ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Chandrayaan3: ಶಿವಶಕ್ತಿ ಪಾಯಿಂಟ್‌ನಲ್ಲಿ ಹಗಲು; ವಿಕ್ರಂ, ಪ್ರಜ್ಞಾನ್‌ಗೆ ಮರುಜೀವ

Published : 21 ಸೆಪ್ಟೆಂಬರ್ 2023, 13:06 IST
Last Updated : 21 ಸೆಪ್ಟೆಂಬರ್ 2023, 13:06 IST
ಫಾಲೋ ಮಾಡಿ
Comments

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಯಶಸ್ವಿಯಾಗಿ ಓಡಾಡಿದ ನಂತರ ನಿದ್ರಾವಸ್ಥೆಗೆ ತೆರಳಿದ ಚಂದ್ರಯಾನ–3ರ ಲ್ಯಾಂಡರ್ ವಿಕ್ರಂ ಹಾಗೂ ರೋವರ್ ಪ್ರಜ್ಞಾನ್‌ ಶುಕ್ರವಾರದಿಂದ ಮತ್ತೆ ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ಇಸ್ರೊ ಸನ್ನದ್ಧವಾಗಿದೆ.

15 ದಿನಗಳ ಚಂದ್ರನ ಹಗಲು ಶುಕ್ರವಾರದಿಂದ ಆರಂಭವಾಗಲಿದ್ದು, ಮೊದಲ ಕಿರಣ ಬಿದ್ದ ನಂತರ ವಿಕ್ರಂ ಹಾಗೂ ಪ್ರಜ್ಞಾನ್‌ನಲ್ಲಿ ಜಾಗೃತಾವಸ್ಥೆಗೆ ತರುವ ಯತ್ನವನ್ನು ವಿಜ್ಞಾನಿಗಳು ನಡೆಸಲಿದ್ದಾರೆ ಎಂದು ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಹೇಳಿದ್ದಾರೆ.

ಗುರುವಾರ ಚಂದ್ರನಲ್ಲಿ ಸೂರ್ಯೋದಯದ ನಂತರ ಆರಂಭವಾಗುವ ಈ ಪ್ರಕ್ರಿಯೆ ಶುಕ್ರವಾರವೂ ಮುಂದುವರಿಯಲಿದೆ. ಈ ಎರಡು ಪ್ರಮುಖ ಸಾಧನಗಳು ಮರಳಿ ಜಾಗೃತಾವಸ್ಥೆಗೆ ಬರುವ ನಿರೀಕ್ಷೆ ಇದೆ. ಇದು ಸೆ. 22ರಂದು ಗೊತ್ತಾಗಲಿದೆ’ ಎಂದಿದ್ದಾರೆ.

ಚಂದ್ರನ ಅಂಗಳದಲ್ಲಿನ ಸೂರ್ಯಾಸ್ತದ ಸಂದರ್ಭದಲ್ಲಿ ಸೆ. 2ರಂದು ಈ ಎರಡು ಸಾಧನಗಳನ್ನು ಹಂತ ಹಂತವಾಗಿ ನಿದ್ರಾವಸ್ಥೆಗೆ ಕಳುಹಿಸಲಾಗಿತ್ತು. ಇದಕ್ಕೂ ಪೂರ್ವದಲ್ಲಿ ಈ ಸಾಧನಗಳಲ್ಲಿರುವ ಬ್ಯಾಟರಿಗಳನ್ನು ಮರುಪೂರಣಗೊಳಿಸಲಾಗಿತ್ತು. ಜತೆಗೆ ಸೂರ್ಯಾಸ್ತದ ಸಂದರ್ಭದಲ್ಲೂ ಸೂರ್ಯನ ಕಿರಣಗಳು ಲಭ್ಯವಾಗುವಂತೆ ಸೌರ ಫಲಕಗಳನ್ನು ಸಜ್ಜುಗೊಳಿಸಲಾಗಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಚಂದ್ರನ ಸೂರ್ಯಾಸ್ತ ಸಂದರ್ಭದಲ್ಲಿ ಮೈನಸ್ 200 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ತಾಪಮಾನ ಎದುರಿಸಿ ಈ ಸಾಧನಗಳು ಜಾಗೃತಾವಸ್ಥೆಗೆ ಹೇಗೆ ಮರಳಲಿವೆ ಎಂಬ ಕುತೂಹಲ ಮೂಡಿದೆ. ಹೀಗೆ ಜಾಗೃತಗೊಂಡ ನಂತರ ಮುಂದಿನ 14 ದಿನಗಳ ಕಾಲ ಇವು ಭೂಮಿಗೆ ಚಂದ್ರನ ಅಂಗಳದ ಮಾಹಿತಿ ಕಳುಹಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT