ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

60 ಕುಟುಂಬ, 60 ವರ್ಷ, 3 ಲಕ್ಷ ಗಣಪತಿ ಮೂರ್ತಿ!

ಕಾಡಸಿದ್ಧೇಶ್ವರ ಇಟ್ಟಂಗಿ, ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘದ ಯಶೋಗಾಥೆ
Published 13 ಸೆಪ್ಟೆಂಬರ್ 2023, 3:08 IST
Last Updated 13 ಸೆಪ್ಟೆಂಬರ್ 2023, 3:08 IST
ಅಕ್ಷರ ಗಾತ್ರ

ಕೊಣ್ಣೂರ: ಈ ಊರಿನಲ್ಲಿರುವ 60 ಕುಟುಂಬಗಳು ಸೇರಿ ಸಹಕಾರ ಸಂಘ ಕಟ್ಟಿಕೊಂಡಿವೆ. ಈ ಸಂಘದ ಮೂಲಕವೇ ಮಣ್ಣಿನ ಗಣಪತಿ ಮೂರ್ತಿ ಸಿದ್ಧಪಡಿಸುತ್ತವೆ. 60 ವರ್ಷಗಳಿಂದಲೂ ಲಕ್ಷ– ಲಕ್ಷ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುತ್ತಿವೆ.

ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಕಾಡಸಿದ್ಧೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘದ ಯಶೋಗಾಥೆ ಇದು.

ಮಣ್ಣಿನ ಗಣಪತಿ ಮೂರ್ತಿಗಳನ್ನು ಸಿದ್ಧಪಡಿಸುವುದಕ್ಕಾಗಿಯೇ ಕಟ್ಟಿಕೊಂಡ ರಾಜ್ಯದ ಏಕಮಾತ್ರ ಸಹಕಾರ ಸಂಘ ಎನ್ನುವುದು ಇದರ ಹಿರಿಮೆ.

1962-63ರಲ್ಲಿ ಶಂಕರೆಪ್ಪ ಕುಂಬಾರ ಈ ಸಂಘ ಆರಂಭಿಸಿದರು. ಮಣ್ಣಿನ ಗಣಪತಿ ಮೂರ್ತಿಗಳ ಬಗ್ಗೆ ಅಷ್ಟಾಗಿ ಜಾಗೃತಿ ಇಲ್ಲದ ಸಂದರ್ಭದಲ್ಲಿ ಅವರು ಈ ಸಾಹಸ ಮಾಡಿದರು. ಕಳೆದ 15 ವರ್ಷಗಳಿಂದ ಸುರೇಶ ಕುಂಬಾರ ಸಂಘದ ಅಧ್ಯಕ್ಷರಾಗಿದ್ದರು. ಅವರ ಅವಧಿಯಲ್ಲಿ ಸಂಘ ಇನ್ನಷ್ಟು ವಿಸ್ತಾರವಾಯಿತು. ಸದ್ಯ ಶಂಕರ ಕುಂಬಾರ ಮುನ್ನಡೆಸಿದ್ದಾರೆ.

3 ಲಕ್ಷ ಮೂರ್ತಿ: ಗಣೇಶ ಚತುರ್ಥಿ ಬಂದಾಗ ಮಾತ್ರ ಮೂರ್ತಿಗಳ ಭರಾಟೆ ಹೆಚ್ಚಾಗುತ್ತದೆ. ಆದರೆ, ಈ ಸಹಕಾರ ಸಂಘದಲ್ಲಿ ವರ್ಷಪೂರ್ತಿ ಇದೊಂದೇ ಕೆಲಸ ನಡೆಯುತ್ತದೆ. 60 ಕುಟುಂಬಗಳ ಒಟ್ಟು 400 ಮಂದಿಗೆ ಪ್ರತಿ ದಿನವೂ ಕೈತುಂಬ ಕೆಲಸ ಸಿಗುತ್ತದೆ.

ಪ್ರಸಕ್ತ ವರ್ಷ ಕೂಡ ಈ ಸಂಘದವರು 3 ಲಕ್ಷಕ್ಕೂ ಹೆಚ್ಚು ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಈಗಾಗಲೇ ಶೇ 50ರಷ್ಟು ಮೂರ್ತಿಗಳು ಬಿಕರಿಯಾಗಿವೆ. ಕರ್ನಾಟಕ ಮಾತ್ರವಲ್ಲದೇ ಗೋವಾ, ಮಹಾರಾಷ್ಟ್ರ ಹಾಗೂ ಆಂಧ್ರದವರೆಗೂ ಇವರ ಮೂರ್ತಿಗಳು ಸಾಗಣೆಯಾಗುತ್ತವೆ.

ಏಕಕಾಲಕ್ಕೆ ಅಪಾರ ಸಂಖ್ಯೆಯಲ್ಲಿ ಮೂರ್ತಿಗಳು ಇಲ್ಲಿ ಸಿಗುವುದರಿಂದ ವ್ಯಾಪಾರಿಗಳು ಇಲ್ಲಿಗೇ ಬಂದು ಸಗಟು ದರದಲ್ಲಿ ಮೂರ್ತಿಗಳ ಖರೀದಿ ಮಾಡುತ್ತಾರೆ. ಈ ರೀತಿ ಸಾಗಣೆ ಮಾಡಲು ಸಂಘದಿಂದ ವಾಹನ ವ್ಯವಸ್ಥೆ ಕೂಡ ಇದೆ.

ಕನಿಷ್ಠ ₹50 ದರದಿಂದ ಹಿಡಿದು ₹10 ಸಾವಿರದ ವರೆಗೆ ದರ ಇರುವ ಮೂರ್ತಿಗಳನ್ನು ಇವರು ಸಿದ್ಧಪಡಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಮೂರ್ತಿಯ ಆಕಾರ, ಶಾಸ್ತ್ರದಲ್ಲಿ ಹೊಸ ಪ್ರಯೋಗ ಮಾಡುತ್ತ ಬಂದಿದ್ದರಿಂದ ಇನ್ನೂ ಭರ್ಜರಿ ಬೇಡಿಕೆ ಉಳಿಸಿಕೊಂಡಿದ್ದಾರೆ.

(ಸಂಪರ್ಕಕ್ಕೆ: 98864 48785)

ಕೊಣ್ಣೂರ ಗ್ರಾಮದಲ್ಲಿ ಗಣಪತಿ ಮೂರ್ತಿ ತಯಾರಿಯಲ್ಲಿ ತೊಡಗಿದ ಮಹಿಳೆಯರು
ಕೊಣ್ಣೂರ ಗ್ರಾಮದಲ್ಲಿ ಗಣಪತಿ ಮೂರ್ತಿ ತಯಾರಿಯಲ್ಲಿ ತೊಡಗಿದ ಮಹಿಳೆಯರು

ಆರು ತಿಂಗಳವರೆಗೆ ನಿತ್ಯ ಆರು ತಾಸು ಕೆಲಸ ಇರುತ್ತದೆ. ನಂತರದ ಆರು ತಿಂಗಳು ನಿತ್ಯವೂ 12 ತಾಸು ಕೆಲಸ ಮಾಡಬೇಕು. ಆಗ ಮಾತ್ರ ಬೇಡಿಕೆಯಷ್ಟು ಮೂರ್ತಿಗಳ ಪೂರೈಕೆ ಸಾಧ್ಯವಾಗುತ್ತದೆ

-ಶಂಕರ ಕುಂಬಾರ ಅಧ್ಯಕ್ಷ ಕಾಡಸಿದ್ಧೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘ

ಮೂರ್ತಿಗೆ ಬೇಕಾದ ಮಣ್ಣು ಕಾಡಿನಲ್ಲಿದೆ. ಅರಣ್ಯ ಇಲಾಖೆಯ ಕಟ್ಟಳೆಗಳ ಕಾರಣ ಕೆಲವೊಮ್ಮೆ ಮಣ್ಣು ಸಿಗುವುದಿಲ್ಲ. ಆಗ ಖಾಸಗಿ ವ್ಯಕ್ತಿಗಳ ಜಮೀನಿನಿಂದ ಮಣ್ಣು ಖರೀದಿ ಅನಿವಾರ್ಯ ಸುರೇಶ ಬಡಿಗೇರ ನಿರ್ದೇಶಕ ಕಾಡಸಿದ್ಧೇಶ್ವರ ಇಟ್ಟಂಗಿ ಮತ್ತು ಕುಂಬಾರಿಕೆ ಸಾಮಾನುಗಳ ಉತ್ಪಾದಕ ಸಹಕಾರಿ ಸಂಘ

ಮಣ್ಣು ಹದ ಮಾಡಲು ವರ್ಷ ಬೇಕು

‘ಹಿಡಕಲ್‌ನ ರಾಜಾ ಲಖಮಗೌಡ ಅಣೆಕಟ್ಟೆಯ ಸುತ್ತ ಇರುವ ಗ್ರಾಮಗಳಲ್ಲಿ ಮಾತ್ರ ಮೂರ್ತಿ ತಯಾರಿಕೆಗೆ ಯೋಗ್ಯವಾದ ಮಣ್ಣು ಸಿಗುತ್ತದೆ. ಜಮೀನಿನ 30 ಅಡಿ ಆಳಕ್ಕೆ ಅಗೆದಾಗ ಮೂರ್ತಿಗೆ ಬೇಕಾದ ಮಣ್ಣು ಸಿಗುತ್ತದೆ. ಅದನ್ನು ತಂದು ಪರಿಷ್ಕರಿಸಿದರೆ ಶೇ 50ರಷ್ಟು ಮಾತ್ರ ಮಣ್ಣು ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಮಣ್ಣಿನ ಮೂರ್ತಿಗಳ ಬೇಡಿಕೆ ಹೆಚ್ಚಿದ್ದರೂ ಮಣ್ಣಿನ ಪೂರೈಕೆ ಕಡಿಮೆಯಾಗಿದೆ’ ಎನ್ನುವುದು ಸಂಘದ ನಿರ್ದೇಶಕ ಸುರೇಶ ಕುಂಬಾರ ಅವರ ಹೇಳಿಕೆ. ಮಣ್ಣಿನ ಗಣಪನ ಮೂರ್ತಿ ಮಾಡುವುದು ಸುಲಭದ ಕೆಲಸವಲ್ಲ. ಪ್ರತಿ ಮೂರ್ತಿಗೂ 365 ದಿನಗಳ ಶ್ರಮ ಬೇಕು. ಒಮ್ಮೆ ಮಣ್ಣು ತಂದರೆ ವರ್ಷ ಪೂರ್ತಿ ಅದನ್ನು ಸೋಸಿ ಸಂಗ್ರಹಿಸಿ ಮಳೆ– ಬಿಸಿಲಿಗೆ ಒಡ್ಡಿ ಹದಗೊಳಿಸಿ ಸಂಸ್ಕರಿಸಿ ಜಿಗುಟುತನ ಬರಿಸಿ ಸಿದ್ಧಗೊಳಿಸಲು ಒಂದು ವರ್ಷ ಬೇಕು. ಹೀಗಾಗಿ ಈ ಸಂಘದವರಿಗೆ ವರ್ಷಪೂರ್ತಿ ಕೆಲಸ ಇದ್ದೇ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT