ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಸಿ ಕೃಷಿ‘ಯಲ್ಲಿ ಖುಷಿ: ಹೊಸ ಕಾದರವಳ್ಳಿ ರೈತ ಶಿವಾನಂದ ಹೊಸ ಹೆಜ್ಜೆ

ಹೊಸ ಕಾದರವಳ್ಳಿ ರೈತ ಶಿವಾನಂದ ಹೊಸ ಹೆಜ್ಜೆ
Last Updated 19 ಮೇ 2022, 13:11 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ವಿವಿಧ ಸಸಿಗಳನ್ನು ಪುಟ್ಟ ಟ್ರೇನಲ್ಲಿ ಬೆಳೆಸಿ ಮಾರುವ ಮೂಲಕ ತಾಲ್ಲೂಕಿನ ಹೊಸ ಕಾದರವಳ್ಳಿ ರೈತ ಶಿವಾನಂದ ಮಾರಿಹಾಳ ಆದಾಯ ಕಾಣುತ್ತಿದ್ದಾರೆ.

ಇದಕ್ಕಾಗಿ 25 ಗುಂಟೆ ಜಮೀನು ಬಳಸಿಕೊಂಡು ‘ಪಾಲಿಹೌಸ್’ ನಿರ್ಮಿಸಿದ್ದಾರೆ. ವಿಶಾಲ ‘ಬಿಳಿಹೊದಿಕೆ ಮನೆ’ಯಲ್ಲಿ ವೈವಿಧ್ಯಮಯ ಸಸಿಗಳ ಬೀಜಗಳನ್ನು ನಾಟಿ ಮಾಡಿ ಬೆಳೆಸಿ ಮಾರುತ್ತಾರೆ. ಈ ಭಾಗದಲ್ಲಿ ಇಂಥ ಸಸಿ ನಾಟಿ ಮಾಡುವ ವಿಧಾನಕ್ಕೆ ಹೆಚ್ಚು ರೈತರು ಮಾರು ಹೋಗುತ್ತಿದ್ದಾರೆ. ಸ್ವತಃ ಪ್ಯಾಕೆಟ್‌ ಬೀಜಗಳನ್ನು ಮಡಿಗಳಲ್ಲಿ ಬಿತ್ತನೆ ಮಾಡಿ ಸಸಿ ಬೆಳೆಸುವ ವಿಚಾರಕ್ಕೆ ಹೆಚ್ಚಿನ ಸಂಖ್ಯೆಯ ಅನ್ನದಾತರು ವಿದಾಯ ಹೇಳಿದ್ದರಿಂದ ಈ ‘ತರುವು’ (ಸಸಿ) ಬೆಳೆಗೆ ಹೆಚ್ಚಿನ ಬೇಡಿಕೆ ಬಂದಿದೆ ಎನ್ನುತ್ತಾರೆ ಕೃಷಿಕರು.

ಪುಟ್ಟ ಗದ್ದೆ ಬೆಳೆಗೆ ವಿದಾಯ

ದಶಕದ ಹಿಂದೆ ಟೊಮೆಟೊ, ಮೆಣಸಿನಕಾಯಿ ಸೇರಿ ಕೆಲ ತೋಟಗಾರಿಕೆ ಬೆಳೆ ಬೆಳೆಯಬೇಕೆಂದರೆ ಮನೆಯಲ್ಲಿ ಸಂಗ್ರಹಿಸಿಟ್ಟ ಬೀಜಗಳನ್ನು ಅಥವಾ ಕೃಷಿ ಮಾರಾಟ ಮಳಿಗೆಯಲ್ಲಿ ಸಿಗುವ ಪಾಕೆಟ್ ಬೀಜಗಳನ್ನು ತಂದು ಗದ್ದೆ ಬದುವಿನ ಬಳಿ ಚಿಕ್ಕ ಮಡಿಗಳನ್ನು ಮಾಡಿ ಹಾಕುತ್ತಿದ್ದರು. ಕೃಷಿಯಲ್ಲಿ ಯಂತ್ರಗಳ ಬಳಕೆ ಹೆ‌ಚ್ಚಿದ ನಂತರ ಭಾಗಶಃ ರೈತರು ತೋಟಗಾರಿಕೆ ಬೆಳೆಗಳ ಬೀಜಗಳನ್ನು ಮಡಿಯಲ್ಲಿ ಬಿತ್ತನೆ ಮಾಡಿ ಸಸಿ ಮಾಡುವ ಕಾರ್ಯವಿಧಾನ ಕೈಬಿಟ್ಟಿರುವುದು ಕಂಡುಬರುತ್ತಿದೆ.

ಈಗೆಲ್ಲ ಕಬ್ಬು ಕೃಷಿಯಲ್ಲೂ ಹಲವರು ಸಸಿಯನ್ನೇ ನೆಡುವ ಪದ್ಧತಿಗೆ ಮಾರು ಹೋಗಿದ್ದಾರೆ. ಕಬ್ಬಿನ ಬೀಜ ನಾಟಿ ಮಾಡುವುದು ಕೂಡ ಅನೇಕ ಕಡೆಗಳಲ್ಲಿ ಕಡಿಮೆ ಆಗುತ್ತಿದೆ ಎನ್ನುತ್ತಾರೆ ರೈತರು.

ಸಸಿ ಮಾರಾಟಕ್ಕೆ ಒಲವು

ರೈತರು ಮಡಿಗಳಲ್ಲಿ ನಾಟಿ ಮಾಡುವ ವಿಧಾನದಿಂದ ದೂರ ಉಳಿದ ಬಳಿಕ ವಿವಿಧ ಬೆಳೆಗಳ ತರುವು ಮಾರಾಟದ ಪಾಲಿಹೌಸ್‌ಗಳು ಅಲ್ಲಲ್ಲಿ ತಲೆ ಎತ್ತಿವೆ.

ಹೊಸ ಕಾದರವಳ್ಳಿ ರೈತ ಶಿವಾನಂದ ಮಾರಿಹಾಳ ಅವರು ₹ 12 ಲಕ್ಷ ಅಂದಾಜು ವೆಚ್ಚದಲ್ಲಿ ಸ್ವತಃ ಪಾಲಿಹೌಸ್ ನಿರ್ಮಿಸಿ ಸಸಿ ಕೃಷಿಗೆ ಮುಂದಾಗಿದ್ದಾರೆ. ಮೆಣಸಿನಕಾಯಿ, ಎಲೆಕೋಸು, ದಪ್ಪಮೆಣಸಿನಕಾಯಿ, ಟೊಮೆಟೊ, ಬದನೆ, ವಿವಿಧ ತಳಿಗಳ ಕಬ್ಬು ಸಸಿಗಳನ್ನು ಈ ಪಾಲಿಹೌಸ್‌ನಲ್ಲಿ ಬೆಳೆಯುತ್ತಿದ್ದಾರೆ. ನಿತ್ಯವೂ ಐದಾರು ಕೃಷಿ ಕಾರ್ಮಿಕರು ದುಡಿಯುತ್ತಿದ್ದಾರೆ. ವರ್ಷಕ್ಕೆ ಮೂರ್ನಾಲ್ಕು ಲಕ್ಷ ರೂಪಾಯಿ ಆದಾಯ ಬರುತ್ತಿದೆ ಎಂದು ಶಿವಾನಂದ ತಿಳಿಸಿದರು.

ಹೊಸ ಕಾದರವಳ್ಳಿ- ರಾಣಿ ಶುಗರ್ಸ್‌ ದಾರಿಯಲ್ಲಿರುವ ಪಾಲಿಹೌಸ್‌ಗೆ ಬಂದರೆ ತೋಟಗಾರಿಕೆ ಬೆಳೆಗಳ ಸಸಿಗಳು ಸಿಗುತ್ತವೆ. ಹೆಚ್ಚಿನ ಬೇಡಿಕೆ ಇದ್ದರೆ ಮನೆ ಬಾಗಿಲಿಗೂ ಪೂರೈಸುತ್ತೇವೆ. ಸಾಗಣೆ ವೆಚ್ಚವನ್ನು ರೈತರು ಭರಿಸಬೇಕು ಎನ್ನುತ್ತಾರೆ ಅವರು.

ಟ್ರೇ ಬಳಕೆ

ವಿವಿಧ ಸಸಿ ಬೆಳೆಸಲು ಅವರು ಟ್ರೇ ಬಳಸುತ್ತಾರೆ. ಸ್ವಲ್ಪ ದೊಡ್ಡ ಗಾತ್ರದ ರಂದ್ರಗಳಿರುವ ಟ್ರೇ ಜಾಗದಲ್ಲಿ ‘ಕೊಕೊ ಫೀಡ್‌’ ಗೊಬ್ಬರ ಹಾಕಿ ಬೀಜ ಬಿತ್ತನೆ ಮಾಡಲಾಗುತ್ತದೆ. ಕೆಲವು ಸಸಿಗಳಾಗಲು 30ರಿಂದ 40 ದಿನ ತೆಗೆದುಕೊಳ್ಳುತ್ತವೆ. ಸುಧಾರಿತ ಪದ್ಧತಿಯಲ್ಲಿ ಅವುಗಳನ್ನು ಬೆಳೆಸುತ್ತವೆ. ನಾಟಿ ಮಾಡಿದ ಸಸಿಗಳು ಹೆಚ್ಚಿನ ಇಳುವರಿಯನ್ನೂ ತರುತ್ತವೆ’ ಎಂದು ಮಾಹಿತಿ ನೀಡಿದರು. ಸಂಪರ್ಕಕ್ಕೆ ಮೊ.ಸಂಖ್ಯೆ:7829752717.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT