ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನೂ ದೊರೆಯದ ‘ಬೆಂಬಲ ಬೆಲೆ’

ಕಡಲೆ ಮಾರಿದ ರೈತರಿಗೆ ₹ 8 ಕೋಟಿ ಬಾಕಿ
Last Updated 22 ಜೂನ್ 2018, 11:16 IST
ಅಕ್ಷರ ಗಾತ್ರ

ಬೆಳಗಾವಿ: ಬೆಂಬಲ ಬೆಲೆ ಯೋಜನೆಯಡಿ ಕಡಲೆ ಮಾರಿದ ಜಿಲ್ಲೆಯ ಬಹಳಷ್ಟು ರೈತರಿಗೆ ಸರ್ಕಾರದಿಂದ ಇನ್ನೂ ಹಣ ದೊರೆತಿಲ್ಲ.

2017–18ನೇ ಸಾಲಿನಲ್ಲಿ ರೈತರಿಂದ ತಲಾ 15 ಕ್ವಿಂಟಲ್‌ ಕಡಲೆ ಖರೀದಿಗೆ ಸರ್ಕಾರ ಅನುಮೋದನೆ ನೀಡಿತ್ತು. ಜಿಲ್ಲೆಯಲ್ಲಿ ಕಡಲೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುವ ಭಾಗದಲ್ಲಿ ಸ್ಥಾಪಿಸಲಾಗಿದ್ದ 9 ಕೇಂದ್ರಗಳಲ್ಲಿ ಖರೀದಿ ಪ್ರಕ್ರಿಯೆ ನಡೆಸಲಾಗಿತ್ತು. ಬೈಲಹೊಂಗಲ ಹಾಗೂ ಆ ತಾಲ್ಲೂಕಿನ ದೊಡವಾಡ, ರಾಮದುರ್ಗ, ಗೋಕಾಕ, ಸಂಕೇಶ್ವರ, ಸವದತ್ತಿ, ರಾಯಬಾಗ ತಾಲ್ಲೂಕಿನ ಕುಡಚಿ, ಅಥಣಿ ಪಟ್ಟಣ ಹಾಗೂ ತಾಲ್ಲೂಕಿನ ಕನ್ನಾಳದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು.

ದೊಡವಾಡ, ಕುಡಚಿ, ಕನ್ನಾಳ ಹಾಗೂ ಅಥಣಿ ಕೇಂದ್ರಗಳಲ್ಲಿ ಫೆ. 28ರಿಂದಲೇ ಖರೀದಿ ಪ್ರಕ್ರಿಯೆ ಆರಂಭವಾಗಿತ್ತು. ನಿಗದಿಪಡಿಸಿದ ಚೀಲಗಳ ಪೂರೈಕೆಯಲ್ಲಿ ವಿಳಂಬವಾದ್ದರಿಂದ ಉಳಿದ ಕೇಂದ್ರಗಳಲ್ಲಿ ಖರೀದಿ ಶುರುವಾಗಿರಲಿಲ್ಲ. ಕೆಲವು ದಿನಗಳ ನಂತರ ಎಲ್ಲ 9 ಕೇಂದ್ರಗಳಲ್ಲೂ ಖರೀದಿ ಪ್ರಕ್ರಿಯೆ ನಡೆದಿತ್ತು. ಮೊತ್ತವನ್ನು ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿ, ಅಗತ್ಯ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು. ಆದರೆ, ಖರೀದಿ ಪ್ರಕ್ರಿಯೆ ಪೂರ್ಣಗೊಂಡು ಒಂದೂವರೆ ತಿಂಗಳಾಗುತ್ತಾ ಬಂದರೂ ಹಣ ಸಂದಾಯವಾಗಿಲ್ಲ.

ಒಳ್ಳೆಯ ಫಸಲು:

ಜಿಲ್ಲೆಯಾದ್ಯಂತ 1,11,870 ಹೆಕ್ಟೇರ್‌ ಪ್ರದೇಶದಲ್ಲಿ ಕಡಲೆ ಬೆಳೆಯಲಾಗಿತ್ತು. ಒಳ್ಳೆಯ ಫಸಲು ಬಂದಿತ್ತು. ಹಿಂದಿನ ವರ್ಷ ಕ್ವಿಂಟಲ್‌ಗೆ ₹ 6,000ದಿಂದ ₹ 7,000ವರೆಗೆ ಇದ್ದ ಬೆಲೆ ಈ ಬಾರಿ ಕುಸಿದಿತ್ತು. ₹ 3,400ರಿಂದ ₹ 3,700ಕ್ಕೆ ಇಳಿದಿತ್ತು. ಇದರಿಂದಾಗಿ ರೈತರು ಕಂಗಾಲಾಗಿದ್ದರು. ರೈತರ ಬೇಡಿಕೆಗೆ ಸ್ಪಂದಿಸಿದ ಸರ್ಕಾರ ಕ್ವಿಂಟಲ್‌ ಕಡಲೆಗೆ ₹ 4,400 ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರಗಳನ್ನು ಆರಂಭಿಸಿತ್ತು.

‘ರಾಜ್ಯ ಸಹಕಾರ ಮಾರುಕಟ್ಟೆ ಮಹಾಮಂಡಳದ ಅಥಣಿ ಶಾಖೆ ವ್ಯಾಪ್ತಿಯಲ್ಲಿ 3,312 ರೈತರಿಂದ 37,189 ಕ್ವಿಂಟಲ್‌ ಖರೀದಿಸಲಾಗಿತ್ತು. ಅವರ ಖಾತೆಗೆ ₹ 16.36 ಕೋಟಿ ಜಮಾ ಮಾಡಲಾಗಿದೆ. ನಮ್ಮಲ್ಲಿ ಬಾಕಿ ಉಳಿದಿಲ್ಲ’ ಎಂದು ವ್ಯವಸ್ಥಾಪಕಿ ಗಾಯತ್ರಿ ಪವಾರ ಪ್ರತಿಕ್ರಿಯಿಸಿದರು.

ಮಹಾಮಂಡಳದ ಗೋಕಾಕ ಶಾಖೆಯಿಂದ 6 ಕೇಂದ್ರಗಳನ್ನು ತೆರೆಯಲಾಗಿತ್ತು. ಇಲ್ಲಿ 4,195 ರೈತರಿಂದ 49,340 ಕ್ವಿಂಟಲ್‌ ಕಡಲೆ ಖರೀದಿಸಲಾಗಿತ್ತು. ಒಟ್ಟು ₹ 21.70 ಕೋಟಿ ಹಣ ನೀಡಬೇಕಾಗಿದೆ. ಆದರೆ, ಜೂನ್‌ 19ರವರೆಗೆ 2588 ರೈತರಿಗೆ ₹ 13.23 ಕೋಟಿ ಹಣ ಜಮೆಯಾಗಿದೆ. ಉಳಿದಂತೆ 19263 ಕ್ವಿಂ. ಕಡಲೆ ಮಾರಿದ ವಿವಿಧ ತಾಲ್ಲೂಕುಗಳ 1,607 ರೈತರಿಗೆ ₹ 8.47 ಕೋಟಿ ಬರುವುದು ಬಾಕಿ ಇದೆ.

‘ಆನ್‌ಲೈನ್‌ನಲ್ಲಿ ಮಾಹಿತಿ ದಾಖಲಿಸುವಾಗ ಆಗಿರುವ ತಾಂತ್ರಿಕ ತೊಂದರೆಯಿಂದಾಗಿ ರೈತರಿಗೆ ಹಣ ಪಾವತಿಸುವಲ್ಲಿ ವಿಳಂಬವಾಗಿದೆ. ಹಂತ ಹಂತವಾಗಿ ಹಣ ದೊರೆಯಲಿದೆ’ ಎಂದು ಮಹಾಮಂಡಳದ ಬೆಳಗಾವಿ ಶಾಖೆಯ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT