ಬೆಳಗಾವಿ: ‘ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾಳಾಗಿರುವ ಸೇತುವೆ ಹಾಗೂ ರಸ್ತೆಗಳ ದುರಸ್ತಿ ಕಾಮಗಾರಿಯನ್ನು ಸೆ. 22ರ ಒಳಗೆ ಆರಂಭಿಸಬೇಕು. ಆಯಾ ಶಾಸಕರ ಗಮನಕ್ಕೆ ತಂದು ಕ್ರಿಯಾಯೋಜನೆ ಸಿದ್ಧಪಡಿಸಬೇಕು’ ಎಂದು ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಶುಕ್ರವಾರ ನಡೆದ ಇಲಾಖೆಯ ವಲಯ ಮಟ್ಟದ ಯೋಜನೆಗಳ ಬಗ್ಗೆ ಮತ್ತು ಪ್ರವಾಹ ಹಾನಿ ತಡೆಗಟ್ಟುವ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಚುರುಕಿನಿಂದ ಕೆಲಸ ಮಾಡಬೇಕು. ಬೆಳಗಾವಿ ವಲಯದ 74 ಕೆಲಸಗಳಿಗೆ ಬೇಕಾಗುವ ದಾಖಲಾತಿಗಳನ್ನು ಸಿದ್ಧಪಡಿಸಿಕೊಂಡು ಮುಂದುವರಿಯಬೇಕು. ಚಿಕ್ಕೋಡಿ ವಲಯದ ಕಾಮಗಾರಿಗಳ ಸಂಪೂರ್ಣ ಮಾಹಿತಿ ಕೊಡಬೇಕು. ವಿಜಯಪುರ ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಹಾಳಾಗಿರುವ ರಸ್ತೆ ಮೊದಲಾದ ಮೂಲಸೌಕರ್ಯಗಳ ದುರಸ್ತಿಗೆ ಅಂದಾಜು ಮೊತ್ತದ ವರದಿ ತಯಾರಿಸಬೇಕು’ ಎಂದು ನಿರ್ದೇಶನ ನೀಡಿದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2019–20ನೇ ಸಾಲಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾಳಾಗಿದ್ದ ಕಾರಣದಿಂದ 835 ಕಾಮಗಾರಿಗಳನ್ನು ₹ 202.24 ಕೋಟಿಯಲ್ಲಿ ಕೈಗೊಂಡು 813 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ₹ 77.91 ಕೋಟಿ ಪಾವತಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 2,142 ಕಿ.ಮೀ. ರಸ್ತೆ, 425 ಸಿ.ಡಿ. (ಕಲ್ವರ್ಟ್) ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ತುರ್ತು ದುರಸ್ತಿಗಾಗಿ ₹ 256 ಕೋಟಿ ಅಂದಾಜಿಸಲಾಗಿದ್ದು, ₹ 175 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾಮಗಾರಿಗಳನ್ನು ಆದ್ಯತೆ ಮೇಲೆ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.
‘9,603 ಕಿ.ಮೀ. ಜಿಲ್ಲಾ ಮುಖ್ಯ ರಸ್ತೆಯನ್ನು ರಾಜ್ಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಿದ್ದೇವೆ. ಅಂತೆಯೇ 15,509 ಕಿ.ಮೀ. ಹಳ್ಳಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಪಂಚಾಯತರಾಜ್ ಇಲಾಖೆಯ ರಸ್ತೆಗಳನ್ನು ನಮ್ಮ ಇಲಾಖೆಗೆ ಒಳಪಡಿಸಿಕೊಂಡು ನಿರ್ವಹಿಸುವಂತೆ ಸೂಚಿಸಿದ್ದೇನೆ’ ಎಂದು ಮಾಹಿತಿ ನೀಡಿದರು.
ಸುವರ್ಣ ವಿಧಾನಸೌಧ ನಿರ್ವಹಣೆಗೆ ಕ್ರಮ
‘ಸುವರ್ಣ ವಿಧಾನಸೌಧದ ಕಟ್ಟಡ ಮಳೆಯಿಂದಾಗಿ ಪಾಚಿ ಕಟ್ಟಿಕೊಂಡು ಹಸಿರು ಬಣ್ಣಕ್ಕೆ ತಿರುಗಿದೆ. ಮಳೆಗಾಲ ಮುಗಿದ ನಂತರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ನಿರ್ವಹಣೆಗೆ ಹೆಚ್ಚಿನ ಹಣ ಬೇಕಾಗಲಿದೆ’ ಎಂದು ಗೋವಿಂದ ಕಾರಜೋಳ ಪ್ರತಿಕ್ರಿಯಿಸಿದರು.
ಶಾಸಕರಾದ ಡಿ.ಎಂ. ಐಹೊಳೆ, ಮಹಾಂತೇಶ ದೊಡ್ಡಗೌಡ್ರ, ಮುಖ್ಯ ಎಂಜಿನಿಯರ್ ಎಸ್.ಎಫ್. ಪಾಟೀಲ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.