ಶುಕ್ರವಾರ, ಫೆಬ್ರವರಿ 26, 2021
20 °C

ಎಸ್‌ಟಿಪಿ ಸಮಸ್ಯೆ ಪರಿಹಾರಕ್ಕೆ ಗಡುವು: ಸಿಎಂ ಬಳಿಗೆ ನಿಯೋಗ ಕರೆದೊಯ್ಯಲಿ: ಲಕ್ಷ್ಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಇಲ್ಲಿನ ಹಲಗಾ ಬಳಿ ಎಸ್‌ಟಿಪಿ (ಕೊಳಚೆ ನೀರು ಸಂಸ್ಕರಣಾ ಘಟಕ) ಸ್ಥಾಪನೆಗೆ ಜಮೀನು ನೀಡಲು ರೈತರಿಂದ ವಿರೋಧ ವ್ಯಕ್ತವಾಗಿದೆ. ಇದರಿಂದ ಉಂಟಾಗಿರುವ ಸಮಸ್ಯೆ ಪರಿಹರಿಸಲು ಮುಖ್ಯಮಂತ್ರಿ ಬಳಿಗೆ ನಿಯೋಗ ಕರೆದೊಯ್ಯಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮುಂದಾಗಬೇಕು’ ಎಂದು ಗ್ರಾಮೀಣ ಮತ ಕ್ಷೇತ್ರದ ಶಾಸಕಿ, ಲಕ್ಷ್ಮಿ ಹೆಬ್ಬಾಳಕರ ಒತ್ತಾಯಿಸಿದರು.

‘ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ 2 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘‌ಜವಾಬ್ದಾರಿ ಸ್ಥಾನದಲ್ಲಿರುವ ನೀವು ಮುಂದೆ ನಿಂತು ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಇದರಲ್ಲಿ ವೈಯಕ್ತಿಕ ಪ್ರತಿಷ್ಠೆ ಬಿಡೋಣ. 155 ರೈತರ ಬದುಕಿನೊಂದಿಗೆ ಚೆಲ್ಲಾಟ ಆಡಬಾರದು’ ಎಂದು ಸತೀಶ ಜಾರಕಿಹೊಳಿ ಅವರನ್ನು ಕೋರಿದರು.

‘ರೈತರ ಮನವೊಲಿಸದೇ ಘಟಕ ಸ್ಥಾಪನೆಗೆ ಅವಕಾಶ ಕೊಡುವುದಿಲ್ಲ. ತಕ್ಷಣ ಕಾಮಗಾರಿ ನಿಲ್ಲಿಸಬೇಕು. ಜಮೀನಿನ ಮಾಲೀಕರ ಮನವೊಲಿಸಬೇಕು. ಇಲ್ಲವಾದಲ್ಲಿ ರೈತರೊಂದಿಗೆ ಹೋಗಿ ಕಾಮಗಾರಿ ನಿಲ್ಲಿಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘2008ರಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ವಶಪಡಿಸಿಕೊಂಡ ಬರಡು ಜಮೀನಿಗೆ ಎಕರೆಗೆ ₹ 13 ಲಕ್ಷ ನೀಡಲಾಗಿದೆ. ಸಮೀಪದಲ್ಲಿರುವ ಫಲವತ್ತಾದ ಜಮೀನಿಗೆ 2009ರಲ್ಲಿ ತಲಾ ₹ 3 ಲಕ್ಷ ನಿಗದಿಪಡಿಸಲಾಗಿದೆ. ಎಲ್ಲ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮೀಣ ಕ್ಷೇತ್ರದ ಜಮೀನುಗಳನ್ನೇ ಪಡೆಯಲಾಗುತ್ತಿದೆ. ಆದರೆ, ಸೌಲಭ್ಯ ಕೊಡುತ್ತಿಲ್ಲ. ಇದ್ಯಾವ ನ್ಯಾಯ?’ ಎಂದು ಕೇಳಿದರು.

‘ಸುವರ್ಣ ವಿಧಾನಸೌಧದಿಂದ ಒಂದು ಕಿ.ಮೀ. ಪ್ರದೇಶವನ್ನು ಗ್ರೀನ್ ಬೆಲ್ಟ್ ಎಂದು ಘೋಷಿಸಲಾಗಿದೆ. ಆದರೆ, ಅರ್ಧ ಕಿ.ಮೀ. ದೂರದಲ್ಲಿಯೇ ಎಸ್‌ಟಿಪಿ ಸ್ಥಾಪಿಸಲಾಗುತ್ತಿದೆ. ಜಿಲ್ಲಾಡಳಿತವು ಹಲಗಾ ಜನರಿಗೆ ನೆಮ್ಮದಿಯ ಬದುಕು ನೀಡಲು ವಿಫಲವಾಗಿದೆ’ ಎಂದರು.

‘ಬೆಳೆ ನಾಶಪಡಿಸಿ ಜಮೀನು ವಶಪಡಿಸಿಕೊಳ್ಳಲಾಗಿದೆ. ಮೆಣಸಿನಕಾಯಿ ಕೊಯ್ದುಕೊಳ್ಳುತ್ತೇವೆ ಎಂದು ಹೋದವರನ್ನು ಪೊಲೀಸ್ ಬಲದೊಂದಿಗೆ ಹೊರಹಾಕಲಾಗಿದೆ. ಕುಡಿಯಲು ನೀರು ಕೊಡದವರು, ಜಮೀನು ಕಿತ್ತುಕೊಳ್ಳುತ್ತಿದ್ದಾರೆ. ಇದು ಹೃದಯವೇ ಇಲ್ಲದ ಜಿಲ್ಲಾಡಳಿತ’ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

‘ರೈತರನ್ನು ಬೀದಿಗೆ ತಳ್ಳಬೇಡಿ. ಅವರ ಜಮೀನಿಗೆ ಹಣ, ಬೆಳೆಗೆ ಪರಿಹಾರ ನೀಡದೇ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸಮೀಪದಲ್ಲಿಯೇ ಇರುವ 50 ಎಕರೆ ಬಂಜರು ಜಮೀನು ಕೊಡಲು ಸಿದ್ಧವಿದ್ದರೂ, ಫಲವತ್ತಾದ ಜಮೀನನ್ನೇ ಪಡೆದಿರುವುದರ ಅರ್ಥವೇನು’ ಎಂದು ಪ್ರಶ್ನಿಸಿದರು.

‘ಅಗತ್ಯವಾದರೆ ಕಾನೂನು ಹೋರಾಟಕ್ಕೂ ರೈತರು ಸಿದ್ಧರಿದ್ದಾರೆ. ನಾನು ಯಾವುದೇ ರೈತರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ಅವರ ಇಂಚು ಭೂಮಿಗೂ ಬೆಲೆ ಕೊಡಲೇಬೇಕು. ಇಲ್ಲವಾದಲ್ಲಿ ನಡೆಯುವ ಹೋರಾಟದಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗುತ್ತದೆ. ಸರ್ಕಾರ ಸೂಕ್ತ ಭರವಸೆ ನೀಡಿದರೆ ನಾನೇ ರೈತರ ಮನವೊಲಿಸುತ್ತೇನೆ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು