ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಬಾಗ: ಆಸ್ಪತ್ರೆ ಕಟ್ಟಡ ಚೆನ್ನಾಗಿದೆ, ಔಷಧಿ ಬೇಕಾಗಿದೆ!

ರಾಯಬಾಗದ 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯ ಸ್ಥಿತಿ
Last Updated 1 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ರಾಯಬಾಗ: ಇಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ. ವಿವಿಧ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳಿವೆ. ಆದರೆ, ಒಮೊಮ್ಮೆ ಸಾರ್ವಜನಿಕರಿಗೆ ಬೇಕಾಗುವ ಅಗ್ಯತ ಔಷಧಿಗಳ ಕೊರತೆ ಕಂಡುಬರುತ್ತಿದೆ. ಔಷಧಿಯನ್ನು ಹೊರಗಿನಿಂದ ತರಬೇಕಾದ ಸ್ಥಿತಿ ಇದೆ! ಜೊತೆಗೆ ತಜ್ಞ ವೈದ್ಯರ ಕೊರತೆಯೂ ಕಾಡುತ್ತಿದೆ.

ಸರ್ಕಾರಿ ಅಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಜನ ಆರೋಗ್ಯ ಸೇವೆಯಿಂದ ವಂಚಿತರಾಗುತ್ತಾರೆ. ಪಟ್ಟಣದಲ್ಲಿ ಒಟ್ಟು 45 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಪಟ್ಟಣದ ಜನತೆಯೊಂದಿಗೆ ಸುತ್ತಮುತ್ತಲಿನ ಗ್ರಾಮದ ಜನರು ಕೂಡ ಇಲ್ಲಿಗೆ ಚಿಕಿತ್ಸೆಗೆಂದು ಬರುತ್ತಾರೆ. ಪ್ರಸೂತಿಗೆ, ಚಿಕ್ಕಮಕ್ಕಳಿಗೆ ಹಾಗೂ ಕೀಲುಗಳ ಚಿಕಿತ್ಸೆಗೆ ತಜ್ಞ ವೈದ್ಯರಿಲ್ಲ. ಪರಿಣಾಮ, ಖಾಸಗಿ ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ. ಇಲ್ಲವೇ, ದೂರದ ಜಿಲ್ಲಾಸ್ಪತ್ರೆಗೆ ತೆರಳಬೇಕಾಗುತ್ತದೆ. ಇದು ಬಡ ರೋಗಿಗಳಿಗೆ ಹೊರೆಯಾಗಿ ಪರಿಣಮಿಸಿದೆ.

ಸದ್ಯ ಕೊರೊನಾ ವೈರಾಣು ಸೋಂಕು ಕಾಣಿಸಿಕೊಂಡವರ ಶುಶ್ರೂಷೆಗೆ ವ್ಯವಸ್ಥೆ ಇಲ್ಲಿ ಮಾಡಿಕೊಳ್ಳಲಾಗಿದೆ. 6 ಹಾಸಿಗೆಗೆಳ ವಿಶೇಷ ಐಸೋಲೇಷನ್ ವಾರ್ಡ್‌ ಸಿದ್ಧವಿಡಲಾಗಿದೆ. ಪ್ರಥಮ ಚಿಕಿತ್ಸೆಗೆ ಬೇಕಾದ ಎಲ್ಲ ಸೌಲಭ್ಯಗಳು ಇಲ್ಲಿವೆಯಾದರೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಬೇಕಾದ ಅನಿವಾರ್ಯತೆ ಇದೆ.

ಸದ್ಯ ಈ ಆಸ್ಪತ್ರೆಯಲ್ಲಿ 6 ವೈದ್ಯರು, 30 ಸ್ಟಾಫ್‌ ನರ್ಸ್‌ಗಳು ಸೇರಿದಂತೆ 45 ಸಿಬ್ಬಂದಿ ಇದೆ. ಹಾವು ಕಡಿತ, ನಾಯಿ ಕಡಿತಕ್ಕೆ ಔಷಧಿ ಕೊರತೆ ಇಲ್ಲ. 3 ಅಂಬ್ಯುಲೆನ್ಸ್‌ಗಳಿವೆ. ಆಸ್ಪತ್ರೆಯಲ್ಲಿ ಡಿಜಿಟಲ್ ಎಕ್ಸರೇ, 3 ಹಾಸಿಗೆಗಳ ಐಸಿಯು ಹಾಗೂ ಒಂದು ವೆಂಟಿಲೇಟರ್‌ ಸೌಲಭ್ಯವಿದೆ. ಡಯಾಲಿಸ್‌ ವಾರ್ಡಲ್ಲಿ 2 ಹಾಸಿಗೆಗಳ ಸೌಲಭ್ಯವಿದೆ. ಗಂಭೀರ ಗಾಯ, ಸುಟ್ಟಗಾಯಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತದೆ. ತಾಲ್ಲೂಕಿನಲ್ಲಿ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. 2 ಸಮುದಾಯ ಆರೋಗ್ಯ ಕೇಂದ್ರಗಳಿವೆ.

100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗೆ ತಕ್ಕಂತೆ ಇಲ್ಲಿ ಸೌಲಭ್ಯ ಒದಗಿಸಬೇಕು. ರೋಗಿಗಳನ್ನು ದೂರದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದನ್ನು ತಪ್ಪಿಸುವುದಕ್ಕಾಗಿ ಇಲ್ಲಿಯೇ ಹೆಚ್ಚಿನ ಸೇವೆಗಳು ದೊರೆಯುವಂತೆ ಮಾಡಬೇಕು. ಔಷಧಿಗಳ ಕೊರತೆ ಉಂಟಾಗದಂತೆ ನೋಡಿಕೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT