ಬುಧವಾರ, ಆಗಸ್ಟ್ 10, 2022
20 °C

ಮೂಡಲಗಿ: ಬದುಕು ಕಂಗಾಲಾಗಿಸಿದ ಕೋವಿಡ್‌

ಬಾಲಶೇಖರ ಬಂದಿ Updated:

ಅಕ್ಷರ ಗಾತ್ರ : | |

Prajavani

ಮೂಡಲಗಿ (ಬೆಳಗಾವಿ ಜಿಲ್ಲೆ): ಕಂಪ್ಯೂಟರ್ ಕೇಂದ್ರ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದ ತಾಲ್ಲೂಕಿನ ಹೊನಕುಪ್ಪಿ ಗ್ರಾಮದ 34 ವಯಸ್ಸಿನ ಸೈಯದಸಾಬ ಮಹ್ಮದಸಾಬ ನದಾಫ್ ಕೋವಿಡ್‌–19ಗೆ ಬಲಿಯಾಗಿದ್ದು, ವಯಸ್ಸಾದ ತಾಯಿ, ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳ ಕುಟುಂಬವು ಅತಂತ್ರದ ಸ್ಥಿತಿಯಲ್ಲಿದೆ.

ಮೂರು ವಾರದ ಹಿಂದೆ ಕೊರೊನಾ ಸೋಂಕು ದೃಢಪಟ್ಟಿದ್ದು ಖಾತ್ರಿ ಮಾಡಿಕೊಂಡು ಗೋಕಾಕ ಖಾಸಗಿ ಆಸ್ಪತ್ರೆಯ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಒಂದು ವಾರದವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗೆಳೆಯರೆಲ್ಲ ಸೇರಿ ಸೈಯದ್ ಅವರನ್ನು ಉಳಿಸಿಕೊಳ್ಳಲು ತಾವೇ ಆಸ್ಪತ್ರೆಯ ಖರ್ಚು ನೋಡಿಕೊಂಡು ಹರಸಾಹಸ ಮಾಡಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೈಯದ್‌ಸಾಬ ಅವರು ಕೊರೊನಾಕ್ಕೆ ಬಲಿಯಾಗಬೇಕಾಯಿತು.

‘ಕೆಮ್ಮು ಜ್ವರ ಕಾಣಿಸಿಕೊಂಡಿತರೀ, ದವಾಖಾನಿಗೆ ತೋರಿಸಿ ಗುಳಿಗೆ, ಔಷಧಿ ಎಲ್ಲಾ ಮಾಡಿದ್ದರು. ಒಂದು ವಾರದಾಗ ಕೊರೊನಾ ನನ್ನ ಗಂಡನ್ನ ಜೀವಾ ತಗೋಂತರೀ, ಮರಳಿ ಮನಿಗೆ ಬರಲಿಲ್ಲರೀ‘ ಎಂದು ಪತ್ನಿ ಮಮತಾಜ ದುಃಖ ತೋಡಿಕೊಂಡರು. ವಯಸ್ಸಾದ ಅತ್ತೆ ಜೈನಾಭಿ, 3 ವರ್ಷದ ಸಾನಿಯಾ ಮತ್ತು 3 ತಿಂಗಳ ಸನಹಾ ಎರಡು ಹೆಣ್ಮಕ್ಕಳಿದ್ದು ಕುಟುಂಬದ ನಿರ್ವಹಣೆಯ ಜವಾಬ್ದಾರಿ ಸದ್ಯ ಮಮತಾಜಳದಾಗಿದೆ.

ಸೈಯದಸಾಬ ಜೀವನ ನರ್ವಹಣೆಗಾಗಿ ಊರಲ್ಲಿ ಕಂಪ್ಯೂಟರ್‌ ಕೇಂದ್ರ ತೆರೆಯಲು ಮಾಡಿದ್ದ ಸಾಲ ಮತ್ತು ಮನೆಕಟ್ಟಿಕೊಳ್ಳಲು ಮಾಡಿಕೊಂಡಿದ್ದ ಸಾಲ ಒಟ್ಟು ₹ 12 ಲಕ್ಷದಷ್ಟು ಬೇರೆ, ಬೇರೆ ಬ್ಯಾಂಕ್‌ಗಳಲ್ಲಿ ಸಾಲದ ಹೊರೆ ಇದೆ. ‘ಗಂಡನ ನಿಧನದಿಂದ ಆಕಾಶ ಕಳಚಿ ಬಿದ್ದಂತಾಗಿದೆ, ಎರಡು ಹೆಣ್ಣು ಮಕ್ಕಳನ್ನು ಸಾಕಬೇಕು’ ಎಂದು ಮಮತಾಜ ಕಣ್ಣೀರಾದಳು.

ಬಡತನದಲ್ಲೂ ಬದುಕನ್ನು ಗೆಲ್ಲುವ ಆತ್ಮವಿಶ್ವಾಸವನ್ನು ಹೊಂದಿದ್ದ ಸೈಯಸಾಬ ನದಾಫನಂತಹ ಅದೆಷ್ಟೋ ಅಮಾಯಕರ ಬದುಕಿನಲ್ಲಿ ಕೋವಿಡ್ 19 ತನ್ನ ಅಟ್ಟಹಾಸ ಮೆರೆದಿದೆ. ಸೈಯದ ಸಾವು ಕುಟುಂಬಕ್ಕೆ ಅಷ್ಟೇ ಅಲ್ಲ ಅವರ ಗೆಳೆಯ ವೃಂದಕ್ಕೂ ದುಃಖ ತಂದಿದೆ. ಎಲ್ಲ ಸಮಾಜದ ಗೆಳೆಯರನ್ನು ಹೊಂದಿದ್ದ ಅವರ ಗೆಳೆಯರು ಅವರ ಕುಟಂಬಕ್ಕೆ ಆಸರೆಗಾಗಿ ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ಮತ್ತು ದಾನಿಗಳ ಸಹಾಯವನ್ನು ಕೇಳುತ್ತಿದ್ದಾರೆ. ಸಂಪರ್ಕ ಮೊ.8618144940.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು