‘ಅಂಗಡಿ ಕಾರ್ಯವೈಖರಿಗೆ ಬೇಸತ್ತ ಜನ’

ಗುರುವಾರ , ಏಪ್ರಿಲ್ 25, 2019
21 °C
ದಿನೇಶ್‌ ಗುಂಡೂರಾವ್ ಹೇಳಿಕೆ

‘ಅಂಗಡಿ ಕಾರ್ಯವೈಖರಿಗೆ ಬೇಸತ್ತ ಜನ’

Published:
Updated:

ಬೆಳಗಾವಿ: ‘ಸಂಸದ ಸುರೇಶ ಅಂಗಡಿ 15 ವರ್ಷಗಳಿಂದಲೂ ಕ್ಷೇತ್ರದ ಅಭಿವೃದ್ಧಿಗಾಗಿ ಏನೂ ಮಾಡಿಲ್ಲ. ಇಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ನವದೆಹಲಿಯಲ್ಲಿ ದನಿ ಎತ್ತಿಲ್ಲ. ಅವರ ಕಾರ್ಯವೈಖರಿಯಿಂದ ಜನ ಬೇಸತ್ತು ಹೋಗಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ದೂರಿದರು.

ಗುರುವಾರ ಇಲ್ಲಿ ನಡೆದ ಮತಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಬಾರಿಯ ಚುನಾವಣೆಯಲ್ಲಿ ಜನ ಬದಲಾವಣೆ ಬಯಸಿದ್ದಾರೆ. ಹೀಗಾಗಿ, ಕಾಂಗ್ರೆಸ್‌ಗೆ ಗೆಲುವು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಅಭ್ಯರ್ಥಿ ಡಾ.ವಿ.ಎಸ್. ಸಾಧುನವರ ಎಲ್ಲ ಗ್ರಾಮಗಳಿಗೆ ಹೋಗಿ ಮತ ಯಾಚಿಸಲು ಸಾಧ್ಯವಾಗುವುದಿಲ್ಲ. ಕಾರ್ಯಕರ್ತರು ಮತ್ತು ಮುಖಂಡರು ನಾನೇ ಅಭ್ಯರ್ಥಿ ಎಂದು ಭಾವಿಸಿ ಪಕ್ಷದ ಗೆಲುವಿಗೆ ಶ್ರಮಿಸಬೇಕು. ಸಮಸ್ಯೆಗಳಿದ್ದಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಜನಸಾಮಾನ್ಯರಿಗೆ ಯಾವ ಸೌಲಭ್ಯವನ್ನೂ ಕಲ್ಪಿಸಿಲ್ಲ. ಅವರಿಗೆ ಜನರ ಬಳಿ ಮತ ಕೇಳಲು ಮುಖವಿಲ್ಲ. ಅದಕ್ಕಾಗಿಯೇ ಪಾಕಿಸ್ತಾನದ ಜಪ ಮಾಡುತ್ತಿದ್ದಾರೆ. ಮನಮೋಹನ ಸಿಂಗ್ ಪ್ರಧಾನಿ ಇದ್ದಾಗ ಪಾಕ್‌ಗೆ ಹೋಗಿರಲಿಲ್ಲ. ಆದರೆ, ಮೋದಿ ಹೋಗಿದ್ದಲ್ಲದೇ ಅಲ್ಲಿನ ಪ್ರಧಾನಿ ಅಪ್ಪಿಕೊಂಡು ಉಡುಗೊರೆ ಬಂದಿದ್ದಾರೆ. ಈಗ ಕಾಂಗ್ರೆಸ್‌ಗೆ ಪಾಠ ಹೇಳುತ್ತಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ಕಾಂಗ್ರೆಸ್‌ಗೆ ಮತ ಹಾಕಿದರೆ ಅದು ಪಾಕಿಸ್ತಾನಕ್ಕೆ ಮತ ಹಾಕಿದಂತೆ ಎಂದು ಇಲ್ಲಿನ ಬಿಜೆಪಿ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಪಾಕಿಸ್ತಾನದ ಕೆಲವು ನಾಯಕರು ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಹೇಳಿದ್ದಾರೆ. ಇದನ್ನು ಗಮನಿಸಿದರೆ, ಪಾಕಿಸ್ತಾನಕ್ಕೆ ಯಾರ ಬೆಂಬಲವಿದೆ ಎನ್ನುವ ಅನುಮಾನ ಮೂಡುತ್ತದೆ’ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಲಕ್ಷ್ಮಿ ಹೆಬ್ಬಾಳಕರ, ಡಾ.ಅಂಜಲಿ ನಿಂಬಾಳ್ಕರ, ಮಹಾಂತೇಶ ಕೌಜಲಗಿ, ಮುಖಂಡರಾದ ಅಶೋಕ ಪಟ್ಟಣ, ಫಿರೋಜ್ ಸೇಠ್, ವೀರಣ್ಣ ಮತ್ತಿಕಟ್ಟಿ, ವೀರಕುಮಾರ ಪಾಟೀಲ, ರಾಜು ಸೇಠ್, ವಿನಯ ನಾವಲಗಟ್ಟಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !