ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳಿಗೆ ಸಂವಹನ ಕೌಶಲ್ಯ ಅಗತ್ಯ

ಆರ್‌ಸಿಯು ಕುಲಪತಿ ಪ್ರೊ.ರಾಮಚಂದ್ರಗೌಡ
Last Updated 12 ಡಿಸೆಂಬರ್ 2020, 15:34 IST
ಅಕ್ಷರ ಗಾತ್ರ

ಬೆಳಗಾವಿ: ‘ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ ಅಳವಡಿಸಿಕೊಂಡರೆ ಜಗತ್ತಿನ ಯಾವುದೇ ಭಾಗದಲ್ಲಿ ಉದ್ಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಬದುಕಬಹುದು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ. ರಾಮಚಂದ್ರಗೌಡ ಹೇಳಿದರು.

ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಕಾಲೇಜಿನ ಇಂಗ್ಲಿಷ್ ವಿಭಾಗದಿಂದ ‘ಜಾಗತಿಕ ಸ್ಪರ್ಧೆಗಾಗಿ ಸಂವಹನ ಕೌಶಲಗಳು’ ವಿಷಯದ ಕುರಿತು ಶನಿವಾರ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ಕೌಶಲ ಆಧಾರಿತ ಶಿಕ್ಷಣ ಪಡೆಯಬೇಕು. ಪಠ್ಯದ ಹೊರತಾದ ಹಾಗೂ ಔದ್ಯೋಗಿಕ ಜಗತ್ತಿಗೆ ಬೇಕಾಗುವ ಕೌಶಲಗಳನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಈಗಿನ ಯುವಕರಲ್ಲಿ ಸಂವಹನ ಕೌಶಲಗಳ ಕೊರತೆಯಿಂದಾಗಿ, ಪದವಿಗೆ ತಕ್ಕ ಉದ್ಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಅನೇಕರು ಪದವೀಧರರಾಗಿದ್ದರೂ ಸಾಮಾನ್ಯ ರೈಲ್ವೆ ಗ್ಯಾಂಗ್‌ಮನ್‌ಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಕೌಶಲ ಬೆಳೆಸಿಕೊಂಡಿದ್ದರೆ ಒಳ್ಳೆಯ ನೌಕರಿಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದರು’ ಎಂದರು.

‘ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಜಗತ್ತಿಗೆ ತಕ್ಕಂತೆ ರೂಪಿಸುವ ನಿಟ್ಟಿನಲ್ಲಿ, ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯದಲ್ಲಿ ವಿದೇಶಿ ಭಾಷಾ ಅಧ್ಯಯನ ವಿಭಾಗಗಳನ್ನು ತೆರೆಯಲಾಗುವುದು. ಒಂದೆರಡಾದರೂ ವಿದೇಶಿ ಭಾಷೆಗಳ ವಿಭಾಗಗಳನ್ನು ಆರಂಬಿಸಲಾಗುವುದು’ ಎಂದು ತಿಳಿಸಿದರು.

ಪ್ರಾಚಾರ್ಯ ಡಾ.ಎಂ. ಜಯಪ್ಪ ಮಾತನಾಡಿ, ‘ಭಾರತವು ಇಂಗ್ಲಿಷ್ ಬಳಸುವ 2ನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಆರ್.ಕೆ. ನಾರಾಯಣ ಅವರು ಇಂಗ್ಲಿಷ್‌ ವಿದೇಶಿ ಭಾಷೆಯಲ್ಲ; ಅದು ನಮ್ಮ ಸ್ಥಳೀಯ ಭಾಷೆ ಎಂದು ತಿಳಿದುಕೊಳ್ಳುವಂತೆ ಹೇಳಿದ್ದರು. ಅವರ ಮಾತು ಸಾಕಾರವಾಗುವ ಕಾಲ ಸಮೀಪಿಸಿದೆ. ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಭಾಷಾ ಕೌಶಲಗಳನ್ನು ರೂಢಿಸಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೊ.ಎಂ.ಬಿ. ಹೆಗ್ಗನ್ನವರ, ಆರ್‌ಸಿಯು ಅಧ್ಯಾಪಕರ ಸಂಘದ ಅಧ್ಯಕ್ಷ ಪ್ರೊ.ಶ್ರೀನಿವಾಸ ಗೌಡ, ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಅಧ್ಯಾಪಕರ ಸಂಘದ ಮಾಜಿ ಅಧ್ಯಕ್ಷ ಪ್ರೊ.ಎಂ.ಬಿ. ಸಂಗಾಪೂರ ಅವರನ್ನು ಸತ್ಕರಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ಪೂಜಾ ಹಲ್ಯಾಳ, ಸಂಪನ್ಮೂಲ ವ್ಯಕ್ತಿ ಡಾ.ಶಾಂತಿ ವರದರಾಜನ್ ಮಾತನಾಡಿದರು.

ಉಪ ಪ್ರಾಚಾರ್ಯ ಅನಿಲ್ ರಾಮದುರ್ಗ, ಕಾರ್ಯಾಗಾರದ ಸಂಚಾಲಕ ಡಾ.ಎಂ.ಎನ್. ರಮೇಶ, ಜಗದೀಶ ಗಸ್ತಿ ಇದ್ದರು.

ಡಾ.ಕನಕಪ್ಪ ಪೂಜಾರ ಪರಿಚಯಿಸಿದರು. ಡಾ.ಕವಿತಾ ಕುಸಗಲ್ಲ ಸ್ವಾಗತಿಸಿದರು. ಡಾ. ಜ್ಯೋತಿ ಬಿರಾದರ ನಿರೂಪಿಸಿದರು. ಸುರೇಶ ಗಂಗೋತ್ರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT