ಭಾನುವಾರ, ಏಪ್ರಿಲ್ 2, 2023
33 °C
ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಿಂದ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಅಂಗವಾಗಿ ಜಾಗೃತಿ ಜಾಥಾ

‘ಸಂಕಷ್ಟದಲ್ಲೂ ಸಮಚಿತ್ತದ ಆಲೋಚನೆ ಮಾಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಮ್ಮಲ್ಲಿನ ಸಮಚಿತ್ತದ ಯೋಚನೆಗಳು ಆತ್ಮಹತ್ಯೆಯ ವಿಚಾರಗಳನ್ನು ದೂರಗೊಳಿಸುತ್ತವೆ ಎಂದು ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಸಿ. ಧಾರವಾಡ ಅಭಿಪ್ರಾಯ ಪಟ್ಟರು.

ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಮಾನಸಿಕ ರೋಗ ಚಿಕಿತ್ಸಾ ವಿಭಾಗ ಹಾಗೂ ನರ್ಸಿಂಗ್ ಸೈನ್ಸ್‌ ವಿಭಾಗದ ಸಹಯೋಗದಲ್ಲಿ ‘ವಿಶ್ವ ಆತ್ಮಹತ್ಯೆ ತಡೆ ದಿನಾಚರಣೆ’ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಷಣ ಮಾತ್ರದ ಕೆಟ್ಟ ಯೋಚನೆಗೆ ಒಳಗಾಗಿ ಇಂದು ನಮ್ಮ ಯುವ ಜನಾಂಗ ಆತ್ಮಹತ್ಯೆಗೆ ತುತ್ತಾಗುತ್ತಿದೆ. ಭಾರತದಲ್ಲಿ ಪ್ರತಿ ದಿನ ಸುಮಾರು 450 ಜನ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಇದು ನಿಜಕ್ಕೂ ಖೇದಕರ ಸಂಗತಿ. ಇದರ ಜಾಗೃತಿಗಾಗಿಯೇ ಪ್ರತಿ ವರ್ಷ ಸೆಪ್ಟೆಂಬರ್‌ 10 ರಂದು ವಿಶ್ವ ಆತ್ಮಹತ್ಯೆ ತಡೆ ದಿನ ಆಚರಿಸಲಾಗುತ್ತದೆ ಎಂದರು.

ಮಾನಸಿಕ ರೋಗ ತಜ್ಞ ಡಾ.ಸುಮಿತಕುಮಾರ ದುರ್ಗೋಜಿ ಮಾತನಾಡಿ, ಆತ್ಮಹತ್ಯೆ ಆಲೋಚನೆ ಒಂದು ಮಾನಸಿಕ ರೋಗ ಲಕ್ಷಣ. ಇಂತಹ ಆಲೋಚನೆಗಳು ಬರುವ ಮುಂಚೆ ಕೆಲವೊಂದು ಲಕ್ಷಣಗಳನ್ನು ತೋರಿಸುತ್ತದೆ. ತಮ್ಮ ಸಂಬಂಧಿಕರಿಗೆ, ಆತ್ಮೀಯರಿಗೆ ಭೇಟಿಯಾಗುವುದು, ಜಿಗುಪ್ಸೆ ಹೊಂದಿದ ಜೀವನ ಪದ್ಧತಿ... ಹೀಗೆ ಅನೇಕ ರೀತಿಯ ಲಕ್ಷಣಗಳನ್ನು ತೋರುತ್ತಾರೆ. ಆದರೆ, ಇಂತಹ ಲಕ್ಷಣವುಳ್ಳ ವ್ಯಕ್ತಿಗಳನ್ನು ತಕ್ಷಣ ಮಾನಸಿಕ ರೋಗ ಚಿಕಿತ್ಸೆಗೆ ಕರೆದೊಯ್ದರೆ ತಕ್ಕ ಉಪಚಾರ ಮಾಡಬೇಕು ಎಂದರು.

ಕೆಎಲ್‌ಇ ಸೆಂಟಿನರಿ ಇನ್‌ಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಸೈನ್ಸ್‌ನ ಪ್ರಾಂಶುಪಾಲ ವಿಕ್ರಾಂತ ನೇಸರಿ ಮಾತನಾಡಿ, ಸಾಲಬಾಧೆ, ಶಿಕ್ಷಣದಲ್ಲಿ ಹಿಂದುಳಿಕೆ, ಕ್ಲೇಷ, ಕೌಟುಂಬಿಕ ಸಮಸ್ಯೆ ಹೀಗೆ ಅನೇಕ ಕಾರಣಗಳಿಂದ ಆತ್ಮಹತ್ಯೆಗೆ ಒಳಗಾಗುತ್ತಿರುವ ಸಂಖ್ಯೆ ಹೆಚ್ಚಿದೆ. ಇದರಿಂದ ಆತನ ಕುಟುಂಬ ಹಾಗೂ ಸಮಾಜದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದು ಅನುಭವಿಸಿದವರಿಗೇ ಗೊತ್ತು. ಇದು ನಮ್ಮ ಮೇಲಷ್ಟೇ ಅಲ್ಲ ನಮ್ಮ ಸಮಾಜದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಕ್ಷಣಮಾತ್ರದ ಕೆಟ್ಟ ಯೋಚನೆಗಳನ್ನು ಕೈಬಿಟ್ಟು ತಕ್ಕ ಉಪಚಾರವನ್ನು ಹೊಂದುವುದು ಉತ್ತಮ ಎಂದರು.

ಜಾಥಾ: ನಗರದ ನಾಥಪೈ ವೃತ್ತದಿಂದ ಪ್ರಾರಂಭವಾದ ಜಾಥಾ ವಡಗಾವಿಯ ಎಳ್ಳೂರ ಕ್ರಾಸ್‌ ಮುಖಾಂತರ ಕೆಎಲ್ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆ ತಲುಪಿತು. ಸಮಸ್ತ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಮತ್ತು ಬೋಧಕ, 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು