ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ‘ಧೈರ್ಯ’ ತುಂಬಿದ ಅಧಿಕಾರಿಗಳು

‘ಪ್ರಜಾವಾಣಿ’ ಕಚೇರಿಯಲ್ಲಿ ಫೋನ್‌ ಇನ್‌ ಕಾರ್ಯಕ್ರಮ
Last Updated 14 ಜನವರಿ 2020, 19:30 IST
ಅಕ್ಷರ ಗಾತ್ರ

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಗೆ ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿ, ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಫೋನ್‌ ಇನ್‌’ ಕಾರ್ಯಕ್ರಮ ಯಶಸ್ವಿಯಾಯಿತು.

ಬೆಳಗಾವಿ ಹಾಗೂ ಚಿಕ್ಕೋಡಿ ಅವಳಿ ಶೈಕ್ಷಣಿಕ ಜಿಲ್ಲೆಗಳ ಡಿಡಿಪಿಐಗಳಾದ ಎ.ಬಿ. ಪುಂಡಲೀಕ ಮತ್ತು ಮೋಹನ್‌ಕುಮಾರ್‌ ಹಂಚಾಟೆ ಜಿಲ್ಲೆಯ ವಿವಿಧೆಡೆಯಿಂದ ಕರೆ ಮಾಡಿದ ವಿದ್ಯಾರ್ಥಿಗಳಿಗೆ ‘ಕಿವಿ’ಯಾದರು. ಪರೀಕ್ಷೆ ಕುರಿತ ಆತಂಕ ಮತ್ತು ಗೊಂದಲಗಳನ್ನು ನಿವಾರಿಸಿದರು. ಮಕ್ಕಳೊಂದಿಗೆ ಆಪ್ತವಾಗಿ ಮಾತನಾಡಿ, ಪ್ರಶ್ನೆಗಳಿಗೆ ಉತ್ತರಿಸಿ ‘ಶಿಕ್ಷಕ’ರಾದರು. 10 ಮಂದಿ ವಿವಿಧ ವಿಷಯ ತಜ್ಞರು ನಿರ್ದಿಷ್ಟ ವಿಷಯಗಳ ಬಗ್ಗೆ ಸಲಹೆ ನೀಡಿದರು. ಪ್ರಶ್ನೆಗಳಿಗೆ ಉತ್ತರ ಬರೆಯುವ ಸರಳ ವಿಧಾನಗಳನ್ನು ತಿಳಿಸಿಕೊಟ್ಟರು.

ವಿವಿಧ ವಿಷಯ:ಗಣಿತ, ವಿಜ್ಞಾನ, ಇಂಗ್ಲಿಷ್, ಹಿಂದಿ, ಸಮಾಜವಿಜ್ಞಾನ, ಭಾಷಾ ವಿಷಯಗಳ ಬಗ್ಗೆ ಹೆಚ್ಚಿನ ಪ್ರಶ್ನೆಗಳು ಬಂದವು. ಪರೀಕ್ಷೆಯ ಸ್ವರೂಪ, ಈ ಬಾರಿಯ ಬದಲಾವಣೆಗಳೇನು, ಹೆಚ್ಚು ಅಂಕ ಗಳಿಸಲು ಯಾವ ವಿಧಾನದಲ್ಲಿ ಓದಬೇಕು, ಸರಣಿ ಪರೀಕ್ಷೆಗಳಿಂದಾಗುವ ಲಾಭಗಳೇನು ಎನ್ನುವುದನ್ನು ಮನದಟ್ಟು ಮಾಡಿಕೊಟ್ಟರು.

‘ಫಲಿತಾಂಶ ಸುಧಾರಣೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಶಿಕ್ಷಕರು ಮಕ್ಕಳ ಮನೆಗಳಿಗೇ ಹೋಗಿ ಹೇಳಿ ಕೊಡುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಶಿಕ್ಷಕರಿಗೆ ಕರೆ ಮಾಡಿ ಗೊಂದಲ ನಿವಾರಿಸಿಕೊಳ್ಳಬಹುದು. ‘ರಾತ್ರಿ ಓದು ಕಾರ್ಯಕ್ರಮ’ದಲ್ಲಿ ಕಲಿಕೆಯಲ್ಲಿ ಹಿಂದುಳಿದವರಿಗೆ ಶಾಲೆಗಳಲ್ಲೇ ಹೆಚ್ಚುವರಿಯಾಗಿ ತರಗತಿ ನಡೆಸಲಾಗುತ್ತಿದೆ. 25 ಮಕ್ಕಳನ್ನು ಒಬ್ಬ ಶಿಕ್ಷಕರಿಗೆ ವಹಿಸಿ ‘ದತ್ತು ಯೋಜನೆ’ ಅನುಷ್ಠಾನಗೊಳಿಸಲಾಗಿದೆ. ಅವರು ಮಕ್ಕಳ ಹಾಜರಾತಿ, ಕಲಿಕೆ, ಪರಿಹಾರ ಬೋಧನೆ ಬಗ್ಗೆ ಗಮನಹರಿಸುತ್ತಾರೆ. ಬೆಳಿಗ್ಗೆ 5ಕ್ಕೇ ಕರೆ ಮಾಡಿ, ಓದಿಕೊಳ್ಳುವಂತೆ ತಿಳಿಸುತ್ತಾರೆ’ ಎಂದು ಡಿಡಿ‍ಪಿಐಗಳು ತಿಳಿಸಿದರು.

ತೆರೆದ ಪುಸ್ತಕ ಪ್ರಯೋಗ:‘ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ವಿ. ರಾಜೇಂದ್ರ ಅವರ ಸೂಚನೆಯಂತೆ ‘ತೆರೆದ ಪುಸ್ತಕ’ ಪ್ರಯೋಗ ಮಾಡಲಾಗುತ್ತಿದೆ. ಮಕ್ಕಳು ಪುಸ್ತಕ ನೋಡಿಕೊಂಡು ಅಣಕು ಪರೀಕ್ಷೆ ಎದುರಿಸಬೇಕು. ಅವರು ಪ್ರಶ್ನೆಗೆ ಪುಸ್ತಕದಲ್ಲಿರುವುದನ್ನು ಓದಿ ಬರೆಯುವುದರಿಂದ ನೆನಪಿನಲ್ಲಿ ಉಳಿಯುತ್ತದೆ. ಮುಖ್ಯ ಪರೀಕ್ಷೆಗೆ ಅನುಕೂಲವಾಗುತ್ತದೆ. ಓದುವ ಮೂಲಕ ಕಲಿಕೆ ಹಾಗೂ ನಾನೂ 100 ಅಂಕ ಪಡೆಯಬಲ್ಲೆ ಎಂಬ ಆತ್ಮಸ್ಥೈರ್ಯ ತುಂಬುವುದು ಇದರ ಉದ್ದೇಶ’ ಎಂದು ಹೇಳಿದರು.

‘ಮಕ್ಕಳಿಗೆ ಇಲಾಖೆಯಿಂದ 3 ಸೆಟ್‌ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದೆ. ಭಯ ನಿವಾರಣೆಗಾಗಿ ಮಂಡಳಿಯಿಂದಲೇ ಸರಣಿ ಪರೀಕ್ಷೆ, ಕಿರುಪರೀಕ್ಷೆ ಮಾಡಲಾಗುತ್ತಿದೆ. ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್‌ ಅವರ ಸೂಚನೆಯಂತೆ ಮಕ್ಕಳು ಸಂಭ್ರಮದಿಂದ ಪರೀಕ್ಷೆ ಎದುರಿಸಲು ಬೇಕಾದ ವ್ಯವಸ್ಥೆ ಕಲ್ಪಿಸಲಾಗಿದೆ. ಪೋಷಕರು ಕೂಡ ಮಕ್ಕಳ ಮೇಲೆ ಹೆಚ್ಚಿನ ಒತ್ತಡ ಹಾಕಬಾರದು. ವೇಳಾಪಟ್ಟಿ ಪ್ರಕಾರ ಅಭ್ಯಾಸಕ್ಕೆ ಅನುವು ಮಾಡಿಕೊಡಬೇಕು. ಮಕ್ಕಳು ಆರೋಗ್ಯದ ರಕ್ಷಣೆಗೂ ಆದ್ಯತೆ ಕೊಡಬೇಕು’ ಎಂದು ಸಲಹೆ ನೀಡಿದರು.

‘ಈ ಬಾರಿ, ದ್ವಿತೀಯ ಭಾಷೆಯ ಪರೀಕ್ಷೆಗೆ ಅರ್ಧ ಗಂಟೆ ಹೆಚ್ಚುವರಿ ಸಮಯ ನೀಡಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಎಲ್ಲ ಕೇಂದ್ರಗಳಲ್ಲೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುತ್ತದೆ. ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸ ಮಾಡಿ ಬಂದರೆ, ಯಾವುದೇ ಭಯ ಇರುವುದಿಲ್ಲ. ಪರೀಕ್ಷೆ ಮುಗಿಯುವವರೆಗೂ ಟಿವಿ, ಮೊಬೈಲ್‌ಗಳಿಂದ ದೂರವಿರಬೇಕು. ಉತ್ಸಾಹದಿಂದ ಪರೀಕ್ಷಾ ಕೊಠಡಿಗೆ ಬರಬೇಕು. ಓದು ಆತ್ಮವಿಶ್ವಾಸ ವೃದ್ಧಿಸುತ್ತದೆ. ಇದಕ್ಕಾಗಿ ಪಠ್ಯಪುಸ್ತಕವನ್ನು ಚೆನ್ನಾಗಿ ಓದಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಪ್ರಶ್ನೋತ್ತರ:

ಅಥಣಿ ರಾಯಲ್‌ ಶಾಲೆಯ ರಶ್ಮಿ: ಹೋದ ವರ್ಷದ ಪ್ಯಾಟ್ರನ್ನಲ್ಲೇ ಪ್ರಶ್ನೆಪತ್ರಿಕೆಗಳು ಇರುತ್ತವೆಯೇ?

ಪ್ಯಾಟ್ರನ್‌ನಲ್ಲಿ ಬದಲಾವಣೆ ಇಲ್ಲ. ಇಲಾಖೆಯಿಂದ ನೀಡಿರುವ ‘ದೀವಿಗೆ’ ಪುಸ್ತಕ ನೋಡಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ.

ಅಥಣಿ ಎಸ್‌.ಎಸ್‌. ಬಾಲಕಿಯರ ಶಾಲೆಯ ಸ್ಫೂರ್ತಿ ಮಾಳಿ: ಯಾವ ವಿಧಾನದಲ್ಲಿ ಬರೆಯಬೇಕು, ಸಮಯ ನಿರ್ವಹಣೆ ಹೇಗೆ?

ಅಂಕಗಳಿಗೆ ಅನುಗುಣವಾಗಿ ಉತ್ತರ ಬರೆಯಬೇಕು. ಹೆಚ್ಚಿನ ಅಂಕಗಳ ಪ್ರಶ್ನೆಗೆ ಹೆಚ್ಚಿನ ವಿವರಣೆ ಕೊಡಬೇಕಾಗುತ್ತದೆ. ಒಂದೇ ಪ್ರಶ್ನೆಗೆ ಅನವಶ್ಯವಾಗಿ ಹೆಚ್ಚಿನ ಉತ್ತರ ಬರೆದು ಸಮಯ ವ್ಯರ್ಥ ಮಾಡಿಕೊಳ್ಳಬಾರದು.

ಚಿಕ್ಕೋಡಿಯ ಎಂಕೆಕೆ ಶಾಲೆಯ ಸ್ನೇಹಾ: ಈ ಬಾರಿ ಸರಣಿ ಪರೀಕ್ಷೆ ಇರುವುದಿಲ್ಲವೇ?

ಇರುತ್ತದೆ. ಫೆಬ್ರುವರಿಯಲ್ಲಿ ನಡೆಸಲಾಗುತ್ತದೆ. ಮಂಡಳಿಯಿಂದಲೇ ಪ್ರಶ್ನೆಪತ್ರಿಕೆ ನೀಡಲಾಗುತ್ತದೆ. ಮುಖ್ಯ ಶಿಕ್ಷಕರ ಸಂಘದಿಂದಲೂ ನಡೆಸಲಾಗುತ್ತದೆ.

ಖಾನಾಪುರ ತಾಲ್ಲೂಕು ಸಿದ್ದನಕೊಪ್ಪ ಸರ್ಕಾರಿ ಪ್ರೌಢಶಾಲೆಯ ತೇಜಸ್ವಿನಿ: ಹೆಚ್ಚು ಅಂಕ ಗಳಿಸುವುದು ಹೇಗೆ?

ಅಭ್ಯಾಸ ಮಾಡುವುದರಿಂದ ಹೆಚ್ಚು ಅಂಕ ಗಳಿಸಬಹುದು. ಮಾದರಿ ಪ್ರಶ್ನೆಪತ್ರಿಕೆಗಳು, ಈ ಹಿಂದೆ ಹೆಚ್ಚಿನ ಅಂಕ ಪಡೆದಿದ್ದವರ ಉತ್ತರಪತ್ರಿಕೆಗಳನ್ನು ಓದಿದರೆ ಅನುಕೂಲವಾಗುತ್ತದೆ.

ಅಥಣಿಯ ಸಂಕೋನಟ್ಟಿಯ ಕಾವ್ಯಶ್ರೀ ಕದಂ: ಯಾವ ರೀತಿ ಅಭ್ಯಾಸ ಮಾಡಬೇಕು?

ಪ್ರತಿ ದಿನ ಪ್ರತಿ ವಿಷಯವನ್ನು ಒಂದು ಗಂಟೆ ಓದಬೇಕು. ಕಠಿಣ ವಿಷಯವನ್ನು ಮುಂಜಾನೆ ಓದುವುದು ಒಳ್ಳೆಯದು. ಅದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಓದಿದ್ದನ್ನು ಬರೆಯಬೇಕು. ಕಲಿತದ್ದನ್ನು ಸಹಪಾಠಿಗಳೊಂದಿಗೆ ಚರ್ಚಿಸಬೇಕು.

ಚಿಕ್ಕೋಡಿಯ ಎಂಕೆಕೆ ಶಾಲೆಯ ಸತೀಶ ಮೂಡಲಗಿ: ಉತ್ತರ ಪತ್ರಿಕೆಯಲ್ಲಿ ಹೆಸರು ಬರೆಯಬೇಕೇ?

ಹೆಸರು ಬರೆಯುವಂತಿಲ್ಲ.

ಅಥಣಿ ವಿದ್ಯಾವರ್ಧಕ ಶಾಲೆಯ ವೈಷ್ಣವಿ ಕಾಂಬಳೆ: ವಿಜ್ಞಾನದಲ್ಲಿ ಅನ್ವಯಿಕಕ್ಕೆ ಸಂಬಂಧಿಸಿದ ಪ್ರಶ್ನೆಗಳು ಎಷ್ಟು ಅಂಕಗಳಿಗಿರುತ್ತವೆ, ಟಾಪ್‌ ಬರುವುದು ಹೇಗೆ?

16 ಅಂಕಗಳಿಗೆ ಬರುತ್ತವೆ. ವಿಸ್ತರಿಸಿ ಬರೆಯಬೇಕು. ಇದಕ್ಕಾಗಿ ಸಂಪೂರ್ಣ ಪಠ್ಯಪುಸ್ತಕವನ್ನು ಓದಬೇಕು.

ಬೆಲ್ಲದಬಾಗೇವಾಡಿ ಸಿ.ಎಂ. ಕತ್ತಿ ಶಾಲೆಯ ಪ್ರಜ್ವಲ್‌ ಮಂಟೂರ್: ಪರೀಕ್ಷೆಯ ಸ್ವರೂಪ ಹೇಗಿರುತ್ತದೆ?

ಮುಂಬರುವ ಸರಣಿ ಪರೀಕ್ಷೆ ಎದುರಿಸಿದಾಗ, ನಿಮಗೇ ಅರಿವಾಗುತ್ತದೆ.

ಕರೆ ಮಾಡಿದವರು

ಮುಗಳಖೋಡದ ಸುಧಾಕರ ಪೂಜಾರಿ, ಅಥಣಿ ರಾಯಲ್‌ ಶಾಲೆಯ ಸುಮಿತ್‌ ಬಡಿಗೇರ, ಮಹಾಂತೇಶನಗರ ಎಚ್‌ಎಂಎಸ್ ಶಾಲೆಯ ಸುಷ್ಮಿತಾ ಶ್ರೀಕಾಂತ ಗವಿಮಠ, ಜ್ಯೋತಿ ಹಡಪದ, ಕಾವ್ಯಾ ಕರೆಪ್ಪಗೋಳ, ಚಿಕ್ಕೋಡಿಯ ಎಂಕೆಕೆ ಶಾಲೆಯ ಸುಷ್ಮಾ ಹರದಾಳೆ, ಅಥಣಿ ತಾಲ್ಲೂಕು ಸತ್ತಿಯ ಜೆ.ಇ. ಶಾಲೆಯ ಪ್ರಿಯಾಂಕಾ ಕುರಬೇಟ್, ಅಥಣಿಯ ತೇಜಸ್ವಿನಿ ತವರಟ್ಟಿ, ಸಂಜೀವಿನಿ ಮಾಳಿ, ಬೆಳಗಾವಿ ಸಂಜಯಗಾಂಧಿ ಶಾಲೆಯ ದೀಪಾಂಜಲಿ.

ಚಿಕ್ಕೋಡಿ: ವಾರಕ್ಕೊಮ್ಮೆ ಫೋನ್‌ ಇನ್

‘ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಪಂದಿಸಲು, ಚಿಕ್ಕೋಡಿ ಡಿಡಿಪಿಐ ಕಚೇರಿಯಲ್ಲಿ ಫೋನ್‌ ಇನ್ ಕಾರ್ಯಕ್ರಮ ಆರಂಭಿಸಲಾಗಿದೆ. ಪ್ರತಿ ಶನಿವಾರ ಮಧ್ಯಾಹ್ನ 3ರಿಂದ 5ರವರೆಗೆ ನಡೆಸಲಾಗುತ್ತಿದೆ. ಮಕ್ಕಳು ವಿಷಯ ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಿ ಗೊಂದಲಗಳನ್ನು ಬಗೆಹರಿಸಲಾಗುತ್ತಿದೆ’ ಎಂದು ಡಿಡಿಪಿಐ ಮೋಹನ್‌ ಹಾಗೂ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಅರಿಹಂತ ಬಿರಾದಾರ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT