ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಬಿ’ ರಿಪೋರ್ಟ್ ಹಾಕಿ ಅನ್ಯಾಯ ಮಾಡಿದರು: ಗುತ್ತಿಗೆದಾರ ಸಂತೋಷ್‌ ಪತ್ನಿ ರೇಣುಕಾ

Last Updated 20 ಜುಲೈ 2022, 15:27 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಆತಂಕ ಕೊನೆಗೂ ನಿಜವೇ ಆಯಿತು. ನನ್ನ ಪತಿಯ ಸಾವಿಗೆ ಪ್ರಮುಖ ಕಾರಣರಾದ ಕೆ.ಎಸ್.ಈಶ್ವರಪ್ಪ ಅವರು ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರಿದ್ದಾರೆ. ಅವರ ಮೇಲೆ ‘ಬಿ’ ರಿಪೋರ್ಟ್ ಹಾಕಿಸಿಕೊಂಡಿದ್ದಾರೆ. ನನಗೆ ನ್ಯಾಯ ಸಿಗುವವರೆಗೂ ಸುಮ್ಮನಿರುವುದಿಲ್ಲ’ ಎಂದು ಸಂತೋಷ್‌ ಪಾಟೀಲ ಅವರ ಪತ್ನಿ ರೇಣುಕಾ ಪ್ರತಿಕ್ರಿಯಿಸಿದರು.

‘ಗುತ್ತಿಗೆದಾರರಾಗಿದ್ದ ಪತಿ ಸಂತೋಷ್‌ ಉಡುಪಿಯ ಹೋಟೆಲ್‌ನಲ್ಲಿ ಸಾವನ್ನಪ್ಪಿದರು. ಈ ಸಾವಿನ ಪ್ರಕರಣದಲ್ಲಿ ಈಶ್ವರಪ್ಪ ಅವರೇ ಮುಖ್ಯ ಆರೋಪಿ ಎಂದು ದೂರು ನೀಡಿದ್ದೆ. ಪೊಲೀಸರು ತನಿಖೆ ಮಾಡಿ ನ್ಯಾಯ ಕೊಡಿಸುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ’ ಎಂದು ಬುಧವಾರ ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.

'ತನಿಖೆ ಮೇಲೆ ಈಶ್ವರಪ್ಪ ಪ್ರಭಾವ ಬಳಸುತ್ತಿದ್ದಾರೆ, ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೋರಿ ಈಚೆಗಷ್ಟೇ ರಾಜ್ಯಪಾಲರಿಗೂ ಪತ್ರ ಬರೆದು ಬೇಡಿಕೊಂಡಿದ್ದೇನೆ. ನನಗೆ ಯಾವುದರ ಭಯ ಇತ್ತೋ ಈಗ ಅದೇ ಆಗಿದೆ. ಉಡುಪಿ ಪೊಲೀಸರು ರಾಜಕೀಯ ಪ್ರಭಾವಕ್ಕೆ ಒಳಗಾಗಿ ತನಿಖೆ ಮಾಡಿದ್ದು, ನಮಗೆ ಅನ್ಯಾಯ ಮಾಡಿದ್ದಾರೆ’ ಎಂದು ರೇಣುಕಾ ಕಣ್ಣೀರು ಸುರಿಸಿದರು.

‘ನನ್ನ ಪತಿಯ ಮೊಬೈಲ್‌ನಲ್ಲಿ ಈಶ್ವರಪ್ಪ ವಿರುದ್ಧದ ಎಲ್ಲ ಸಾಕ್ಷ್ಯಗಳಿದ್ದವು. ಆದರೆ, ಪೊಲೀಸರು ಈವರೆಗೂ ಆ ಮೊಬೈಲ್ ನಮ್ಮ ಕೈಗೆ ಕೊಟ್ಟಿಲ್ಲ. ನನ್ನ ಪತಿಯ ಸಹೋದರ ತನಿಖಾಧಿಕಾರಿ ಹಾಗೂ ಎಸ್ಪಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಇದನ್ನೂ ತಿಳಿಸಿದ್ದೇನೆ’ ಎಂದರು.

‘ಈ ಪ್ರಕರಣದಿಂದ 15 ದಿನಗಳಲ್ಲಿ ಹೊರಬರುತ್ತೇನೆ ಎಂದು ಈಶ್ವರಪ್ಪ ಅವರು ಹೇಳಿದ್ದರು. ಈಗ ‘ಬಿ’ ರಿಪೋರ್ಟ್ ಹಾಕಿದ್ದರಿಂದ ಅವರ ಮಾತು ನಿಜವೇ ಆಯಿತು ಅಲ್ಲವೇ?’ ಎಂದೂ ಪ್ರಶ್ನಿಸಿದರು.

‘ಮುಂದೆಯೂ ನಾನು ಕಾನೂನು ಹೋರಾಟ ಮಾಡುತ್ತೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತೇನೆ. ಅಗತ್ಯಬಿದ್ದರೆ ಮುಖ್ಯಮಂತ್ರಿ ಅವರನ್ನೂ ಭೇಟಿಯಾಗುತ್ತೇನೆ’ ಎಂದರು.

‘ಪತಿ ಮೃತಪಟ್ಟ ಸಂದರ್ಭದಲ್ಲಿ ನಮಗೆ ನ್ಯಾಯ ಕೊಡಿಸುವುದಾಗಿ ಅನೇಕರೂ ಭರವಸೆ ನೀಡಿದ್ದರು. ಆದರೆ, ಯಾವ ಭರವಸೆಯೂ ಈಡೇರಿಲ್ಲ. ಈ ಪ್ರಕರಣ ಮುಚ್ಚಿ ಹಾಕಲು ಯತ್ನಿಸಲಾಗುತ್ತಿದೆ’ ಎಂದೂ ದೂರಿದರು.

‘ಯಾವುದೇ ವ್ಯಕ್ತಿ ಡೆತ್‌ನೋಟ್ ಬರೆದರೆ ಮಾತ್ರ ಆರೋಪ ಮಾನ್ಯವಾಗುತ್ತದೆಯೇ? ಹಾಗಾದರೆ ನಾವೆಲ್ಲರೂ ಈಶ್ವರಪ್ಪ ವಿರುದ್ಧ ಡೆತ್‌ನೋಟ್ ಬರೆದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಆವಾಗಲಾದರೂ ಅದು ಮಾನ್ಯವಾಗುತ್ತದೆಯೇ?’ ಎಂದೂ ಪ್ರಶ್ನಿಸಿದರು.

ಪ್ರತಿಭಟನೆ: ಉಡುಪಿ ಟೌನ್ ಪೊಲೀಸರು ನ್ಯಾಯಾಲಯಕ್ಕೆ ‘ಬಿ’ ರಿಪೋರ್ಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಬಡಸ ಗ್ರಾಮದಲ್ಲಿ ಸಂತೋಷ ಪಾಟೀಲ ಮನೆ ಎದುರು ಯುವಕರು ಪ್ರತಿಭಟನೆ ನಡೆಸಿದರು. ಈಶ್ವರಪ್ಪ ಹಾಗೂ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT