ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳಾಂತರಗೊಳ್ಳದ ಕಚೇರಿಗಳು: ಯಡಿಯೂರಪ್ಪ ವಿರುದ್ಧ ತೋಂಟದ ಶ್ರೀ ಅಸಮಾಧಾನ

Last Updated 16 ಜುಲೈ 2021, 14:26 IST
ಅಕ್ಷರ ಗಾತ್ರ

ಬೆಳಗಾವಿ: ‘ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ 15 ದಿನಗಳಲ್ಲಿ ಸುವರ್ಣ ವಿಧಾನಸೌಧಕ್ಕೆ ರಾಜ್ಯ ಮಟ್ಟದ ಕಚೇರಿಗಳನ್ನು ಸ್ಥಳಾಂತರಿಸುತ್ತೇವೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದು ಇಷ್ಟು ದಿನಗಳಾದರೂ ಈಡೇರಿಸಿಲ್ಲ’ ಎಂದು ಗದಗದ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಶಿವಬಸವ ನಗರದ ನಾಗನೂರು ರುದ್ರಾಕ್ಷಿ ಮಠದಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಶುಕ್ರವಾರ ಅವರು ಮಾತನಾಡಿದರು.

‘ಸುವರ್ಣ ವಿಧಾನಸೌಧದ ಎದುರು ಈ ಭಾಗದ ಸ್ವಾಮೀಜಿಗಳ ನೇತೃತ್ವದಲ್ಲಿ ಧರಣಿ ನಡೆಯುತ್ತಿದ್ದಾಗ ಸ್ವತಃ ಯಡಿಯೂರಪ್ಪ ಅವರೇ ಬಂದು ಹೋರಾಟಗಾರರಿಂದ ಮನವಿ ಸ್ವೀಕರಿಸಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ಆ ವೇಳೆ ಹೋರಾಟಕ್ಕೆ ನಾವು ಯಡಿಯೂರಪ್ಪ ಅವರನ್ನು ಕರೆದಿರಲಿಲ್ಲ. ಮುಖಂಡ ಅಶೋಕ ಪೂಜಾರಿ ಅವರೇ ಕರೆಸಿದ್ದರು. ಈಗ ಪೂಜಾರಿ ಅವರನ್ನೇ ಕೇಳಬೇಕಾಗಿದೆ’ ಎಂದು ಖಾರವಾಗಿ ಹೇಳಿದರು.

‘ಮುಂಬೈ ಕರ್ನಾಟಕದ ಜಿಲ್ಲೆಗಳನ್ನು ಸೇರಿಸಿ ‘ಕಿತ್ತೂರು ಕರ್ನಾಟಕ’ ಎಂದು ನಾಮಕರಣ ಮಾಡುವಂತೆ ಒತ್ತಾಯಿಸುತ್ತಲೇ ಬಂದಿದ್ದೇವೆ. ಅದನ್ನೂ ಘೋಷಿಸಿಲ್ಲ. ಇದಕ್ಕೆ ಹಣವೇನೂ ಬೇಕಾಗುವುದಿಲ್ಲ. ಸರ್ಕಾರದ ಆದೇಶ ಮಾತ್ರವೇ ಬೇಕಾಗುತ್ತದೆ. ಇದನ್ನೂ ಮಾಡಿಲ್ಲ’ ಎಂದರು.

‘ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಿದರೆ ಮುಂದಿನ ಚುನಾವಣೆಗಳಲ್ಲಿ ಜನರು ಸರಿಯಾದ ತಿಳಿವಳಿಕೆ ನೀಡುತ್ತಾರೆ ಎಂದು ಹಿಂದೆಯೇ ಎಚ್ಚರಿಸಿದ್ದರೂ ಈ ಭಾಗದ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ’ ಎಂದು ವಿಷಾದಿಸಿದರು.

‘ಇಲ್ಲಿಗೆ ರಾಜ್ಯಮಟ್ಟದ ಕಚೇರಿಗಳು ಬರುವುದು ಎಷ್ಟು ಮಹತ್ವದ್ದು ಎನ್ನುವ ಅರಿವು ಸರ್ಕಾರಕ್ಕೆ ಆಗಬೇಕು’ ಎಂದರು.

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎನ್ನುವುದು ಅರ್ಥಹೀನ. ಬಹಳಷ್ಟು ಹಿರಿಯರು ಕಷ್ಟಪಟ್ಟು ಹೋರಾಡಿ ಅಖಂಡ ಕರ್ನಾಟಕ ಮಾಡಿದ್ದಾರೆ. ಹೀಗಾಗಿ ಅಖಂಡವಾಗಿದ್ದುಕೊಂಡೇ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಡಬೇಕು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT