ಭಾನುವಾರ, ಜನವರಿ 26, 2020
29 °C
ಆಯುಕ್ತೆ ಗೀತಾ ಬಿ.ವಿ. ಹೇಳಿಕೆ

ಬೆಳಗಾವಿ: ಮಾಹಿತಿ ಆಯೋಗದ ಪೀಠ ಮಾರ್ಚ್‌ಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ರಾಜ್ಯ ಮಾಹಿತಿ ಹಕ್ಕು ಆಯೋಗದ ಬೆಳಗಾವಿ ಪೀಠದ ಕಲಾಪಗಳನ್ನು ಮಾರ್ಚ್‌ನಲ್ಲಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದು ರಾಜ್ಯ ಮಾಹಿತಿ ಆಯುಕ್ತರಾದ ಗೀತಾ ಬಿ.ವಿ. ತಿಳಿಸಿದರು.

ಮಾಹಿತಿ ಆಯೋಗದ ಪೀಠ ಸ್ಥಾಪನೆಗೆ ಗುರುತಿಸಿರುವ ಕಟ್ಟಡವನ್ನು ಸೋಮವಾರ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಡಾ.ಬಿ.ಆರ್. ಅಂಬೇಡ್ಕರ್ ರಸ್ತೆಯಲ್ಲಿರುವ ತಮನ್ನಾ ಆರ್ಕೇಡ್‌ನಲ್ಲಿ ಪೀಠ ಸ್ಥಾಪಿಸಲು ನಿರ್ಧರಿಸಲಾಗಿದೆ. ಅಗತ್ಯ ಪೀಠೋಪಕರಣ ಮತ್ತಿತರ ಕಾಮಗಾರಿಗೆ ₹ 69.50 ಲಕ್ಷ ಅನುದಾನ ಕೋರಿ ಸರ್ಕಾರಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅನುದಾನದ ಬಿಡುಗಡೆಯಾದ ತಕ್ಷಣ ಪೀಠದ ಕಲಾಪಗಳನ್ನು ಆರಂಭಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪ್ರಕರಣಗಳ ಸಂಖ್ಯೆ ಆಧರಿಸಿ ಇಲ್ಲೊಂದು ಪೀಠ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. 3ಸಾವಿರ ಪ್ರಕರಣಗಳು ನಡೆಯುತ್ತಿವೆ. ಬೆಳಗಾವಿ ಪೀಠದಲ್ಲಿ ವ್ಯಾಪ್ತಿಯ ಬಗ್ಗೆ ಚರ್ಚೆ ನಡೆದಿದೆ. 8 ಜಿಲ್ಲೆಗಳ ವ್ಯಾಪ್ತಿ ನಿಗದಿಯಾಗುವ ಸಾಧ್ಯತೆ ಇದೆ. ಕಟ್ಟಡದ ಒಳಾಂಗಣ ವಿನ್ಯಾಸ ಮತ್ತು ಪೀಠೋಪಕರಣಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಅಗತ್ಯ ಸಿಬ್ಬಂದಿಯ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

ದುರ್ಬಳಕೆ- ಕ್ರಮಕ್ಕೆ ಅವಕಾಶ

‘ಮಾಹಿತಿ ಹಕ್ಕು ಕಾಯ್ದೆ ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಹಿತಾಸಕ್ತಿ ಇಲ್ಲದೇ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸುವ ಹಾಗೂ ವಿನಾಕಾರಣ ಅರ್ಜಿ ಸಲ್ಲಿಸುವವರನ್ನು ಮತ್ತೆ ಅರ್ಜಿ ಸಲ್ಲಿಸದಂತೆ ನಿರ್ಬಂಧಿಸಲು ಅವಕಾಶವಿದೆ. ಕಾಯ್ದೆ ದುರ್ಬಳಕೆ ಮಾಡಿಕೊಳ್ಳುವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪ್ರತಿಕ್ರಿಯಿಸಿದರು.

‘ನೂತನ ಪೀಠದ ಕಟ್ಟಡ ಕುರಿತು ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಹಾಗೂ ಇತರ ಇಲಾಖೆಗಳ ಅಧಿಕಾರಿಗಳ ಜತೆ ಚರ್ಚೆ ನಡೆಸಲಾಗಿದೆ’ ಎಂದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು