ಬೆಳಗಾವಿ: ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ತಾಲ್ಲೂಕಿನ ಭೂತಮರಾಮನಟ್ಟಿಯಲ್ಲಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ ಕ್ಯಾಂಪಸ್‌ನಲ್ಲಿ ಸೀಮೆಎಣ್ಣೆ ತುಂಬಿದ ಡಬ್ಬಿಗಳನ್ನು ಹಿಡಿದು ಸೋಮವಾರ ಪ್ರತಿಭಟನೆ ನಡೆಸಿದರು. ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಎದುರೇ ಆತ್ಮಹತ್ಯೆಗೆ ಯತ್ನಿಸಿದರು.
ಕುಲಪತಿ, ಕುಲಸಚಿವರಾದ ಬಸವರಾಜ ಪದ್ಮಸಾಲಿ ಹಾಗೂ ಪ್ರೊ.ಎಸ್.ಎಂ. ಹುರಕಡ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘ಪರೀಕ್ಷೆ ಮುಂದೂಡಬೇಕು ಇಲ್ಲದಿದ್ದರೆ ಇಲ್ಲಿಯೇ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಬೆದರಿಕೆ ಹಾಕಿದರು.
‘ಸ್ನಾತಕೋತ್ತರ ಪದವಿಯ 4ನೇ ಸೆಮಿಸ್ಟರ್ ಹಾಗೂ ಬಿ.ಇಡಿ 4ನೇ ಸೆಮಿಸ್ಟರ್ ಪರೀಕ್ಷೆಗಳನ್ನು ಸೆ.14ರಿಂದ ನಡೆಸಲು ವಿಶ್ವವಿದ್ಯಾಲಯ ದಿನಾಂಕ ನಿಗದಿಪಡಿಸಿದೆ. ಇದೇ ಸಮಯದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಎಸ್‌ಡಿಎ ಹಾಗೂ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳಿಗೆ ಪರೀಕ್ಷೆ ಇದೆ. ಇದಕ್ಕೆ ಅರ್ಜಿ ಸಲ್ಲಿಸಿರುವವರು ಎರಡೂ ಪರೀಕ್ಷೆಗೆ ಹಾಜರಾಗುವುದು ಕಷ್ಟಸಾಧ್ಯವಾಗಿದೆ. ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ಪರೀಕ್ಷೆಗೆ ದಿನಾಂಕ ನಿಗದಿಪಡಿಸಿರುವುದು ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ದೂಡಿದೆ. ಯಾವುದಕ್ಕೆ ಹಾಜರಾಗುವುದು ಎನ್ನುವ ಗೊಂದಲ ಉಂಟಾಗಿದೆ. ಉದ್ಯೋಗದ ಅವಕಾಶ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅಳಲು ತೋಡಿಕೊಂಡರು.
‘ಸೆ. 18ರವರೆಗೆ ಪಿಎಸ್‌ಐ(ಸಿವಿಲ್) ಹುದ್ದೆಯ ದೈಹಿಕ ಸದೃಢತೆ ಪರೀಕ್ಷೆ ಹಾಗೂ ಸೆ. 18, 19ರಂದು ಕೆಪಿಎಸ್‌ಸಿ ಎಸ್‌ಡಿಎ ಹುದ್ದೆಯ ಲಿಖಿತ ಪರೀಕ್ಷೆ ನಡೆಯಲಿವೆ. ಅನೇಕ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಲಿದ್ದಾರೆ. ಹೀಗಾಗಿ ಈಗ ನಿಗದಿಪಡಿಸಿರುವ ಪರೀಕ್ಷೆಯನ್ನು ವಿಶ್ವವಿದ್ಯಾಲಯದವರು ಮುಂದೂಡಬೇಕು’ ಎಂದು ಒತ್ತಾಯಿಸಿದರು.
‘ಸ್ನಾತಕೋತ್ತರ ಪದವಿಯ 3ನೇ ಸೆಮಿಸ್ಟರ್ ಪರೀಕ್ಷೆಯನ್ನು ಆ.19ರಂದು ಬರೆದಿದ್ದೇವೆ. ಈಗ ನಾಲ್ಕನೇ ಸೆಮಿಸ್ಟರ್‌ಗೆ ಸಮಯಾವಕಾಶ ನೀಡದೆ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಲಾಗಿದೆ. ಪಠ್ಯಕ್ರಮದ ಪಾಠ ಮುಗಿಸುವ ಮೊದಲೇ ದಿನಾಂಕ ನಿಗದಿಗೊಳಿಸಿರುವುದು ಸರಿಯಲ್ಲ’ ಎಂದು ತಿಳಿಸಿದರು.
ವಿದ್ಯಾರ್ಥಿ ಮುಖಂಡರಾದ ಮಲ್ಲೇಶ ಚೌಗಲಾ, ವಿಶಾಲ ಮೇತ್ರಿ, ಸೈದು ಹಿರೇಮನಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.