ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ | ಎಸ್‌ಎಸ್‌ಎಲ್‌ಸಿ ಪರೀಕ್ಷೆ–2: ಪರೀಕ್ಷೆ ನೋಂದಣಿಗೆ ಮಕ್ಕಳ ನಿರಾಸಕ್ತಿ

Published 13 ಜೂನ್ 2024, 4:42 IST
Last Updated 13 ಜೂನ್ 2024, 4:42 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಾರ್ಷಿಕ–1ನೇ ಪರೀಕ್ಷೆ ಪೂರ್ಣಗೊಳಿಸದ 23,801 ವಿದ್ಯಾರ್ಥಿಗಳ ಪೈಕಿ 23,061 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ–2 ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 760 ವಿದ್ಯಾರ್ಥಿಗಳು ಎರಡನೇ ಪ್ರಯತ್ನದಿಂದ ದೂರ ಸರಿದಿದ್ದಾರೆ.

2023–24ನೇ ಸಾಲಿನ ಪರೀಕ್ಷೆಯಲ್ಲಿ ಶೇ 64.93 ಫಲಿತಾಂಶ ದಾಖಲಿಸಿದ್ದ ಬೆಳಗಾವಿ ಶೈಕ್ಷಣಿಕ ಜಿಲ್ಲೆ 29ನೇ ಸ್ಥಾನ ಗಳಿಸಿತ್ತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ ಶೇ 69.82 ಫಲಿತಾಂಶದೊಂದಿಗೆ 25ನೇ ಸ್ಥಾನ ಗಳಿಸಿತ್ತು. ಬೆಳಗಾವಿಯಲ್ಲಿ 10,798, ಚಿಕ್ಕೋಡಿಯಲ್ಲಿ 13,003 ಸೇರಿದಂತೆ 23,801 ವಿದ್ಯಾರ್ಥಿಗಳು ಪರೀಕ್ಷೆ ಪೂರ್ಣಗೊಳಿಸಿರಲಿಲ್ಲ.

ಆದರೆ, ಪರೀಕ್ಷೆಯಲ್ಲಿ ತೇರ್ಗಡೆಯಾಗದವರನ್ನು ಶಾಲಾ ಶಿಕ್ಷಣ ಇಲಾಖೆ ಕಡೆಗಣಿಸಿರಲಿಲ್ಲ. ಅವರಿಗಾಗಿ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ವಿಶೇಷ ತರಗತಿ ಸಂಘಟಿಸಿತ್ತು. ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ಣಗೊಳಿಸಲು ಈಗ ಮೂರು ಅವಕಾಶಗಳಿವೆ. ಮೊದಲ ಬಾರಿ ತೇರ್ಗಡೆಯಾಗದವರು ಮೂರು ಬಾರಿ ಪರೀಕ್ಷೆ ಬರೆಯಬಹುದು. ಈ ಅವಕಾಶ ಬಳಸಿಕೊಳ್ಳಿ’ ಎಂದು ಜಾಗೃತಿ ಮೂಡಿಸಿತ್ತು. ಫಲಿತಾಂಶ ಸುಧಾರಣೆಗೆ ನಾನಾ ಕಸರತ್ತು ನಡೆಸಿತ್ತು. ಆದರೆ, ವಿಶೇಷ ತರಗತಿಗೆ ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಪರೀಕ್ಷೆ ಬರೆಯಲು ಪ್ರೇರಣೆ:

ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಿಕ್ಷಕರ ಪ್ರಯತ್ನದ ಮಧ್ಯೆಯೂ, ಹೆಚ್ಚಿನ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ವಾರ್ಷಿಕ–2 ಪರೀಕ್ಷೆಗೆ ನೋಂದಣಿ ಮಾಡಿಕೊಂಡಿಲ್ಲ. ಇನ್ನೂ ನೋಂದಣಿ ಮಾಡಿಕೊಂಡವರ ಪೈಕಿ ಎಲ್ಲರೂ ಪರೀಕ್ಷೆಗೆ ಹಾಜರಾಗದಿದ್ದರೆ, ಮತ್ತೆ ಫಲಿತಾಂಶ ಕುಸಿಯಲಿದೆ. ಹೀಗಾಗಿ ಪರೀಕ್ಷೆಗೆ ನೋಂದಾಯಿಸಿಕೊಂಡವರನ್ನು ಶಿಕ್ಷಕರು ಸಂಪರ್ಕಿಸಿ, ಕಡ್ಡಾಯವಾಗಿ ಪರೀಕ್ಷೆ ಬರೆಯಲು ಪ್ರೇರಣೆ ತುಂಬುತ್ತಿದ್ದಾರೆ.


ಜೂನ್‌ 14ರಿಂದ 22ರವರೆಗೆ ಪರೀಕ್ಷೆ ನಡೆಯಲಿದ್ದು, ಬೆಳಗಾವಿಯಲ್ಲಿ 105, ಚಿಕ್ಕೋಡಿಯಲ್ಲಿ 66 ಸೇರಿದಂತೆ 171 ವಿದ್ಯಾರ್ಥಿಗಳು ಖಾಸಗಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಮೊದಲ ಯತ್ನದಲ್ಲಿ ವಿಫಲರಾದ ಎಲ್ಲ ವಿದ್ಯಾರ್ಥಿಗಳನ್ನು ಎರಡನೇ ಹಂತದ ಪರೀಕ್ಷೆಗೆ ಕೂಡ್ರಿಸಲು ಪ್ರಯತ್ನಿಸಿದ್ದೆವು. ಆದರೂ ಕೆಲವರು ನೋಂದಾಯಿಸಿಕೊಂಡಿಲ್ಲ. ಮೂರನೇ ಹಂತದ ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವಂತೆ ತಿಳಿವಳಿಕೆ ಮೂಡಿಸಲಾಗುವುದು
-ಮೋಹನಕುಮಾರ ಹಂಚಾಟೆ ಡಿಡಿಪಿಐ ಚಿಕ್ಕೋಡಿ
ಫಲಿತಾಂಶ ವೃದ್ಧಿಸಿಕೊಳ್ಳಲು ಯತ್ನ
ಎಸ್‌ಎಸ್‌ಎಲ್‌ಸಿ ವಾರ್ಷಿಕ–1ನೇ ಪರೀಕ್ಷೆ ಪೂರ್ಣಗೊಳಿಸಿದ್ದರೂ 1608 ವಿದ್ಯಾರ್ಥಿಗಳು ಎರಡನೇ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಬೆಳಗಾವಿಯಲ್ಲಿ 1196 ಚಿಕ್ಕೋಡಿಯಲ್ಲಿ 412 ವಿದ್ಯಾರ್ಥಿಗಳಿದ್ದಾರೆ. ‘ಮೊದಲ ಯತ್ನದಲ್ಲಿ ವಿವಿಧ ವಿಷಯಗಳಲ್ಲಿ ತಮ್ಮ ನಿರೀಕ್ಷೆಯಂತೆ ಅಂಕ ಬಾರದ್ದರಿಂದ ಹಲವು ವಿದ್ಯಾರ್ಥಿಗಳು ಫಲಿತಾಂಶ ಸುಧಾರಿಸಿಕೊಳ್ಳಲು ಎರಡನೇ ಯತ್ನಕ್ಕೆ ಮುಂದಾಗಿದ್ದಾರೆ. ಹೆಚ್ಚಿನವರು ಎಲ್ಲ ವಿಷಯಗಳ ಪರೀಕ್ಷೆ ಬರೆಯುತ್ತಿಲ್ಲ. ಆಯ್ದ ವಿಷಯಗಳಿಗಷ್ಟೇ ನೋಂದಣಿ ಮಾಡಿಕೊಂಡಿದ್ದಾರೆ. ಗಣಿತ ವಿಜ್ಞಾನದಂಥ ಕಠಿಣ ವಿಷಯಗಳಿಂದ  ದೂರವುಳಿದ ಮಕ್ಕಳು ಸರಳವಾಗಿ ಹೆಚ್ಚಿನ ಅಂಕ ಗಳಿಸಬಲ್ಲ ವಿಷಯಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಚಿಕ್ಕೋಡಿ ಡಿಡಿಪಿಐ ಮೋಹನಕುಮಾರ ಹಂಚಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT