ಗುರುವಾರ , ಆಗಸ್ಟ್ 18, 2022
23 °C
ಕಿತ್ತೂರು ಖಾಸಗಿ ವೈದ್ಯರ ಮಾದರಿ ಕಾರ್ಯ

ಕೋವಿಡೇತರ ರೋಗಿಗಳಿಗೆ ಉಚಿತ ಚಿಕಿತ್ಸೆ, ಔಷಧ: ಕಿತ್ತೂರು ಖಾಸಗಿ ವೈದ್ಯರ ಮಾದರಿ ನಡೆ

ಪ್ರದೀಪ ಮೇಲಿನಮನಿ Updated:

ಅಕ್ಷರ ಗಾತ್ರ : | |

Prajavani

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ನೆಗಡಿ, ಜ್ವರ ಬಂದರೆ ದವಾಖಾನೆಗೆ ಹೋಗಲು ಹೆದರಿಕೆ ಆಗ್ತಾ ಇದೆ. ಎಲ್ಲಿ ಕೊರೊನಾ ಎಂದು ಹೆಸರಿಟ್ಟು ಬಿಡ್ತಾರೋ ಎಂಬ ಆತಂಕದಲ್ಲಿದ್ದಾರೆ ಸಾಮಾನ್ಯ ಕಾಯಿಲೆಯುಳ್ಳ ನನ್ನಂಥವರು. ಆದರೆ, ನಮ್ಮಂಥ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧ ನೀಡಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ರಾಣಿ ಚನ್ನಮ್ಮ ಗ್ರಾಮೀಣ ವೈದ್ಯರ ಸಂಘದ ಸದಸ್ಯರು ಮಾಡುತ್ತಿದ್ದಾರೆ’ ಎಂದು ಮೆಚ್ಚುಗೆ ಮಾತುಗಳನ್ನಾಡಿದವರು ಈರವ್ವ ಗುಳದಕೊಪ್ಪ.

ಸೋಮವಾರಪೇಟೆಯ ಸರ್ಕಾರಿ ಕ್ಷೇತ್ರ ಮಾದರಿ ಶಾಲೆಯಲ್ಲಿ 14 ಮಂದಿ ಖಾಸಗಿ ವೈದ್ಯರು ಕೋವಿಡೇತರ ರೋಗಿಗಳ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ನಿತ್ಯ ಸರತಿ ಮೇಲೆ ಇಬ್ಬರು ವೈದ್ಯರು ನಾಲ್ಕೂವರೆ ತಾಸು ಇಲ್ಲಿದ್ದುಕೊಂಡು ಉಚಿತವಾಗಿ ಚಿಕಿತ್ಸೆ ನೀಡಿ ಮತ್ತು ಮಾತ್ರೆಗಳನ್ನು ಕೊಡುತ್ತಿದ್ದಾರೆ. ಈ ಸೇವೆಯು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

‘ರೋಗಿಗಳು ಚಿಕಿತ್ಸೆ ಕೇಂದ್ರಕ್ಕೆ ಬಂದರೆ ಮೊದಲು ಅವರ ದೇಹದ ಉಷ್ಣಾಂಶ, ಆಮ್ಲಜನಕದ ಪ್ರಮಾಣ ಹಾಗೂ ಎದೆಯೊಳಗಿನ ಕಫದ ಪರೀಕ್ಷೆ ನಡೆಸಲಾಗುತ್ತದೆ. ಥರ್ಮಲ್ ಸ್ಕ್ಯಾನರ್‌, ಆಕ್ಸಿಮೀಟರ್ ಮತ್ತು ಟೆಥಸ್ಕೋಪ್ ಬಳಸಿ ಈ ಮೂರು ಪರೀಕ್ಷೆ ಮಾಡಲಾಗುತ್ತದೆ’ ಎಂದು ಡಾ.ವೆಂಕಟೇಶ ಉಣಕಲ್ಲಕರ ‘ಪ್ರಜಾವಾಣಿ’ಗೆ ತಿಳಿಸುತ್ತಾರೆ.

‘ಸಹಜ ಸ್ಥಿತಿಯಲ್ಲಿದ್ದರೆ ಉಚಿತ ಔಷಧಿ ಕಿಟ್ ನೀಡಿ ಕಳುಹಿಸಲಾಗುತ್ತದೆ. ದೇಹಸ್ಥಿತಿಯಲ್ಲಿ ಅಸಹಜತೆ ಕಂಡು ಬಂದರೆ ಅಂಥವರನ್ನು ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಹೆಚ್ಚಿನ ಪರೀಕ್ಷೆಗಾಗಿ ಕಳುಹಿಸಿಕೊಡಲಾಗುತ್ತದೆ. ಧಾರವಾಡ ತಾಲ್ಲೂಕಿನ ವೆಂಕಟಾಪುರದ ವ್ಯಕ್ತಿಯೊಬ್ಬರನ್ನು ಹೆಚ್ಚಿನ ಪರೀಕ್ಷೆಗಾಗಿ ಅಲ್ಲಿಗೆ ಕಳುಹಿಸಿಕೊಡಲಾಗಿದೆ’ ಎಂದು ಮಾಹಿತಿ ನೀಡಿದರು.

ದೊಡ್ಡಗೌಡರ ಸಹಾಯ

‘ಶಾಸಕ ಮಹಾಂತೇಶ ದೊಡ್ಡಗೌಡರ ಇಲ್ಲಿನ ವೈದ್ಯರಿಗೆ ಎಲ್ಲ ರೀತಿಯ ನೆರವು ಒದಗಿಸಿಕೊಟ್ಟಿದ್ದಾರೆ. ಕಿತ್ತೂರು ತಾಲ್ಲೂಕಿನಲ್ಲಿ 5ಸಾವಿರ ಔಷಧಿ ಕಿಟ್‌ಗಳನ್ನು ಉಚಿತವಾಗಿ ವಿತರಣೆ ಮಾಡಲು ನೀಡಿದ್ದಾರೆ’ ಎಂದು ಅವರ ಸಹಾಯವನ್ನು ವೆಂಕಟೇಶ್ ಸ್ಮರಿಸಿದರು.

‘ಮಹಾಂತೇಶ ಕಲ್ಮಠ, ಎ.ಎಚ್. ಲಾಡಖಾನ್, ಡಾ.ಬಸವರಾಜ ಪರವಣ್ಣವರ, ಮಹೇಶ ಹಟ್ಟಿಹೊಳಿ ಸೇರಿದಂತೆ 14 ವೈದ್ಯರು ಉಚಿತ ಚಿಕಿತ್ಸೆ ಕೇಂದ್ರಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ’ ಎಂದರು.

ಬುಧವಾರ ಕಿತ್ತೂರಿಗೆ ಭೇಟಿ ನೀಡಿದ್ದ ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರು ಇಲ್ಲಿಯ ವೈದ್ಯರ ಉಚಿತ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು