ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಸಾವಯವ ಕೃಷಿಗೆ ದೇವಪ್ಪ ಜೈ

ಕುಕಡೊಳ್ಳಿಯಲ್ಲೊಂದು ಪ್ರಗತಿಪರ ರೈತ ಕುಟುಂಬ
Last Updated 6 ಜನವರಿ 2020, 15:11 IST
ಅಕ್ಷರ ಗಾತ್ರ

ಎಂ.ಕೆ. ಹುಬ್ಬಳ್ಳಿ: ಬೆಳಗಾವಿ ತಾಲ್ಲೂಕಿನ ಕುಕಡೊಳ್ಳಿ ಗ್ರಾಮದ ಪ್ರಗತಿಪರ ರೈತರೊಬ್ಬರು ಸಾವಯವ ಕೃಷಿಗೆ ಜೈ ಎಂದಿದ್ದಾರೆ.

ದಶಕದಿಂದ ಸಾವಯವ ಕೃಷಿಯಲ್ಲಿ ತೊಡಗಿರುವ ರೈತ ದೇವಪ್ಪ ಶಿವಪ್ಪ ಕಡಕಳಿ, ತಮ್ಮ 4.2 ಎಕರೆಯ ಪೈಕಿ 2 ಎಕರೆಗೂ ಹೆಚ್ಚಿನ ಜಮೀನಿನಲ್ಲಿ ಸಾವಯವ ಕೃಷಿ ಮಾಡುತ್ತಿದ್ದಾರೆ. ಶೇಂಗಾ, ಜೋಳ, ಸೋಯಾಬಿನ್ ಹಾಗೂ ತೋಟಗಾರಿಕಾ ಬೆಳೆಯಾದ ಸೌತೆ, ಬೆಂಡೆಕಾಯಿ ಬೆಳೆಯನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿದ್ದಾರೆ. ಉಳಿದ 2 ಎಕರೆಯಲ್ಲಿ ಭತ್ತ ಹಾಕಿದ್ದಾರೆ.

10 ವರ್ಷಗಳ ಹಿಂದೆ ಗ್ರಾಮದಲ್ಲಿ ಕೃಷಿ ಇಲಾಖೆ ನಡೆಸಿದ ಸಾವಯವ ಕೃಷಿ ಪದ್ಧತಿ ತರಬೇತಿಯಿಂದ ಆಕರ್ಷಿತರಾಗಿ, ಸಾವಯವ ಕೃಷಿಯಿಂದ ಆಗುವ ಲಾಭಕ್ಕೆ ಮನಸೋತಿದ್ದಾರೆ. ಆ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಮೂರು ದಿನಗಳು ನಡೆದ ತರಬೇತಿಯಲ್ಲಿ ಕೃಷಿ ತಜ್ಞರಿಂದ ಎರೆಹುಳು, ಸಾವಯವ ಕೃಷಿ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡು ಬಂದಿದ್ದಾರೆ. ಪ್ರಗತಿಪರ ರೈತರಾಗಿ ಹೊರಹೊಮ್ಮಿ ಗಮನಸೆಳೆದಿದ್ದಾರೆ. ಇತರರಿಗೆ ಮಾದರಿಯಾಗಿದ್ದಾರೆ.

ಜಮೀನಿನಲ್ಲಿರುವ ಬೋರ್‌ವೆಲ್‌ನಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ಪರ್ಯಾಯ ಮಾರ್ಗವಾಗಿ 6 ವರ್ಷಗಳ ಹಿಂದೆ ಸರ್ಕಾರದ ಸಹಾಯ ಪಡೆದು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ತೊಟ್ಟಿ ನಿರ್ಮಿಸಿ ಅಲ್ಲಿ ಎರೆಹುಳು ಗೊಬ್ಬರ ತಯಾರಿಸುತ್ತಿದ್ದಾರೆ. ಕೃಷಿ ಇಲಾಖೆಯಿಂದ ಎರೆಹುಳು ತಯಾರಿಕೆಗೆ ತೊಟ್ಟಿ ನಿರ್ಮಿಸಿಕೊಡು ಎನ್ನುವುದು ಅವರ ಮನವಿಯಾಗಿದೆ. ಆಕಳು, ಎಮ್ಮೆ, ಕರು ಸೇರಿ ಒಟ್ಟು 5 ಜಾನುವಾರು ಸಾಕುತ್ತಿದ್ದಾರೆ. ಅವುಗಳಿಂದ ಸಿಗುವ ಸಗಣಿಯಿಂದ ಗೊಬ್ಬರ ತಯಾರಿಸಿ ಭೂಮಿಗೆ ನೀಡುತ್ತಿದ್ದಾರೆ. ಉತ್ತಮ ಇಳವರಿ ಪಡೆದು ವರಮಾನ ಗಳಿಸುತ್ತಿದ್ದಾರೆ.

ಪ್ರಮಾಣಪತ್ರ ಬೇಕು

‘ರಾಸಾಯನಿಕ ಬೆಳೆಗಳ ಅಬ್ಬರದ ನಡುವೆಯೂ ಸಾವಯವ ಕೃಷಿಯ ಉತ್ಪನ್ನಗಳಿಗೆ ಬೇಡಿಕೆಯಿದೆ. ಆದರೆ, ನಮಗೆ ಕೃಷಿ ಇಲಾಖೆಯಿಂದ ಪ್ರಮಾಣಪತ್ರ ಸಿಗದ ಕಾರಣ ಸೂಕ್ತ ಬೆಲೆ ದೊರೆಯುತ್ತಿಲ್ಲ. ಪ್ರಮಾಣಪತ್ರಕ್ಕಾಗಿ ಅಲೆದಾಡಿದ್ದೇವೆ. ಆದಷ್ಟು ಬೇಗ ಕೃಷಿ ಇಲಾಖೆ ಅಧಿಕಾರಿಗಳು ಸ್ಪಂದಿಸಿ, ಪ್ರಮಾಣಪತ್ರ ನೀಡಬೇಕು’ ಎನ್ನುವುದು ಅವರ ಮನವಿ.

‘10 ವರ್ಷಗಳಿಂದ ಸಾವಯುವ ಕೃಷಿಯಲ್ಲಿ ತೊಡಗಿದ್ದೇನೆ. ಕುಟುಂಬವೆಲ್ಲಾ ಸಹಕಾರ ನೀಡುತ್ತಿದೆ. ಮನೆಗೆ ಬೇಕಾದ ಬಹುಪಾಲು ಆಹಾರ ಧಾನ್ಯ, ತರಕಾರಿಯನ್ನು ಇಲ್ಲೇ ಬೆಳೆದುಕೊಳ್ಳುತ್ತೇವೆ. ಇದರಿಂದ ಆರೋಗ್ಯ ಕಾಪಾಡಿಕೊಳ್ಳುವುದು ಸಾಧ್ಯವಾಗಿದೆ. ಆಸ್ಪತ್ರೆಗೆ ಹೋಗುವುದು ಕಡಿಮೆಯಾಗಿದೆ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಅವರು.

ಅವರಿಗೆ ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ. ಕಿರಿಯ ಮಗ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಾರೆ. ಹಿರಿಯ ಪುತ್ರ‌ ನಾಗರಾಜ ಪಿಯುಸಿ ವಿಜ್ಞಾನ ಮಾಡಿ, ತಂದೆಯೊಂದಿಗೆ ಸಾವಯವ ಕೃಷಿಯತ್ತ ಮುಖ ಮಾಡಿದ್ದಾರೆ. ಉಳಿದ 2 ಎಕರೆಯಲ್ಲೂ ಸಾವಯವ ಕೃಷಿಗೆ ಯೋಜಿಸಿದ್ದಾರೆ. ಆಸಕ್ತರು ಮಾಹಿತಿಗೆ ಮೊ: 9611000231 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT