ಗುರುವಾರ , ಸೆಪ್ಟೆಂಬರ್ 23, 2021
22 °C
ಚರಂಡಿ, ನಾಲೆಗಳಲ್ಲಿನ ಹೂಳು, ತ್ಯಾಜ್ಯ ತೆರವಿಗೆ ನಿರ್ಲಕ್ಷ್ಯ

ಮಳೆಗಾಲ ನಿರ್ವಹಣೆಗೆ ಸಾಲದ ತಯಾರಿ!

ಎಂ.ಮಹೇಶ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಗಾಲ ನಿರ್ವಹಣೆಗೆ ಅಗತ್ಯ ಪೂರ್ವ ತಯಾರಿ ಕೈಗೊಳ್ಳುವಲ್ಲಿ ಮಹಾನಗರಪಾಲಿಕೆ ಸೇರಿದಂತೆ ಆಯಾ ಸ್ಥಳೀಯ ಸಂಸ್ಥೆಗಳು ವಿಫಲವಾಗಿರುವುದು ಕಂಡುಬಂದಿದೆ.

ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡುವಲ್ಲಿ ಚರಂಡಿ, ನಾಲೆಗಳಲ್ಲಿನ ಹೂಳು, ತ್ಯಾಜ್ಯ ತೆರವಿಗೆ ನಿರ್ಲಕ್ಷ್ಯ ವಹಿಸಲಾಗಿದೆ. ಅಲ್ಲಲ್ಲಿ ಚರಂಡಿಗಳಲ್ಲಿ ಗಿಡಗಳೇ ಬೆಳೆದು ನಿಂತಿವೆ. ಇದರಿಂದಾಗಿ ಮಳೆ ನೀರು ರಸ್ತೆಗಳ ಮೇಲೆ ಸಂಗ್ರಹವಾಗುತ್ತಿದೆ.

ಅಲ್ಲಲ್ಲಿ ಅಂಗಡಿಗಳಿಗೆ, ಮನೆಗಳಿಗೆ ನುಗ್ಗುವುದು, ಜನರು ತೊಂದರೆ ಅನುಭವಿಸುವುದು ತಪ್ಪಿಲ್ಲ. ‘ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ’ ಎನ್ನುವಂತೆ ‘ಮಳೆಗಾಲದಲ್ಲಿ ಚರಂಡಿ ಸ್ವಚ್ಛತೆ’ ಕೈಗೊಳ್ಳಬೇಕಾದ ಸ್ಥಿತಿ ದೂರವಾಗಿಲ್ಲ.

ಪಾಠ ಕಲಿಯಲಿಲ್ಲವೇ?:

‘ಸ್ಮಾರ್ಟ್‌ ಸಿಟಿ’ ಯೋಜನೆ ಅನುಷ್ಠಾನಗೊಳ್ಳುತ್ತಿರುವ ನಗರದಲ್ಲೂ ಪರಿಸ್ಥಿತಿ ಚಿಂತಾಜನಕವಾಗಿದೆ. ಬಳ್ಳಾರಿ ನಾಲಾ, ಚರಂಡಿಗಳು ಹಾಗೂ ಮಳೆ ನೀರು ಕಾಲುವೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕೆಲಸ ನಡೆದಿಲ್ಲ. ಸದ್ಯ ಸಾಧಾರಣ ಮಳೆಯಾಗುತ್ತಿದೆ. ಭಾರಿ ಮಳೆ ಬಂದರೆ ತಾಪತ್ರಯ ತಪ್ಪುವುದಿಲ್ಲ ಎನ್ನುವಂತಹ ಸ್ಥಿತಿಯಲ್ಲಿ ಚರಂಡಿಗಳಿವೆ. ಕೋವಿಡ್ ನಿರ್ವಹಣೆ ನೆಪದಲ್ಲಿ ಅಧಿಕಾರಿಗಳು ಮಳೆಗಾಲ ನಿರ್ವಹಣೆಗೆ ಆದ್ಯತೆ ನೀಡಿಲ್ಲ ಎನ್ನುವ ಅಸಮಾಧಾನ ಸಾರ್ವಜನಿಕರಿಂದ ವ್ಯಕ್ತವಾಗುತ್ತಿದೆ. 2019ರಲ್ಲಿ ಮಳೆಗಾಲ ಕಲಿಸಿದ ಪಾಠದಿಂದಲೂ ಅಧಿಕಾರಿಗಳು ಎಚ್ಚೆತ್ತುಕೊಂಡಿಲ್ಲ; ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಹೂಳು ತೆರವಿಗೆ ಕ್ರಮ ವಹಿಸಲಿಲ್ಲ. ಬಳ್ಳಾರಿ ನಾಲಾ ಉಕ್ಕಿ ಹರಿಯುವುದು, ಬೆಳೆಗಳಿಗೆ ನೀರು ನುಗ್ಗುವುದು ಪುನರಾವರ್ತನೆಯಾಗಿದೆ.

ನಗರದ ಅಲ್ಲಲ್ಲಿ ರಸ್ತೆಗಳು ಕೂಡ ಹಾಳಾಗಿವೆ. ಗುಂಡಿಗಳು, ಕೆಸರಿನಿಂದ ತುಂಬಿವೆ. ಅಜಂ ನಗರ, ನೆಹರೂ ನಗರ, ಶಾಹೂನಗರ, ಸದಾಶಿವನಗರ ಮುಖ್ಯ ರಸ್ತೆ, ಖಾನಾಪುರ ರಸ್ತೆಯಲ್ಲಿ 3ನೇ ರೈಲ್ವೆ ಗೇಟ್ ಬಳಿಯ ರಸ್ತೆಗಳು ಗುಂಡಿಯಲ್ಲೇ ಮುಳುಗಿವೆ.

‘ಮುನವಳ್ಳಿಯ ಹುಬ್ಬಳ್ಳಿ-ಗೋಕಾಕ ರಸ್ತೆಯ ಬದಿಯ ಚರಂಡಿಗಳಲ್ಲಿ ಪ್ಲಾಸ್ಟಿಕ್ ಮೊದಲಾದ ತ್ಯಾಜ್ಯ ತುಂಬಿದ್ದು, ನೀರು ಸರಾಗವಾಗಿ ಹರಿಯುತ್ತಿಲ್ಲ. ಮಳೆ ಬಂದಾಗ ಚರಂಡಿ ಕಟ್ಟಿಕೊಂಡು ಬಸ್ ನಿಲ್ದಾಣ ಮತ್ತು ರಸ್ತೆಯು ಕಲುಷಿತ ನೀರು, ಪ್ಲಾಸ್ಟಿಕ್ ತ್ಯಾಜ್ಯ ತುಂಬುತ್ತದೆ. ಕೆಲವು ವ್ಯಾಪಾರಿ ಮಳಿಗೆಗಳು ಮತ್ತು ಮನೆಗಳಿಗೆ ಚರಂಡಿ ನೀರು ನುಗ್ಗಿ ಸಾವಿರಾರು ರೂಪಾಯಿ ನಷ್ಟ ಸಂಭವಿಸುವುದು ಸಾಮಾನ್ಯ ಎನ್ನುವಂತಾಗಿದೆ. ಇಷ್ಟಾದರೂ ಪುರಸಭೆ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ’ ಎಂದು ನಿವಾಸಿ ಕಿರಣ ಯಲಿಗಾರ ಸಮಸ್ಯೆಯನ್ನು ಕಟ್ಟಿಕೊಟ್ಟರು.

ಮನೆಗಳಿಗೆ ನುಗ್ಗುತ್ತದೆ:

ಸವದತ್ತಿ: ಇಲ್ಲಿನ ಕಟಕೋಳ ಬ್ಯಾಂಕ್ ಮತ್ತು ಆನಿಅಗಸಿ ಮೂಲಕ ಹರಿಯುವ ನೀರು ಗಿರಿಜನ್ನವರ ಓಣಿ ಹಾಗೂ ಕುಂಬಾರ ಓಣಿಯಲ್ಲಿ ಮನೆಗಳಿಗೆ ನುಗ್ಗುವುದು ಕಂಡುಬರುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲವಾಗಿದೆ.

ಹೂಳು ತುಂಬಿದೆ:

ರಾಮದುರ್ಗ: ಮೂರು ವರ್ಷಗಳ ಹಿಂದೆ ಕೆ–ಶಿಫ್‌ ಯೋಜನೆಯಲ್ಲಿ ನಿರ್ಮಿಸಿರುವ ರಸ್ತೆ ಅವೈಜ್ಞಾನಿಕವಾಗಿರುವುದರಿಂದಾಗಿ, ಮಳೆ ನೀರು ಅಂಬೇಡ್ಕರ್ ಕಾಲೊನಿಯ ಮನೆಗಳಿಗೆ ನುಗ್ಗಿ ಆವಾಂತರ ಸೃಷ್ಟಿ ಮಾಡುತ್ತದೆ. ಆಗ ನಿರ್ಮಿಸಿದ ಚರಂಡಿಯಲ್ಲಿ ಹೂಳು ತುಂಬಿ ಮಳೆ ನೀರು ರಸ್ತೆಗಳಲ್ಲಿಯೇ ನಿಲ್ಲುತ್ತದೆ. ಹೆಚ್ಚಿನ ನೀರು ಹರಿದು ಮನೆಗಳನ್ನು ಆವರಿಸುತ್ತದೆ. ಚರಂಡಿಗಳನ್ನು ಸ್ವಲ್ಪ ಎತ್ತರಕ್ಕೇರಿಸಿದ್ದರೆ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿತ್ತು. ಆದರೆ, ಆ ಕೆಲಸ ನಡೆದಿಲ್ಲವಾದ್ದರಿಂದ, ಜನರು ತೊಂದರೆ ಅನುಭವಿಸುವಂತಾಗಿದೆ.

ಸಮರ್ಪಕ ವ್ಯವಸ್ಥೆ ಇಲ್ಲ:

ಹುಕ್ಕೇರಿ: ಪಟ್ಟಣದಲ್ಲಿ ಭಾರಿ ಮಳೆಯಾದರೆ ನೀರು ಹರಿದು ಹೋಗುವ ಸಮರ್ಪಕ ವ್ಯವಸ್ಥೆ ಇಲ್ಲವಾದ್ದರಿಂದ, ರಸ್ತೆಗಳು ಕಾಲುವೆಗಳಂತಾಗುತ್ತವೆ. ಹೋದ ವರ್ಷ ಮಳೆ ನೀರಿನ ರಭಸಕ್ಕೆ ಕಾರು ತೇಲಿಕೊಂಡು ಹೋಗಿತ್ತು. ಅಪಾರ ಆಸ್ತಿಪಾಸ್ತಿ ನಷ್ಟ ಉಂಟಾಗಿತ್ತು. ಇದರಿಂದ ಸ್ಥಳೀಯ ಸಂಸ್ಥೆ ಎಚ್ಚೆತ್ತುಕೊಂಡಿಲ್ಲ. ಬಸವ ನಗರ, ಗಣೇಶ ಬಡಾವಣೆಗಳಲ್ಲಿ ನಿರ್ಮಿಸಿದ ಚರಂಡಿಗಳು ಚಿಕ್ಕದಿದ್ದು, ನಿರ್ವಹಣೆಯೂ ಸರಿಯಾಗಿಲ್ಲ.

ಬೈಪಾಸ್‌–ನಾಕಾ ಸಂಪರ್ಕ ಕಲ್ಪಿಸುವ (ಬಾಗೇವಾಡಿ ರಸ್ತೆ) ಹದಗೆಟ್ಟಿದೆ. ಗುಂಡಿಗಳು ಉಂಟಾಗಿವೆ. ಮಳೆ ನೀರು ರಸ್ತೆಯಲ್ಲೇ ಸಂಗ್ರಹವಾಗುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಬಿಎಸ್‌ಎನ್‌ಎಲ್ ಕಚೇರಿ ಎದುರಿನ ರಸ್ತೆಯಲ್ಲೂ ನೀರು ತುಂಬಿ ಜನರಿಗೆ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಆಗುತ್ತಿರುತ್ತದೆ.

ಇಚ್ಛಾಶಕ್ತಿ ಕೊರತೆ:

ಖಾನಾಪುರ: ತಾಲ್ಲೂಕು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದು. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಮಲಪ್ರಭಾ, ಮಹದಾಯಿ, ಪಾಂಡರಿ ಮತ್ತು ಮಾರ್ಕಂಡೇಯ ನದಿಗಳು ಹುಟ್ಟಿ ಹರಿಯುತ್ತವೆ. ಮಳೆಗಾಲದಲ್ಲಿ ರಭಸವಾಗಿ ಹರಿಯುವ ಕಾರಣ ಮರ ಗಿಡಗಳ ರೆಂಬೆ-ಕೊಂಬೆಗಳನ್ನು ಮತ್ತು ಮಣ್ಣನ್ನು ಹೊತ್ತು ತರುತ್ತವೆ. ಹೀಗಾಗಿ ಪ್ರತಿ ವರ್ಷ ಮಳೆಗಾಲದ ಬಳಿಕ ನದಿ ಪಾತ್ರದಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಾ ಸಾಗಿದೆ. ಆದರೆ, ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಜನಪ್ರತಿನಿಧಿಗಳು ಅಥವಾ ಅಧಿಕಾರಿಗಳು ಮುಂದಾಗುತ್ತಿಲ್ಲ.

ಪರಿಣಾಮ ಪ್ರತಿ ವರ್ಷ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಶಾಶ್ವತ ಕಾಮಗಾರಿಗಳನ್ನು ಕೈಗೊಳ್ಳಲು ಇಚ್ಛಾಶಕ್ತಿಯ ಕೊರತೆ ಇದೆ ಎನ್ನುತ್ತಾರೆ ಜನರು.

ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿ ಪೈಕಿ ಖಾನಾಪುರ–ರಾಮನಗರ ಮಾರ್ಗದ ಅಭಿವೃದ್ಧಿ ಕಾಮಗಾರಿ ವಿಳಂಬವಾಗುತ್ತಿದೆ. ಕಾರಣ ಈ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ವಾಹನಗಳು ಸರ್ಕಸ್ ಮಾಡುತ್ತಾ ಕ್ರಮಿಸಬೇಕಾಗಿದೆ. ತೀವ್ರ ಹದಗೆಟ್ಟಿರುವ ಕಾರಣ ಖಾನಾಪುರ-ರಾಮನಗರ ನಡುವಿನ 30 ಕಿ.ಮೀ. ಅಂತರ ಕ್ರಮಿಸಲು 2 ಗಂಟೆ ಬೇಕಾಗುತ್ತಿದೆ. ಇಲ್ಲಿ ರಸ್ತೆಯಲ್ಲಿ ಗುಂಡಿಗಳಿವೆಯೋ, ಗುಂಡಿಯೊಳಗೇ ರಸ್ತೆ ಇದೆಯೋ ಎಂಬ ಪ್ರಶ್ನೆ ಮೂಡುವಂತಿದೆ.

ಗುಂಡಿ, ಕೆಸರು:

ಬೈಲಹೊಂಗಲ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸರ್ಕಾರದಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಕೊರೊನಾ ಹಾಗೂ ಮಳೆ  ಕಾರಣದಿಂದ ಕುಂಟುತ್ತಾ ಸಾಗಿವೆ. ಮಳೆ ನೀರು ಸರಾಗವಾಗಿ ಹರಿಯುವ ವ್ಯವಸ್ಥೆ ಚರಂಡಿಗಳಲ್ಲಿಲ್ಲ. ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿ ಉಂಟಾಗಿದೆ. ಕೆಸರು ತುಂಬಿದೆ. ಗೋಕಾಕ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಎಂ.ಕೆ. ಹುಬ್ಬಳ್ಳಿ, ಹಿರೇಬಾಗೇವಾಡಿ, ತೆಲಸಂಗ, ಮೂಡಲಗಿ, ಘಟಪ್ರಭಾ ಮೊದಲಾದ ಕಡೆಗಳಲ್ಲೂ ಇದೇ ರೀತಿಯ ಪರಿಸ್ಥಿತಿ ಇದೆ.

ಸೂಚಿಸಿದ್ದೇನೆ

ನಾಲೆಗಳನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಹಾಗೂ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ವ್ಯವಸ್ಥೆ ಮಾಡುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕೆಲವೆಡೆ ಸ್ವತಃ ನಿಂತು ಕೆಲಸ ಮಾಡಿಸಿದ್ದೇನೆ.

–ಅನಿಲ ಬೆನಕೆ, ಶಾಸಕ, ಉತ್ತರ ಕ್ಷೇತ್ರ

ಇನ್ಮುಂದೆ ಗಮನ ಕೊಡ್ತೀವಿ

ಪೌರಕಾರ್ಮಿಕರು ಕೋವಿಡ್ ಕೆಲಸದಲ್ಲಿ ತೊಡಗಿದ್ದರಿಂದ ಪಟ್ಟಣದ ಸ್ವಚ್ಛತೆ ಮೊದಲಾದ ನಿರ್ವಹಣೆ ಕೆಲಸದಲ್ಲಿ ತೊಡಕಾಗಿದೆ. ಇನ್ಮಂದೆ ಆದ್ಯತೆ ಕೊಡಲಾಗುವುದು.

–ಮೋಹನ ಜಾಧವ, ಮುಖ್ಯಾಧಿಕಾರಿ, ಪುರಸಭೆ, ಹುಕ್ಕೇರಿ

ಆಗ ತಪ್ಪಬಹುದು

ಒಳಚರಂಡಿ ಯೋಜನೆ ಮಂಜೂರಾಗಿದೆ. ಅದನ್ನು ಕಾರ್ಯಗತ ಮಾಡಿದರೆ, ಚರಂಡಿಗಳು ದೊಡ್ಡದಾಗುವುದರಿಂದ ಮಳೆಯ ನೀರು ರಸ್ತೆ ಮೇಲೆ ಹರಿಯುವುದನ್ನು ತಪ್ಪಿಸಬಹುದಾಗಿದೆ.

–ಅಣ್ಣಾಗೌಡ ಪಾಟೀಲ, ಅಧ್ಯಕ್ಷ, ಪುರಸಭೆ, ಹುಕ್ಕೇರಿ

(ಪ್ರಜಾವಾಣಿ ತಂಡ: ಎನ್.ಪಿ. ಕೊಣ್ಣೂರ, ರವಿ ಎಂ. ಹುಲಕುಂದ, ಚನ್ನಪ್ಪ ಮಾದರ, ಪ್ರಸನ್ನ ಕುಲಕರ್ಣಿ, ಬಿ.ಎಂ. ಶಿರಸಂಗಿ, ಸುಧಾಕರ ತಳವಾರ, ಎಸ್. ವಿಭೂತಿಮಠ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು