ಮೋಳೆ: ಕೆಂಪವಾಡ ಗಡಿಯಲ್ಲಿ ತಪಾಸಣೆಯೇ ಇಲ್ಲ!

ಮೋಳೆ (ಬೆಳಗಾವಿ ಜಿಲ್ಲೆ): ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಡಿಯಲ್ಲಿ ಅಗತ್ಯ ತಪಾಸಣೆ ನಡೆಸಬೇಕು ಮತ್ತು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ (ಆರ್‌ಟಿಪಿಸಿಆರ್) ಇದ್ದರೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರ ಆದೇಶಿಸಿದೆ. ಆದರೆ, ಕಾಗವಾಡ ತಾಲ್ಲೂಕಿನ ಕೆಂಪವಾಡದಲ್ಲಿ ತಪಾಸಣೆ ನಡೆಯುತ್ತಿಲ್ಲ.
ಕೆಂಪವಾಡ ಗ್ರಾಮದಿಂದ ಮಹಾರಾಷ್ಟ್ರದ ಮೀರಜ್ ತಾಲ್ಲೂಕಿನ ಶಿಂದೇವಾಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಗಡಿ ರಸ್ತೆಯಲ್ಲಿ ತಪಾಸಣಾ ಕೇಂದ್ರವಿದೆ. ಅದರೆ, ಅಲ್ಲಿ ಸಿಬ್ಬಂದಿ ನಿಯೋಜಿಸಿಲ್ಲ. ಪರಿಣಾಮ, ನಿತ್ಯವೂ ಸಾವಿರಾರು ಮಂದಿ ಖಾಸಗಿ ವಾಹನಗಳ ಮೂಲಕ ಸಂಚರಿಸುತ್ತಿದ್ದಾರೆ. ಚೆಕ್‌ಪೋಸ್ಟ್‌ಗಳಿರುವ ಮಾರ್ಗಗಳನ್ನು ಬಿಟ್ಟು ಈ ಮಾರ್ಗಕ್ಕೆ ಆದ್ಯತೆ ಕೊಡುತ್ತಿದ್ದಾರೆ! ಇದರಿಂದಾಗಿ, ನೆರೆಯ ರಾಜ್ಯದಿಂದ ಬರುವವರ ಮೇಲೆ ಇಲ್ಲಿ ವಿಚಕ್ಷಣೆ ಇಲ್ಲದಂತಾಗಿದೆ.
ಕಳೆದ ವರ್ಷ ಕೋವಿಡ್ ಮೊದಲನೇ ಅಲೆಯ ವೇಳೆ ತಾಲ್ಲೂಕು ಆಡಳಿತದಿಂದ ಈ ತಪಾಸಣಾ ಕೇಂದ್ರ ನಿರ್ಮಾಣ ಮಾಡಿ ಅಗತ್ಯ ಸಿಬ್ಬಂದಿ ನಿಯೋಜನೆ ಮಾಡಿ ತಪಾಸಣೆ ಕೈಗೊಳ್ಳಲಾಗುತ್ತಿತ್ತು. ನೆರೆ ರಾಜ್ಯದಲ್ಲಿ ಕೋವಿಡ್ ವ್ಯಾಪಿಸುತ್ತಿದ್ದರೂ ಇಲ್ಲಿ ಕಟ್ಟುನಿಟ್ಟಿನ ಕ್ರಮ ವಹಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಸಂಭಾವ್ಯ 3ನೇ ಅಲೆ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸಬೇಕು. ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ ನಿಯೋಜಿಸಿ ನಿಗಾ ವಹಿಸಬೇಕು ಎನ್ನುವುದು ಜನರ ಆಗ್ರಹವಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.