ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹಂಗಾಮು ಶುರುವಾದರೂ ನಿಗದಿಯಾಗದ ಕಬ್ಬು ದರ!

ಜಿಲ್ಲೆಯಲ್ಲಿ ಕಬ್ಬು ಕಟಾವು ಕಾರ್ಯ ಆರಂಭವಾಗಿದ್ದರೂ ರಾಜ್ಯ ಸರ್ಕಾರ ದರ ನಿಗದಿಪಡಿಸಲು ಮೀನಮೇಷ ಎಣಿಸುತ್ತಿದೆ.
Last Updated 9 ಅಕ್ಟೋಬರ್ 2020, 20:00 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಕಬ್ಬು ಕಟಾವು ಕಾರ್ಯ ಆರಂಭವಾಗಿದ್ದರೂ ರಾಜ್ಯ ಸರ್ಕಾರ ದರ ನಿಗದಿಪಡಿಸಲು ಮೀನಮೇಷ ಎಣಿಸುತ್ತಿದೆ.

ಜಿಲ್ಲೆಯಲ್ಲಿ ಕಬ್ಬು ಪ್ರಮುಖ ವಾಣಿಜ್ಯ ಬೆಳೆ. ಒಟ್ಟು 25 ಸಕ್ಕರೆ ಕಾರ್ಖಾನೆಗಳಿವೆ. 1.80 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಈಗಾಗಲೇ ಹಲವೆಡೆ ಕಟಾವಿಗೆ ಬಂದಿದೆ. ಕೆಲವು ಕಾರ್ಖಾನೆಗಳಲ್ಲಿ ಬಾಯ್ಲರ್ ಪ್ರದೀಪನ ಕಾರ್ಯಕ್ರಮಗಳು ನಡೆದಿವೆ. ಅಲ್ಲದೇ, ಕಬ್ಬು ಕಟಾವು ಮಾಡುವುದು ಕೂಡ ಶುರುವಾಗಿದೆ. ಆದರೆ, ಟನ್‌ ಕಬ್ಬಿಗೆ ಕಾರ್ಖಾನೆಗಳು ಎಷ್ಟು ದರ ನೀಡಬೇಕು ಎನ್ನುವುದನ್ನು ರಾಜ್ಯ ಸರ್ಕಾರ ಇನ್ನೂ ನಿಗದಿಪಡಿಸಿಲ್ಲ. ‘ಒಳ್ಳೆಯ ದರ’ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ರೈತರಿದ್ದಾರೆ ಮತ್ತು ಕಬ್ಬನ್ನು ಕಾರ್ಖಾನೆಗಳಿಗೆ ಪೂರೈಸಲು ಮುಂದಾಗಿದ್ದಾರೆ.

ಬೇಡಿಕೆ ಈಡೇರಿಲ್ಲ:ಕೇಂದ್ರ ಸರ್ಕಾರದಿಂದ ಟನ್ ಕಬ್ಬಿಗೆ ₹ 2,875 ನಿಗದಿಪಡಿಸಲಾಗಿದೆ. ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ದರ ಘೋಷಣೆಯಾಗಿಲ್ಲ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಟನ್‌ ಕಬ್ಬಿಗೆ ಕನಿಷ್ಠ ₹ 3,500 ನಿಗದಿಪಡಿಸಬೇಕು ಹಾಗೂ ಕಾರ್ಖಾನೆಗಳಿಂದ ಬರಬೇಕಾದ ಬಾಕಿ ಕೊಡಿಸಲು ಕ್ರಮ ಕೈಗೊಳ್ಳಬೇಕು ಎನ್ನುವುದು ಅವರ ಆಗ್ರಹವಾಗಿದೆ.

ಕಬ್ಬಿನ ದರ ನಿಗದಿಪಡಿಸಿದ ನಂತರ ಕಾರ್ಖಾನೆಗಳ ಆರಂಭಕ್ಕೆ ಅವಕಾಶ ಕಲ್ಪಿಸಬೇಕು ಎನ್ನುವ ಬೇಡಿಕೆ ಈಡೇರಿಕೆಗೆ ಸರ್ಕಾರ ಈ ವರ್ಷವೂ ಸೂಪ್ಪು ಹಾಕದಿರುವುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ.

ನಿರ್ಲಕ್ಷ್ಯ ಸರಿಯಲ್ಲ:‘ದರ ನಿಗದಿಪಡಿಸುವ ವಿಷಯದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರೂ, ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಹೋದ ವರ್ಷ ಸಕ್ಕರೆ ಕಾರ್ಖಾನೆಗಳು ₹ 2,750 ಘೋಷಿಸಿದ್ದವು. ಬಹಳ ಕಾರ್ಖಾನೆಗಳವರು ಅಷ್ಟು ಹಣವನ್ನು ನೀಡಿಲ್ಲ. ಈ ವರ್ಷವೂ ಹಾಗೆಯೇ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ. ಈ ನಿಟ್ಟಿನಲ್ಲಿ ಚರ್ಚಿಸುವುದಕ್ಕಾಗಿ ಜಿಲ್ಲಾಧಿಕಾರಿ ಕೂಡಲೇ ರೈತ ಸಂಘಟನೆಗಳ ಮುಖಂಡರು ಮತ್ತು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ಕರೆಯಬೇಕು’ ಎಂದು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಆಗ್ರಹಿಸಿದರು.

‘ಕಬ್ಬು ಕಟಾವಿಗೆ ಮುನ್ನವೇ ಇಂತಹ ಪೂರ್ವ ಸಿದ್ಧತೆಗಳನ್ನು ಮಾಡಬೇಕಿತ್ತು ಹಾಗೂ ದರವನ್ನು ಘೋಷಿಸಬೇಕಿತ್ತು. ಈ ವಿಷಯದಲ್ಲಿ ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ನೆರೆ ಹಾಗೂ ಕೋವಿಡ್–19 ಆರ್ಥಿಕ ಬಿಕ್ಕಟ್ಟಿನಿಂದ ನೊಂದಿರುವ ರೈತರ ಕೈಹಿಡಿಯಬೇಕು. ವೈಜ್ಞಾನಿಕವಾಗಿ ಬೆಲೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.

‘ಕೇಂದ್ರದಿಂದ ಎಷ್ಟು ದರ ನಿಗದಿಪಡಿಸಲಾಗಿದೆ ಎನ್ನುವ ಅಧಿಕೃತ ಮಾಹಿತಿ ಬಂದಿಲ್ಲ. ಕಬ್ಬು ಇಳುವರಿ ಪ್ರಮಾಣ ಆಧರಿಸಿ ರಾಜ್ಯ ಸರ್ಕಾರದಿಂದ ದರ ನಿಗದಿಪಡಿಸಲಾಗುತ್ತದೆ. ಕೆಲವೇ ದಿನಗಳಲ್ಲಿ ದರ ಘೋಷಣೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಬಂದಿದೆ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT