ಶುಕ್ರವಾರ, ಏಪ್ರಿಲ್ 23, 2021
22 °C

'ಮುಂದಿನ ಸಿಎಂ ಸಿದ್ದರಾಮಯ್ಯ' ಜಮೀರ್ ಹೇಳಿಕೆಯಲ್ಲಿ ತಪ್ಪಿಲ್ಲ: ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘‌ಮುಂದಿನ ಮುಖ್ಯಮಂತ್ರಿ ನೀವೇ ಎಂದು ನನಗೂ ಹಲವು ಅಭಿಮಾನಿಗಳು ವಾಟ್ಸ್ಆ್ಯಪ್‌ ಗ್ರೂಪ್‌ಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ  ಪ್ರಚಾರ ಮಾಡುತ್ತಿರುತ್ತಾರೆ. ಹಾಗೆಯೇ ಶಾಸಕ ಜಮೀರ್ ಅಹಮದ್ ಕೂಡ ಅಭಿಮಾನಿಯಾಗಿ, ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.

ಇಲ್ಲಿ ಶನಿವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಅಥವಾ ಡಿ.ಕೆ. ಶಿವಕುಮಾರ್ ಎಂದು ಹೈಕಮಾಂಡ್ ಎಲ್ಲಿಯೂ ಹೇಳಿಲ್ಲ. ಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು 113 ಸೀಟುಗಳನ್ನು ಪಡೆದ ನಂತರ ಮುಖ್ಯಮಂತ್ರಿ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಹೇಳಿದರು.

'ಪಕ್ಷಾತೀತವಾಗಿ ಅಹಿಂದ ಸಮಾವೇಶ ಮಾಡಿದರೆ ನಾವೂ ಬರುತ್ತೇವೆ' ಎಂಬ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, 'ಅಹಿಂದ ಸಮಾವೇಶ ಮಾಡಿದರೆ ಕಾಂಗ್ರೆಸ್ ಪಕ್ಷದ ಆಧಾರದ ಮೇಲೆಯೇ ಮಾಡುತ್ತೇವೆ. ಜನರಲ್ ಆಗಿ ಮಾಡಲು ಬರುವುದಿಲ್ಲ. ರಮೇಶ ಜಾರಕಿಹೊಳಿ ಅವರು ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು' ಎಂದು ಹೇಳಿದರು. 

'ಅದೇ ರೀತಿ ಅಹಿಂದ ಸಮಾವೇಶದ ಬಗ್ಗೆ ಯಾವುದೇ ರೀತಿ ಚರ್ಚೆ ಮಾಡಿಲ್ಲ. ಅಹಿಂದ ಸಮಾವೇಶದ ಬಗ್ಗೆ ಎಲ್ಲಿಯೂ ಚರ್ಚೆ ಆಗಿಲ್ಲ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರೆ' ಎಂದು ಪ್ರತಿಕ್ರಿಯಿಸಿದರು.

'ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಘೋಷಣೆಯಾದ ನಂತರ ಪಕ್ಷದಿಂದ ಮುಂದಿನ ರಾಜಕೀಯ ಲೆಕ್ಕಾಚಾರ ಆರಂಭಿಸುತ್ತೇವೆ' ಎಂದರು.

ಶ್ರೀರಾಮಮಂದಿರ ನಿಧಿ ಸಮರ್ಪಣಾ ಅಭಿಯಾನದ ಲೆಕ್ಕದ ಕುರಿತು ಮಾತನಾಡಿದ ಸತೀಶ, ಅದು ಕೊಡುವವರ ಬಲ; ತೆಗೆದುಕೊಳ್ಳವರ ಬಲ. ನೀರಲ್ಲಿ ದುಡ್ಡು ಎಸೆಯುವ ಜನರೂ ನಮ್ಮ ದೇಶದಲ್ಲಿದ್ದಾರೆ. ಎಲ್ಲೆಲ್ಲಿಯೋ ಅನವಶ್ಯವಾಗಿ ಖರ್ಚು ಮಾಡುತ್ತಾರೆ. ಯಾರಿಗೆ, ಯಾರು ಲೆಕ್ಕ ಕೇಳುವುದು? ಅವರವರ ಇಷ್ಟ, ಭಕ್ತಿ, ಪ್ರೀತಿ ಎಂದು ಪರಿಗಣಿಸುತ್ತೇವೆ. ನಾವೇನೂ ಲೆಕ್ಕ ಕೇಳುವುದಿಲ್ಲ. ನನ್ನ ಹತ್ತಿರವೂ ಬಂದಿದ್ದರು. ಆದರೆ, ದೇಣಿಗೆ ನೀಡುವುದು ಚರ್ಚೆಯ ಹಂತದಲ್ಲಿದೆ. ಕೊಡಬೇಕೋ, ಬೇಡವೋ ಎನ್ನುವುದನ್ನು ಶೀಘ್ರವೇ ನಿರ್ಧರಿಸುತ್ತೇನೆ' ಎಂದು ಪ್ರತಿಕ್ರಿಯಿಸಿದರು.

‘ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದಂತೆ ಹೈಕಮಾಂಡ್‌ ತಾಕೀತು’
ಕುಶಾಲನಗರ (ಕೊಡಗು ಜಿಲ್ಲೆ): ‘
ಚುನಾವಣೆಗೂ ಮೊದಲೇ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡದಂತೆ ಹೈಕಮಾಂಡ್‌ ತಾಕೀತು ಮಾಡಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಶನಿವಾರ ಇಲ್ಲಿ ಹೇಳಿದರು. ‌‘ಸಿದ್ದರಾಮಯ್ಯ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಕೆಲವು ಶಾಸಕರು ಹೇಳುತ್ತಿರುವ ಬಗ್ಗೆ, ಸುದ್ದಿಗಾರರ ಕೇಳಿದ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು