ಭಾನುವಾರ, ಆಗಸ್ಟ್ 14, 2022
24 °C

ಎಸ್ಸೆಸ್ಸೆಲ್ಸಿ ಪರೀಕ್ಷೆ: ಸುರಕ್ಷತೆಗೆ ಆದ್ಯತೆ: ಶಾಸಕ ಅನಿಲ ಬೆನಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ವೇಳೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದಾರೆ. ಯಾರೂ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ’ ಎಂದು ದಕ್ಷಿಣ ಕ್ಷೇತ್ರದ ಶಾಸಕ ಅನಿಲ ಬೆನಕೆ ಹೇಳಿದರು.

ನಗರದ ಸುರೇಶ ಯಾದವ ಪ್ರತಿಷ್ಠಾನದಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಹಾಗೂ ಪರೀಕ್ಷೆಗೆ ನಿಯೋಜನೆಗೊಂಡ ಸಿಬ್ಬಂದಿಗೆ ವಿತರಿಸಲು ನೀಡಲಾದ 13ಸಾವಿರ ಮಾಸ್ಕ್‌ಗಳನ್ನು ಡಿಡಿಪಿಐ ಎ.ಬಿ. ಪುಂಡಲೀಕ ಅವರಿಗೆ ಬುಧವಾರ ಹಸ್ತಾಂತರಿಸಿ ಅವರು ಮಾತನಾಡಿದರು.

‘ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಹೈಕೋರ್ಟ್ ಕೂಡ ಸಮ್ಮತಿ ನೀಡಿದೆ. ಮಕ್ಕಳ ಸುರಕ್ಷತೆ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುವುದು. ಸಂಘ-ಸಂಸ್ಥೆಗಳವರು ಮತ್ತು ದಾನಿಗಳು ಕೂಡ ಇಲಾಖೆಯೊಂದಿಗೆ ಕೈ ಜೋಡಿಸುತ್ತಿರುವುದು ಶ್ಲಾಘನೀಯ’ ಎಂದರು.

ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಸುರೇಶ ಯಾದವ, ‘ಸೇವಾ ಕಾರ್ಯಕ್ಕೆ ನಮ್ಮ ತಂಡ ಸದಾ ಸಿದ್ಧವಿದೆ. ಇಲಾಖೆಯವರು ಯಾವುದೇ ರೀತಿಯ ಸಹಕಾರವನ್ನು ಬೇಕಾದರೂ ಪಡೆಯಬಹುದು’ ಎಂದು ತಿಳಿಸಿದರು.

ನಗರ ಬಿಇಒ ರವಿ ಭಜಂತ್ರಿ, ಕಣಬರ್ಗಿಯ ಸಮತಾ ಶಾಲೆ ಅಧ್ಯಕ್ಷ ಶಂಕರ ಬಾಗೇವಾಡಿ, ಪ್ರಥಮ ದರ್ಜೆ ಗುತ್ತಿಗೆದಾರ ಎನ್.ಎಸ್. ಬಿರಾದಾರ, ಗುರು ರೋಡ್‌ಲೈನ್ಸ್‌ ಸಂಸ್ಥಾಪಕ ಗುರುದೇವ ಪಾಟೀಲ ಹಾಗೂ ಮುಖಂಡ ರಾಜಶೇಖರ ದೋಣಿ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು