಿನ ಮಹಾಂತೇಶ ನಗರದ ಲವ್‌ಡೇಲ್‌ ಸ್ಕೂಲ್‌ ಹತ್ತಿರ ಅವೈಜ್ಞಾನಿಕವಾಗಿ ಹಾಕಿದ ಸ್ಪೀಡ್‌ ಬ್ರೇಕರ್‌ನಲ್ಲಿ ಬೈಕ್‌ ಅಪಘಾತಕ್ಕೀಡಾಗಿ, ಯುವಕ ಮೃತಪಟ್ಟಿದ್ದಾನೆ.

ಮಹಾಂತೇಶ ನಗರದ ನಿವಾಸಿ, ಎಂಜಿನಿಯರಿಂಗ್‌ ವಿದ್ಯಾರ್ಥಿ ಪ್ರತೀಕ್ ಫಕೀರಪ್ಪ ಹೊಂಗಲ (23) ಮೃತಪಟ್ಟವರು. ಶನಿವಾರ ತಡರಾತ್ರಿ ಈ ಸ್ಪೀಡ್‌ ಬ್ರೇಕರ್‌ ಬಳಿ ಅಪಘಾತವಾಗಿ ‍ಪ್ರತೀಕ್‌ ಗಾಯಗೊಂಡಿದ್ದರು. ಭಾನುವಾರ ನಸುಕಿನಲ್ಲಿ ವಾಯುವಿಹಾರಿಗಳು ಹೊರಬಂದಾಗಲೇ ವಿಷಯ ಗೊತ್ತಾಗಿದೆ.

ಮಹಾಂತೇಶ ನಗರದ ಸೆಕ್ಟರ್‌ 12ರ ಮುಖ್ಯರಸ್ತೆಯಲ್ಲಿ ಶನಿವಾರ ಸಂಜೆ ಸ್ಪೀಡ್‌ ಬ್ರೇಕರ್‌ ನಿರ್ಮಿಸಲಾಗಿದೆ. ನಿಗದಿಗಿಂತ ಎತ್ತರವಾಗಿ ಡಾಂಬರು ಹಾಕಿದ್ದು, ಅದಕ್ಕೆ ಬಿಳಿ ಬಣ್ಣ ಕೂಡ ಬಳಿದಿರಲಿಲ್ಲ. ಅಪಘಾತಕ್ಕೆ ಇದೇ ಕಾರಣ ಎಂದು ಮೃತನ ಕುಟುಂಬದವರು ದೂರಿದರು.

ತಡರಾತ್ರಿ ಇದೇ ಮಾರ್ಗದಲ್ಲಿ ಬೈಕ್‌ ಮೇಲೆ ಮನೆಯತ್ತ ಹೊರಟಿದ್ದ ಪ್ರತೀಕ್‌ಗೆ ಸ್ಪೀಡ್‌ ಬ್ರೇಕರ್‌ ಹಾಕಿದ್ದು ಗೊತ್ತಾಗಲಿಲ್ಲ. ಚಲಿಸುತ್ತಿದ್ದ ಬೈಕ್‌ ಸ್ಪೀಡ್‌ ಬ್ರೇಕರ್‌ ಬಳಿ ಏಕಾಏಕಿ ಪುಟಿದು, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಟ್ಯಾಂಕರ್‌ಗೆ ಗುದ್ದಿತು. ಪ್ರತೀಕ್‌ ತೀವ್ರ ಪೆಟ್ಟಿನಿಂದ ರಸ್ತೆ ಮೇಲೆ ಬಿದ್ದರು.

ತಡರಾತ್ರಿ ಘಟನೆ ನಡೆದ ಕಾರಣ ಯಾರಿಗೂ ಗೊತ್ತಾಗಿಲ್ಲ. ಭಾನುವಾರ ನಸುಕಿನ 5.30ರ ಸುಮಾರಿಗೆ ವಾಯುವಿಹಾರಕ್ಕೆ ಹೊರಟಿದ್ದ ಎಸ್.ಎಸ್.ಹಿರೇಮಠ ಅವರು ಗಮನಿಸಿದರು. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ‍ಪ್ರತೀಕ್‌ ಅವರ ನೆರವಿಗೆ ಧಾವಿಸಿದರು. ಆಂಬುಲೆನ್ಸ್‌ಗೆ ಕರೆ ಮಾಡಲು ಮೊಬೈಲ್‌ ಕೊಡಿ ಎಂದು ಜನರ ಬಳಿ ಕೇಳಿದರೂ ಯಾರೂ ಸ್ಪಂದಿಸಲಿಲ್ಲ.

ಕೊನೆಗೆ ಪ್ರತೀಕ್ ತಾಯಿ ಅವರ ಮೊಬೈಲ್‌ಗೆ ಕರೆ ಮಾಡಿದರು. ಕರೆ ಸ್ವೀಕರಿಸಿ ಕುಟುಂಬದವರಿಗೆ ವಿಷಯ ಮುಟ್ಟಿಸಿದರು. ನಂತರ ಆಂಬುಲೆನ್ಸ್ ಕರೆಯಿಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರೊಳಗೆ ಪ್ರತೀಕ ಅವರು ಪ್ರಾಣ ಕಳೆದುಕೊಂಡಿದ್ದರು ಎಂದು ವೈದ್ಯರು ತಿಳಿಸಿದರು.

ಪ್ರತೀಕ್ ಅವರ ಅಣ್ಣ ಪುಣೆಯಲ್ಲಿ ಕೆಲಸ ಮಾಡುತ್ತಾರೆ. ಹೀಗಾಗಿ, ಮಹಾಂತೇಶನಗರದಲ್ಲಿ ತಾಯಿಯೊಂದಿಗೆ ಪ್ರತೀಕ್‌ ಮಾತ್ರ ವಾಸವಾಗಿದ್ದರು. ರಾತ್ರಿ ಗೆಳೆಯರನ್ನು ಭೇಟಿ ಆಗಿ ಬರುವುದಾಗಿ ಹೇಳಿದ್ದ ಮಗ ಶವವಾಗಿ ಮನೆಗೆ ಬಂದಿದ್ದನ್ನು ಕಂಡು ತಾಯಿ ಆಕ್ರಂದನ ಮುಗಿಲು ಮುಟ್ಟಿತ್ತು.

ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
*


ಯುವಕನ ಸಾವಿಗೆ ಕಾರಣವಾದ ಸ್ಪೀಡ್‌ ಬ್ರೇಕರ್‌

‘ಅವೈಜ್ಞಾನಿಕ ಸ್ಪೀಡ್‌ ಬ್ರೇಕರ್‌’

‘ವಾಹನಗಳ ವೇಗ ತಡೆಯಲು ಮಹಾಂತೇಶ ನಗರದ ಹಲವು ಕಡೆ ಸ್ಪೀಡ್‌ ಬ್ರೇಕರ್‌ ಹಾಕಲಾಗಿದೆ. ಆದರೆ, ಇವುಗಳು ಅವೈಜ್ಞಾನಿಕವಾಗಿದ್ದು, ಅಪಘಾತ ತಪ್ಪಿಸುವ ಬದಲು ಅಪಘಾತಕ್ಕೆ ಕಾರಣವಾಗಿವೆ. ಪ್ರತೀಕ್ ಅವರ ಸಾವಿಗೆ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಿಬ್ಬಂದಿ ಮಾಡಿದ ಅವೈಜ್ಞಾನಿಕ ಕೆಲಸವೇ ಕಾರಣ’ ಎಂದು ಮೃತನ ಕುಟುಂಬದವರು ಆಕ್ರೋಶ ಹೊರಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು