ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಜಿಲ್ಲಾಸ್ಪತ್ರೆ ಆವರಣ: ಕೊಳಚೆ ನೀರು ಸಂಸ್ಕರಣ ಘಟಕ ಆರಂಭ

Last Updated 26 ಜುಲೈ 2018, 10:08 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆ ಆವರಣದಲ್ಲಿ ಸ್ಥಾಪಿಸಲಾಗಿರುವ ಕೊಳಚೆ ನೀರು ಸಂಸ್ಕರಣ ಘಟಕ ಕಾರ್ಯಾರಂಭಿಸಿದೆ.

ಆರು ವರ್ಷಗಳ ಹಿಂದೆಯೇ ಅಂದರೆ 2012ರಲ್ಲಿ ಈ ಕಾಮಗಾರಿಗೆ ಟೆಂಡರ್‌ ಪ್ರಕ್ರಿಯೆ ನಡೆದಿತ್ತು. ಹಲವು ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ನಿರ್ದೇಶಕ ಡಾ.ಷಣ್ಮುಖ ಟಿ. ಕಳಸದ ಅವರ ಮುತುವರ್ಜಿಯಿಂದಾಗಿ ಘಟಕ ಕೊನೆಗೂ ಪೂರ್ಣಗೊಂಡಿದೆ. ಕೆಲವು ದಿನಗಳ ಹಿಂದೆಯಷ್ಟೇ ನೀರು ಸಂಸ್ಕರಣೆಗೆ ಚಾಲನೆ ನೀಡಲಾಗಿದೆ. ಈ ನೀರನ್ನು ‘ನೀರ ನೆಮ್ಮದಿಯ ನಾಳೆ’ಗಳಿಗಾಗಿ ಮರುಬಳಕೆಗೆ ಉದ್ದೇಶಿಸಲಾಗಿದೆ.

ಆಸ್ಪತ್ರೆಯ ಕಾರ್ಯಾಗಾರದ ಸಮೀಪ ಘಟಕ ನಿರ್ಮಿಸಲಾಗಿದ್ದು, ಎರಡು ದೊಡ್ಡ ಫಿಲ್ಟರ್‌ಗಳನ್ನು ಅಳವಡಿಸಲಾಗಿದೆ. ಆಸ್ಪತ್ರೆ ಹಾಗೂ ವಸತಿಗೃಹಗಳಿಂದ ಸಂಗ್ರಹವಾಗುವ ಕೊಳಚೆ ನೀರನ್ನು ಸಂಸ್ಕರಣಾ ಘಟಕಕ್ಕೆ ಪಂಪ್‌ ಮಾಡಲಾಗುತ್ತದೆ. ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ದಿನಕ್ಕೆ ಮೂರು ಬಾರಿ ಸಂಸ್ಕರಣೆಗಾಗಿ ಘಟಕಕ್ಕೆ ಹರಿಸಲಾಗುತ್ತದೆ.

ಸಸಿಗಳಿಗೆ:
ಪೈಪ್‌ಲೈನ್‌ ಮೂಲಕ ಹರಿದುಬರುವ ಕೊಳಚೆ ನೀರನ್ನು ಸಂಗ್ರಹಿಸಲು ‘ವೆಟ್‌ಲ್ಯಾಂಡ್‌’ ಎನ್ನುವ ಟ್ಯಾಂಕ್ ನಿರ್ಮಿಸಲಾಗಿದೆ. ಅಲ್ಲಿಂದ ಘಟಕಕ್ಕೆ ಪಂಪ್‌ ಮಾಡಲಾಗುತ್ತದೆ. ಮೊದಲಿಗೆ ಕೊಳಚೆ ನೀರಿನಲ್ಲಿರುವ ಘನ ಪದಾರ್ಥಗಳನ್ನು ಬೇರ್ಪಡಿಸಲಾಗುತ್ತದೆ. ಸ್ಯಾಂಡ್‌ ಫಿಲ್ಟರ್‌, ಕಾರ್ಬನ್ ಫಿಲ್ಟರ್‌ಗಳ ಮೂಲಕ ಸಾಗಿ ಸಂಸ್ಕರಣೆಯಾಗುತ್ತದೆ. ಈ ವೇಳೆ, ಆ ನೀರಿನಲ್ಲಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸಲು ಕ್ಲೋರಿನ್ ಮಿಶ್ರಣ ಮಾಡಲಾಗುವುದು.

ನೀರು ಸಂಸ್ಕರಣೆ ನಂತರ ಉಳಿಯುವ ಘನ ಪದಾರ್ಥಗಳನ್ನು ಒಣಗಿಸಿ, ಉದ್ಯಾನದ ಸಸಿಗಳಿಗೆ ಗೊಬ್ಬರವಾಗಿ ಬಳಸಿಕೊಳ್ಳಬಹುದಾಗಿದೆ.

‘ಘಟಕವು ನಿತ್ಯವೂ ಒಂದು ಒಂದು ಲಕ್ಷ ಲೀಟರ್‌ ನೀರು ಸಂಸ್ಕರಿಸುವ ಸಾಮರ್ಥ್ಯ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ. ಮುಂದಿನ ಹಲವು ವರ್ಷಗಳ ಸ್ಥಿತಿಗತಿಗೆ ಅನುಗುಣವಾಗಿ ಪ್ರಸ್ತುತ 15ಸಾವಿರದಿಂದ 20 ಸಾವಿರ ಲೀಟರ್‌ನಷ್ಟು ನೀರನ್ನು ಸಂಸ್ಕರಣೆ ಮಾಡಲಾಗುತ್ತಿದೆ. ಈ ನೀರನ್ನು ಮರುಬಳಕೆ ಮಾಡಿಕೊಳ್ಳಲಾಗುವುದು. ಉದ್ಯಾನಕ್ಕೆ ಬಳಸಲಾಲಾಗುವುದು’ ಎಂದು ನಿರ್ದೇಶಕ ಡಾ.ಷಣ್ಮುಖ ಕಳಸದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದರಿಂದ ಆಸ್ಪತ್ರೆಯ ಅಲ್ಲಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುವುದು, ಅನೈರ್ಮಲ್ಯ ಸೃಷ್ಟಿಯಾಗುವುದು ತಪ್ಪಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT