ರಾಮದುರ್ಗ: ಇಲ್ಲಿ 56 ವರ್ಷಗಳಿಂದಲೂ ಗ್ರಾಮೀಣ ಪ್ರತಿಭೆಗಳನ್ನು ಹೊರ ಜಗತ್ತಿಗೆ ಪರಿಚಯಿಸಿದ ಕೀರ್ತಿ ಈ ಭಾಗದ ಪ್ರತಿಷ್ಠಿತ ಕಾಲೇಜುಗಳಲ್ಲಿ ಒಂದಾದ ಪಟ್ಟಣದ ಸಿ.ಎಸ್. ಬೆಂಬಳಗಿ ಕಲಾ, ಶಾ.ಎಂ.ಆರ್. ಪಾಲರೇಶಾ ವಿಜ್ಞಾನ ಮತ್ತು ಜಿ.ಎಲ್. ರಾಠಿ ವಾಣಿಜ್ಯ ಕಾಲೇಜಿಗೆ ಸಲ್ಲುತ್ತದೆ. ಆ ಕಾಲದಲ್ಲಿ ಉನ್ನತ ಶಿಕ್ಷಣಕ್ಕೆ ಹಾಗೂ ಪದವಿ ಪಡೆಯುವವರಿಗೆ ದಾರಿ ತೋರಿಸಿದ ಕಾಲೇಜು ಎಂಬ ಹೆಗ್ಗಳಿಕೆ ಇದಕ್ಕಿದೆ.
ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಶಿಸ್ತು ಮತ್ತು ಉತ್ತಮ ವ್ಯಕ್ತಿತ್ವ ರೂಪಿಸುವ ಜೊತೆಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಕೆಲಸವನ್ನು ಈ ಕಾಲೇಜು ಮಾಡುತ್ತಿದೆ. ಇಲ್ಲಿ ಪದವಿ ಪಡೆದ ಹಲವರು ಉನ್ನತ ಮಟ್ಟದ ಅಧಿಕಾರಿಗಳಾಗಿ ಸಮಾಜದಲ್ಲಿ ಹೆಸರು ಗಳಿಸಿದ್ದಾರೆ.
ಉತ್ತಮ ಬೋಧನೆಯಿಂದಾಗಿ ಇಲ್ಲಿನ ಉಪನ್ಯಾಸಕರು ಹೆಸರು ಮಾಡಿದ್ದಾರೆ. ಹೀಗಾಗಿ, ಬಹಳಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಮುಂದಾಗುತ್ತಾರೆ. ಆ ರೀತಿಯ ಪ್ರತಿಷ್ಠೆ ಈ ಕಾಲೇಜಿನದಾಗಿದೆ.
ಪಠ್ಯಕ್ರಮದ ಅತ್ಯುತ್ತಮ ಬೋಧನೆ, ಅನುಭವಿ ಉಪನ್ಯಾಸಕರು, ತರಬೇತಿ ಪಡೆದ ದೈಹಿಕ ಶಿಕ್ಷಣ ನಿರ್ದೇಶಕರು ಇರುವುದರಿಂದ ಇಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಜೊತೆಗೆ ಆಟದಲ್ಲಿಯೂ ಪ್ರಖ್ಯಾತಿ ಹೊಂದಿದ ಪ್ರತಿಭೆಗಳು ಇಲ್ಲಿಂದ ಹೊರಹೊಮ್ಮಿದ್ದಾರೆ. ವಿಶ್ವವಿದ್ಯಾಲಯ ಬ್ಲ್ಯೂ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮಿಂಚಿದ ಪ್ರತಿಭೆಗಳು ಇಲ್ಲಿನವವಾಗಿವೆ. ಕಾಲೇಜಿನಲ್ಲಿ ಜಿಮ್ ವ್ಯವಸ್ಥೆಯನ್ನೂ ಮಾಡಲಾಗಿದೆ.
1966ರಲ್ಲಿ ಆರು ಉಪನ್ಯಾಸಕರು ಮತ್ತು 60 ವಿದ್ಯಾರ್ಥಿಗಳಿಂದ ಆರಂಭಗೊಂಡ ಕಾಲೇಜು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನವನ್ನು ಧಾರೆ ಎರೆದಿದೆ. ಇಲ್ಲಿ ಪ್ರವೇಶಕ್ಕೆ ಪ್ರಭಾವಿಗಳಿಂದ ಶಿಫಾರಸು ತರುವುದೂ ಉಂಟು. ಬಿ.ಎ., ಬಿ.ಕಾಂ., ಬಿ.ಎಸ್ಸಿ. ಕೋರ್ಸ್‌ಗಳು ಇಲ್ಲಿವೆ.
2005ರವರೆಗೆ ಬಾಡಿಗೆ ಕಟ್ಟಡದಲ್ಲಿತ್ತು. ಬಳಿಕ ಸುಸಜ್ಜಿತ ಕಟ್ಟಡ ಕಂಡುಕೊಂಡಿದೆ. ಸುತ್ತಲೂ ಗಿಡ–ಮರಗಳನ್ನು ಬೆಳೆಸಿ ಪರಿಸರ ಪ್ರೇಮವನ್ನು ಪ್ರದರ್ಶಿಸಲಾಗಿದೆ. ಜೊತೆಗೆ ಆಹ್ಲಾದಕರ ವಾತಾವರಣವನ್ನೂ ನಿರ್ಮಿಸಲಾಗಿದೆ. ಅಲ್ಲಿನ ಭವ್ಯ ಕಟ್ಟಡದಲ್ಲಿ ಬೋಧನಾ ಕೊಠಡಿ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಕಂಪ್ಯೂಟರ್, ಭಾಷಾ ವಿಜ್ಞಾನ ಪ್ರಯೋಗಾಲಯ ತಂತ್ರಜ್ಞಾನ ಕಲಿಕೆಗೆ ಉಪಯುಕ್ತವಾಗಿವೆ.
ಗ್ರಂಥಾಲಯದ ವಿಶೇಷತೆ: ಗ್ರಂಥಾಲಯದ ಗೋಡೆಯಲ್ಲಿ ರಾಜ್ಯದ ಒಟ್ಟು 165 ಪ್ರಮುಖ ಸಾಹಿತಿಗಳ ಫೋಟೊಗಳನ್ನು ಪ್ರದರ್ಶಿಸಿ, ಅವರ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡಲಾಗಿದೆ. 5ಸಾವಿರ ಪುಸ್ತಕಗಳು ಲಭ್ಯ ಇವೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಪೂರಕವಾಗಿವೆ. 19 ಮಂದಿ ಉಪನ್ಯಾಸಕರು, ಇಬ್ಬರು ಬೋಧಕೇತರ ಸಿಬ್ಬಂದಿಯಿಂದ ನಿರಂತರ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ 15 ಜನ ಅತಿಥಿ ಉಪನ್ಯಾಸಕರು ಇದ್ದಾರೆ.
ಗುಣಮಟ್ಟದಿಂದಾಗಿ
ರಾಮದುರ್ಗ ಪಟ್ಟಣದ ಮಧ್ಯದಲ್ಲಿರುವ ಕಾಲೇಜು ನಮ್ಮದು. ವಿದ್ಯಾರ್ಥಿನಿಯರಿಗೆ ರಕ್ಷಣೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುತ್ತದೆ. ಅದಕ್ಕಾಗಿ ಹೆಚ್ಚಿನವರು ಪ್ರವೇಶ ಪಡೆಯುತ್ತಾರೆ.
–ಡಾ.ರಾಜಶ್ರೀ ಗುದಗನವರ, ಪ್ರಾಚಾರ್ಯರು, ಪದವಿ ಕಾಲೇಜು, ರಾಮದುರ್ಗ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.