ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಗಾಂಬಿಕೆ ಐಕ್ಯ ಮಂಟಪ ಮರೆತ ಸರ್ಕಾರ

ಅಭಿವೃದ್ಧಿ ಕಾರ್ಯಗಳಿಗೆ ಮಂಜೂರಾಗದ ಅನುದಾನ, ಪ್ರವಾಸಿಗರಿಗೆ ತಪ್ಪದ ಪರದಾಟ
Published 14 ಜುಲೈ 2023, 4:51 IST
Last Updated 14 ಜುಲೈ 2023, 4:51 IST
ಅಕ್ಷರ ಗಾತ್ರ

ಇಮಾಮ್‌ಹುಸೇನ್‌ ಗೂಡುನವರ/ ಶಿವಾನಂದ ವಿಭೂತಿಮಠ

ಎಂ.ಕೆ.ಹುಬ್ಬಳ್ಳಿ: ಕೂಡಲಸಂಗಮದ ಬಸವಣ್ಣನವರ ಐಕ್ಯ ಮಂಟಪದ ಮಾದರಿಯಲ್ಲೇ, ಇಲ್ಲಿನ ಮಲಪ್ರಭಾ ನದಿ ತೀರದಲ್ಲಿ ಅವರ ಪತ್ನಿ ಶರಣೆ ಗಂಗಾಂಬಿಕೆ ಐಕ್ಯ ಮಂಟಪ ನಿರ್ಮಿಸಿದ ಸರ್ಕಾರ ಮೂಲಸೌಕರ್ಯಕ್ಕಾಗಿ ಅನುದಾನ ನೀಡುವುದನ್ನೇ ಮರೆತಿದೆ. ಹಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು, ಶರಣ-ಶರಣೆಯರು ಪರದಾಡುವಂತಾಗಿದೆ.

ಕೂಡಲಸಂಗಮ ಅಭಿವೃದ್ಧಿ ಮಂಡಳಿ ನಿರ್ಮಿಸಿದ್ದ ಈ ಸ್ಮಾರಕ 2012ರಲ್ಲಿ ಉದ್ಘಾಟನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲೇ ಇರುವ ಐಕ್ಯ ಮಂಟಪಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ವಿವಿಧ ಹಬ್ಬಗಳು, ರಜಾ ದಿನಗಳಂದು ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಮಕರ ಸಂಕ್ರಮಣದಂದು ವೈಭವದಿಂದ ಜಾತ್ರೆ ನೆರವೇರುತ್ತದೆ. ಆದರೆ, ಇಲ್ಲಿ ಸಾರ್ವಜನಿಕ ಶೌಚಗೃಹವೇ ಇಲ್ಲದ್ದರಿಂದ ಮೂತ್ರ ವಿಸರ್ಜನೆ ಮತ್ತು ಶೌಚಕ್ಕಾಗಿ ಜನರು ಬಯಲಿನತ್ತ ಮುಖಮಾಡುವುದು ಅನಿವಾರ್ಯವಾಗಿದೆ. ಅದರಲ್ಲೂ ಮಹಿಳೆಯರು ಪಾಡು ಹೇಳತೀರದಂತಿದೆ.

ವಸತಿ ವ್ಯವಸ್ಥೆಯಿಲ್ಲ: ‘ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಯಾತ್ರಿ ನಿವಾಸಗಳಿರುತ್ತವೆ. ಆದರೆ, ಗಂಗಾಂಬಿಕೆ ಐಕ್ಯ ಮಂಟಪ ವೀಕ್ಷಿಸಲು ಬರುವವರಿಗೆ ವಸತಿ ವ್ಯವಸ್ಥೆಯೇ ಇಲ್ಲ. ಯಾವುದಾದರೂ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಬೇಕೆಂದರೆ ದೂರದ ಬೆಳಗಾವಿ ಅಥವಾ ಧಾರವಾಡಕ್ಕೆ ಹೋಗಬೇಕಿದೆ. ಒಂದು ದಿನ ಇಲ್ಲಿಯೇ ವಸತಿ ಹೂಡಬೇಕೆಂಬ ಆಸೆಯಿದ್ದರೂ, ಗಂಗಾಂಬಿಕೆ ದರ್ಶನ ಪಡೆದುಕೊಂಡು ಅನಿವಾರ್ಯವಾಗಿ ಬೇರೆ ಸ್ಥಳಗಳತ್ತ ಹೋಗುವಂತಾಗಿದೆ’ ಎಂದು ಸವದತ್ತಿ ತಾಲ್ಲೂಕಿನ ಹೂಲಿಯ ಪ್ರವಾಸಿಗ ಎಂ.ಎಚ್‌.ಅಂತಕ್ಕನವರ ‘‍ಪ್ರಜಾವಾಣಿ’ ಎದುರು ಬೇಸರಿಸಿದರು.

ಅನುದಾನ ಬರಲಿಲ್ಲ: ‘ಈ ಸ್ಮಾರಕಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸುಧಾರಣೆ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ವಾಹನ ನಿಲುಗಡೆಗೆ ವ್ಯವಸ್ಥೆ ಸೇರಿದಂತೆ 13 ಕಾಮಗಾರಿ ಕೈಗೊಳ್ಳಲು ₹2.5 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದೆವು. ಇದಕ್ಕೆ ಸರ್ಕಾರದಿಂದ ಅನುಮೋದನೆ ಸಿಕ್ಕಿತ್ತು. ಆದರೆ, ಹಣಕಾಸು ಇಲಾಖೆ ಅನುದಾನ ಬಿಡುಗಡೆಗೊಳಿಸದ ಕಾರಣ ಕಾಮಗಾರಿ ಬಾಕಿ ಉಳಿದಿವೆ’ ಎಂದು ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿಯಲ್ಲಿ ನಿರ್ಮಿಸಿರುವ ಶರಣೆ ಗಂಗಾಂಬಿಕೆ ಐಕ್ಯ ಮಂಟಪ/ಪ್ರಜಾವಾಣಿ ಚಿತ್ರ
ಎಂ.ಕೆ.ಹುಬ್ಬಳ್ಳಿ ಬಳಿ ಮಲಪ್ರಭಾ ನದಿಯಲ್ಲಿ ನಿರ್ಮಿಸಿರುವ ಶರಣೆ ಗಂಗಾಂಬಿಕೆ ಐಕ್ಯ ಮಂಟಪ/ಪ್ರಜಾವಾಣಿ ಚಿತ್ರ

Highlights - null

Quote - ಗಂಗಾಂಬಿಕೆ ಐಕ್ಯ ಮಂಟಪಕ್ಕೆ ಬರುವವರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲಾಗುವುದು. ಸರ್ಕಾರದಿಂದ ಅನುದಾನ ಬಿಡುಗಡೆಯಾದ ತಕ್ಷಣ ವಿವಿಧ ಕಾಮಗಾರಿ ಆರಂಭಿಸಲಾಗುವುದು –ಬಸಪ್ಪ ಪೂಜಾರಿ ಆಯುಕ್ತ ಕೂಡಲಸಂಗಮ ಅಭಿವೃದ್ಧಿ ಮಂಡಳಿ

Quote - ಗಂಗಾಂಬಿಕೆ ಐಕ್ಯ ಮಂಟಪದ ಸಮೀಪದಲ್ಲೇ ಯಾತ್ರಿ ನಿವಾಸ ಕಾಮಗಾರಿ ನಡೆಯುತ್ತಿದೆ. ಅದನ್ನು ಬೇಗ ಪೂರ್ಣಗೊಳಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಿಕೊಡಬೇಕು –ಗಂಗಾಧರ ಕೋಟಗಿ ಅಧ್ಯಕ್ಷ ಗಂಗಾಂಬಿಕೆ ಮುಕ್ತಿಕ್ಷೇತ್ರ ಟ್ರಸ್ಟ್‌

Cut-off box - ನದಿಯಲ್ಲಿ ಮುಳುಗುತ್ತಿತ್ತು 12ನೇ ಶತಮಾನದಲ್ಲಿ ನಡೆದ ಕ್ರಾಂತಿಯಿಂದಾಗಿ ಬಸವಣ್ಣನವರು ಕಲ್ಯಾಣ ತೊರೆದರು. ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯದ ಉಳಿವಿಗಾಗಿ ಅವರ ನೇತೃತ್ವದಲ್ಲಿ ಒಂದು ತಂಡ ಕೂಡಲಸಂಗಮ ಮತ್ತೊಂದು ಉಳವಿಯತ್ತ ಸಾಗಿತು. ಬೈಲಹೊಂಗಲ ತಾಲ್ಲೂಕಿನ ಕಾದರವಳ್ಳಿಯಲ್ಲಿ ಬಿಜ್ಜಳನ ಸೈನಿಕರೊಂದಿಗೆ ನಡೆದ ಯುದ್ಧದಲ್ಲಿ ಗಂಗಾಂಬಿಕೆ ವೀರಮರಣ ಹೊಂದಿದರು. ಎಂ.ಕೆ.ಹುಬ್ಬಳ್ಳಿ ಸಮೀಪದ ಮಲಪ್ರಭಾ ನದಿಯಲ್ಲಿ ಅವರ ಸಮಾಧಿ ಮಾಡಲಾಯಿತು. ಪ್ರತಿವರ್ಷ ಮಳೆಗಾಲದಲ್ಲಿ ಈ ಸಮಾಧಿ ಮಲಪ್ರಭಾ ನದಿಯ‌ಲ್ಲಿ ಮುಳುಗುತ್ತಿತ್ತು. ಇದನ್ನು ಜೀರ್ಣೋದ್ಧಾರ ಮಾಡುವಂತೆ ಬಸವಣ್ಣ ಮತ್ತು ಗಂಗಾಂಬಿಕೆಯವರ ಅಭಿಮಾನಿಗಳು ನಿರಂತರವಾಗಿ ಹೋರಾಡಿದ ಪರಿಣಾಮ ಸರ್ಕಾರ ಸ್ಮಾರಕ ನಿರ್ಮಿಸಿದೆ. 105 ಅಡಿ ಎತ್ತರವಿರುವ ಸ್ಮಾರಕದ ಒಳಾಂಗಣ ಆಕರ್ಷಕವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT